ಕೊರೊನಾ ಸಮಯದಲ್ಲಿ 40 ಸಾವಿರ ಕೋಟಿ ಅವ್ಯವಹಾರ : ಮೋದಿಗೂ ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ನಿನ್ನೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮದೇ ಪಕ್ಷದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದರು. ಕೊರೊನಾ ಸಮಯದಲ್ಲಿ 40 ಸಾವಿರ ಕೋಟಿ ಭ್ರಷ್ಟಾಚಾರವಾಗಿರುವ ಬಗ್ಗೆ ತಿಳಿಸಿದ್ದರು. ಇದೀಗ ಆ ಬಗ್ಗೆ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿ ಅವರಿಗೂ ಪ್ರಶ್ನಿಸಿದ್ದಾರೆ.
ಬಿಜೆಪಿ ಶಾಸಕ @BasanagoudaBJP ಅವರು ಮಾಜಿ ಮುಖ್ಯಮಂತ್ರಿ @BSYBJP ಮತ್ತು ಅವರ ಪುತ್ರ @BYVijayendra ಸೇರಿದಂತೆ ಹಿಂದಿನ ಸರ್ಕಾರದ ಸಂಪುಟದಲ್ಲಿದ್ದ ಕೆಲವು ಸಚಿವರ ವಿರುದ್ಧ ನಿರಂತರವಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಾ ಬಂದಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ರಾಜ್ಯದ @BJP4Karnataka ನಾಯಕರು ಈ ಬಗ್ಗೆ ಮೌನವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.
ತನ್ನನ್ನು ದೇಶದ "ಚೌಕಿದಾರ" ಎಂದು ಬಣ್ಣಿಸಿಕೊಳ್ಳುತ್ತಿರುವ ಮತ್ತು "ನ ಖಾವೂಂಗಾ ನಾ ಖಾನೆ ದೂಂಗಾ" ಎಂದು ಆಗಾಗ ಗುಟುರು ಹಾಕುವ ದೇಶದ ಪ್ರಧಾನಮಂತ್ರಿ @narendramodi ಅವರೂ ತಮ್ಮದೇ ಪಕ್ಷದ ನಾಯಕ ಮಾಡುತ್ತಿರುವ ಇಂತಹ ಭ್ರಷ್ಟಾಚಾರದ ಆರೋಪಗಳ ಬಗ್ಗೆ ಮೌನವಾಗಿರುವುದು ನಿಗೂಢವಾಗಿದೆ. ಇದು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಲ್ಲಿ ಕೇಂದ್ರದ ನಾಯಕರಿಗೂ ಪಾಲು ಹೋಗಿದೆ ಎನ್ನುವ ಆರೋಪಕ್ಕೆ ಎಡೆ ಮಾಡಿಕೊಡುವುದಿಲ್ಲವೇ ಪ್ರಧಾನಿಗಳೇ?
ಶಾಸಕರಾದ @BasanagoudaBJP ಅವರು ಹಿಟ್ ಎಂಡ್ ರನ್ ಮಾಡಬಾರದು. ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬೇಕೆಂಬ ಬದ್ಧತೆಯನ್ನು ಅವರು ಹೊಂದಿದ್ದರೆ ತಮ್ಮ ಆರೋಪವನ್ನು ತಾರ್ಕಿಕ ಅಂತ್ಯದೆಡೆಗೆ ಒಯ್ಯಬೇಕು. ಇದಕ್ಕಾಗಿ ಅವರು ಕೊರೊನಾ ಭ್ರಷ್ಟಾಚಾರದ ಬಗ್ಗೆ ತಮ್ಮ ಬಳಿ ಇರುವ ಎಲ್ಲ ಮಾಹಿತಿಯನ್ನು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ರಚಿಸಲಾಗಿರುವ ತನಿಖಾ ಆಯೋಗಕ್ಕೆ ಒಪ್ಪಿಸಬೇಕು.
ಕೊರೊನಾ ಕಾಲದಲ್ಲಿ @BSYBJP ನೇತೃತ್ವದ @BJP4Karnataka ಸರ್ಕಾರ ಅಂದಾಜು 40 ಸಾವಿರ ಕೋಟಿ ರೂಪಾಯಿಗಳ ಭ್ರಷ್ಟಾಚಾರ ಎಸಗಿದೆ ಎಂದು ಬಿಜೆಪಿ ಶಾಸಕ @BasanagoudaBJP ಅವರು ನೇರವಾಗಿ ಆರೋಪಿಸುವ ಮೂಲಕ ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವಾಗಿತ್ತು ಎನ್ನುವ ನಮ್ಮ ಆರೋಪಕ್ಕೆ ಸಾಕ್ಷಿ ಒದಗಿಸಿದ್ದಾರೆ.
ಕೊರೊನಾ ಚಿಕಿತ್ಸೆ ಮತ್ತು ನಿಯಂತ್ರಣದ ಹೆಸರಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಸುಮಾರು ರೂ.4,000 ಕೋಟಿ ರೂಪಾಯಿಗಳ ಭ್ರಷ್ಟಾಚಾರ ಮಾಡಿದೆ ಎಂದು ಪತ್ರಿಕಾಗೋಷ್ಠಿ ಕರೆದು ದಾಖಲೆಗಳ ಸಮೇತ ನಾವು ಆರೋಪ ಮಾಡಿದ್ದೆವು. ಯತ್ನಾಳ್ ಅವರ ಆರೋಪವನ್ನು ಗಮನಿಸಿದರೆ ನಮ್ಮ ಅಂದಾಜಿಗಿಂತಲೂ ಹತ್ತು ಪಟ್ಟು ಹೆಚ್ಚಿನ ಭ್ರಷ್ಟಾಚಾರ ನಡೆದಿರುವಂತೆ ಕಾಣುತ್ತಿದೆ. ನಮ್ಮ ಆರೋಪ ಕೇಳಿ ಹೌಹಾರಿ ಬಂದು ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಆಗಿನ ಸಚಿವರ ದಂಡು ಈಗ ಎಲ್ಲಿ ಅಡಗಿ ಕೂತಿದೆ? ಎಂದು ಪ್ರಶ್ನಿಸಿದ್ದಾರೆ.