ಬಿಸಿಯೂಟ ಸೇವನೆಯಿಂದ ಅಸ್ವಸ್ಥಗೊಂಡ ಮಕ್ಕಳ ಭೇಟಿಯಾದ ತಜ್ಞ ವೈದ್ಯರ ತಂಡ
ಚಿತ್ರದುರ್ಗ ಡಿ. 29 : ತಾಲ್ಲೂಕಿನ ಬೀರಾವರ ಗ್ರಾಮದಲ್ಲಿ ಈಚೆಗೆ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಎಲ್ಲಾ ಮಕ್ಕಳನ್ನು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹಾಗೂ ಮಕ್ಕಳ ತಜ್ಞ ವೈದ್ಯರ ತಂಡವು ಶುಕ್ರವಾರ ಭೇಟಿ ಮಾಡಿ ಪರೀಕ್ಷೆಗೊಳಪಡಿಸಿದರು.
ಬೀರಾವರ ಗ್ರಾಮದಲ್ಲಿ ಶಾಲಾ ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ 38 ಮಕ್ಕಳಲ್ಲಿ ಈಗಾಗಲೇ 37 ಮಕ್ಕಳು ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ. ಒಬ್ಬರು ಮಾತ್ರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಸ್ವಸ್ಥಗೊಂಡ ಮಕ್ಕಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾ.ಬಿ.ವಿ.ಗಿರೀಶ್ ತಿಳಿಸಿದರು.
ಮಕ್ಕಳ ತಜ್ಞ ಡಾ.ತಿಮ್ಮೇಗೌಡ ಅವರು ಜಿಲ್ಲಾ ಆಸ್ಪತ್ರೆಯಿಂದ ಮನೆಗೆ ತೆರಳಿದ ಎಲ್ಲಾ ಮಕ್ಕಳನ್ನು ಪರೀಕ್ಷೆ ಮಾಡುವುದರ ಮುಖಾಂತರ ಸೂಕ್ತ ಚಿಕಿತ್ಸೆ ನೀಡಿ ಮಾತನಾಡಿದ ಅವರು, ಯಾವುದೇ ಮಕ್ಕಳು ಅಥವಾ ಪೆÇೀಷಕರು ಗಾಬರಿ ಅಥವಾ ಆತಂಕಪಡುವ ಅವಶ್ಯಕತೆ ಇಲ್ಲ. ಪಡೆದ ಔಷಧಿಯನ್ನು ಸರಿಯಾಗಿ ಸೇವನೆ ಮಾಡುವುದರ ಮುಖಾಂತರ ಸ್ವಚ್ಛತೆ ಕಡೆಗೆ ಆದ್ಯತೆ ನೀಡಿ, ಸರಿಯಾಗಿ ಔಷಧಿಯನ್ನು ಸೇವಿಸಿ ಎಲ್ಲರೂ ಆರೋಗ್ಯವಾಗಿರಿ, ಯಾವುದೇ ಅಡ್ಡಿ ಆತಂಕ ಬರುವುದಿಲ್ಲ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ವಾತಾವರಣಕ್ಕೆ ತಕ್ಕಂತೆ ನಾವುಗಳು ಹೊಂದಿಕೊಂಡು, ದ್ರವರೂಪದ ಆಹಾರ ಸೇವನೆ, ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನದೇ ಆಗಾಗ್ಗೆ ಕೈ ತೊಳೆಯುವ ಮುಖಾಂತರ ಉತ್ತಮ ಆರೋಗ್ಯ ಹೊಂದಬಹುದು ಎಂದರು.
ಈ ಸಂದರ್ಭದಲ್ಲಿ ಐನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ, ಮಾಜಿ ಅಧ್ಯಕ್ಷ ಚಂದ್ರಶೇಖರಪ್ಪ, ಸದಸ್ಯರಾದ ರೂಪ ಅಜಯ್, ಲಕ್ಷ್ಮಿಸಾಗರ ವಿಜಾಪುರ ಆಡಳಿತ ವೈದ್ಯಾಧಿಕಾರಿ ಡಾ.ಜಯಶ್ರೀ, ಎಸ್‍ಡಿಎಂಸಿ ಅಧ್ಯಕ್ಷ ಸಿದ್ದೇಶ್, ಮುಖ್ಯ ಶಿಕ್ಷಕ ಶಿವಕುಮಾರ್, ಸಹ ಶಿಕ್ಷಕರು, ಗ್ರಾಮಸ್ಥರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.