SSLC ವಿದ್ಯಾರ್ಥಿಗಳಿಂದ 50 ರೂ. ವಸೂಲಿಗೆ ಹೆಚ್ಡಿಕೆ ಕಿಡಿ: ಬಿಜೆಪಿಯೇ ತಂದ ಆದೇಶವಾ..? ಇಲಾಖೆ ಹೇಳಿದ್ದೇನು..?
ಬೆಂಗಳೂರು: ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಶಿಕ್ಷಣ ಇಲಾಖೆಯ ಮೇಲೆ ಆಕ್ರೋಶ ಹೊರ ಹಾಕಿದ್ದರು. ಎಸ್ಎಸ್ಎಲ್ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಪ್ರತಿಯೊಬ್ಬ ವಿದ್ಯಾರ್ಥಿಯಿಂದ 50 ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಶಿಕ್ಷಣ ಇಲಾಖೆಯ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇದೀಗ ಶಿಕ್ಷಣ ಇಲಾಖೆ ಅದಕ್ಕೆ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳಿಂದ ಹಣ ಸಂಗ್ರಹ ಮಾಡುವುದಕ್ಕೆ 2023ರ ಫೆಬ್ರವರಿಯಲ್ಲಿ ಸರ್ಕಾರವೇ ಆದೇಶ ಹೊರಡಿಸಿತ್ತು. ಆ ಆದೇಶವನ್ನು ಪಾಲಿಸುತ್ತಿದ್ದೀವಿ. ಕಳೆದ 4 ವರ್ಷಗಳಿಂದ ಈ ಶುಲ್ಕ ಇದೆ. ಪರೀಕ್ಷಾ ಖರ್ಚು ಭರಿಸಲು ಈ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಬಿಜೆಪಿ ಸರ್ಕಾರವಿದ್ದಾಗಲೇ ಈ ರೀತಿಯ ಆದೇಶ ಬಂದಿದೆ ಎಂದು ತಿಳಿಸಿದ್ದಾರೆ.
ಇದೇ ವಿಚಾರವಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದು, 50 ರೂಪಾಯಿ ತೆಗೆದುಕೊಳ್ಳುವ ನಿಯಮ ಮಾಡಿದ್ದು ಬಿಜೆಪಿಯವರೇ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಜಾರಿ ಮಾಡಿದ್ದು. ಹೆಚ್.ಡಿ.ಕುಮಾರಸ್ವಾಮಿ ಮೊದಲು ಬಿಜೆಪಿಯವರನ್ನು ಪ್ರಶ್ನೆ ಮಾಡಲಿ 2 ಸಾವಿರ ರೂ. ಜೆಡಿಎಸ್, ಬಿಜೆಪಿಯವರೇ ಪಡೆಯುತ್ತಿದ್ದಾರೆ ಅಲ್ವಾ. ಬಿಜೆಪಿ, ಜೆಡಿಎಸ್ನವರಿಗೆ ಜಾಸ್ತಿ ಗ್ಯಾರಂಟಿ ಹೋಗ್ತಿರೋದು. ಅದರ ಬಗ್ಗೆ ಚರ್ಚೆ ಮಾಡಲು ಹೆಚ್.ಡಿ.ಕುಮಾರಸ್ವಾಮಿಗೆ ಕೇಳುತ್ತೇನೆ ಎಂದಿದ್ದಾರೆ.