ರಣಾಂಗಣವಾದ ಕ್ರೀಡಾಂಗಣ | ಅಭಿಮಾನಿಗಳ ನಡುವೆ ಘರ್ಷಣೆ : 100ಕ್ಕೂ ಹೆಚ್ಚು ಮಂದಿ ಸಾವು
ಸುದ್ದಿಒನ್ | ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ನಡೆದ ಘರ್ಷಣೆಯಲ್ಲಿ ನೂರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪಶ್ಚಿಮ ಆಫ್ರಿಕಾದ ಗಿನಿಯಾದಲ್ಲಿ ಅತ್ಯಂತ ದಾರುಣ ಘಟನೆ ನಡೆದಿದೆ. ಪಂದ್ಯದ ವೇಳೆ ಅಭಿಮಾನಿಗಳ ನಡುವೆ ವಾಗ್ವಾದ ನಡೆದು ಘರ್ಷಣೆಗೆ ಕಾರಣವಾಯಿತು. ಪರಸ್ಪರ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ 100 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ. ಉಭಯ ತಂಡಗಳ ಅಭಿಮಾನಿಗಳ ನಡುವೆ ಸಣ್ಣದಾಗಿ ಆರಂಭವಾದ ಜಗಳ ಕ್ರಮೇಣ ತೀವ್ರ ಸ್ವರೂಪಕ್ಕೆ ತಿರುಗಿತು. ಪಂದ್ಯಕ್ಕೆ ಆಗಮಿಸಿದ್ದ ಪ್ರೇಕ್ಷಕರು ಎರಡು ಬಣಗಳಾಗಿ ಒಡೆದು ಪರಸ್ಪರ ಹಲ್ಲೆ ನಡೆಸಿದ್ದಾರೆ.
ಗಿನಿಯಾದ ಮಿಲಿಟರಿ ಜುಂಟಾದ ನಾಯಕ ಮಮಡಿ ಡೌಂಬೋಯಾ ಅವರ ಗೌರವಾರ್ಥವಾಗಿ ಜೆರೆಕೋರ್ ನಗರದಲ್ಲಿ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಭಾನುವಾರ ಪಂದ್ಯದ ಮಧ್ಯದಲ್ಲಿ ರೆಫರಿ ತೆಗೆದುಕೊಂಡ ನಿರ್ಧಾರ ವಿವಾದಕ್ಕೀಡಾಗಿತ್ತು. ಇದನ್ನು ವಿರೋಧಿಸಿದ ತಂಡದ ಅಭಿಮಾನಿಗಳು ಮೈದಾನಕ್ಕೆ ನುಗ್ಗಿದರು. ಈ ವೇಳೆ ಇತರ ತಂಡದ ಅಭಿಮಾನಿಗಳು ಅವರನ್ನು ತಡೆದಿದ್ದರಿಂದ ಮಾತಿನ ಚಕಮಕಿ ನಡೆಯಿತು. ಸಾವಿರಾರು ಅಭಿಮಾನಿಗಳು ಪರಸ್ಪರ ಹಲ್ಲೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಉದ್ರಿಕ್ತರು ಸ್ಥಳೀಯ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು. ಈ ಹಿಂಸಾತ್ಮಕ ಘರ್ಷಣೆಗಳಲ್ಲಿ ನೂರಕ್ಕೂ ಹೆಚ್ಚು ಜನರು ಸಾವನ್ನಪ್ಪಿದರೆ ಅನೇಕರು ಗಂಭೀರವಾಗಿ ಗಾಯಗೊಂಡರು. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘರ್ಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ಎಲ್ಲರನ್ನು ಬೆಚ್ಚಿ ಬೀಳಿಸುವಂತಿದೆ. ನೂರಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವೈದ್ಯರು ತಿಳಿಸಿದ್ದಾರೆ.
ಇದೇ ವೇಳೆ ಈ ಹಿಂದೆಯೂ ಅಭಿಮಾನಿಗಳು ಘರ್ಷಣೆ ನಡೆಸಿ ಹಲ್ಲೆ ನಡೆಸಿದ ಘಟನೆಗಳು ನಡೆದಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪಂದ್ಯದ ಮಧ್ಯದಲ್ಲಿ ಅಭಿಮಾನಿಗಳು ಹೊಡೆದಿದ್ದರು. ಆ ವೇಳೆ ಈ ವಿಡಿಯೋ ವೈರಲ್ ಆಗಿತ್ತು.