39 ದಿನಕ್ಕೆ ಮಲೆ ಮಹದೇಶ್ವರಿಗೆ ಹರಿದು ಬಂತು 2.28 ಕೋಟಿ ರೂಪಾಯಿ..!
ಚಾಮರಾಜನಗರ: ಮಲೆ ಮಹದೇಶ್ವರಿಗೆ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಶ್ರೀಮಂತ ದೇವರಲ್ಲಿ ಮಹದೇಶ್ವರ ಕೂಡ ಒಂದು. ಬೇರೆ ರಾಜ್ಯಗಳಿಂದಾನೂ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತಾದಿಗಳು ಬರುತ್ತಾರೆ. ಭಕ್ತರ ಪುಣ್ಯ ಸ್ಥಳವೆಂದೆ ಹೇಳಲಾಗುತ್ತಿದೆ. ಇದೀಗ ಮತ್ತೆ ಕೋಟಿ ಒಡೆಯನಾಗಿದ್ದಾನೆ ಮಲೆ ಮಹದೇಶ್ವರ ಸ್ವಾಮಿ.
ಹೌದು ಮಲೆ ಮಹದೇಶ್ವರ ಸ್ವಾಮಿಯ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಇದರಲ್ಲಿ ಮಹದೇಶ್ವರ ಕೋಟಿ ಒಡೆಯನಾಗಿರುವುದು ಮತ್ತೆ ನಿರೂಪಿಸಲಾಗಿದೆ. ಬರೀ 39 ದಿನಗಳಲ್ಲಿಯೇ 2.28 ಕೋಟಿಯ ಒಡೆಯನಾಗಿದ್ದಾನೆ. ಹಬ್ಬ ಹರಿದಿನ, ರಜೆಯ ದಿನಗಳಲ್ಲಿ ಮಲೆಮಹದೇಶ್ವರ ಬೆಟ್ಟಕ್ಕೆ ಬರುವವರ ಸಂಖ್ಯೆ ಜೋರಾಗಿದೆ. ಹೀಗಾಗಿಯೇ 39 ದಿನಗಳಲ್ಲಿ ಕೋಟಿ ಕೋಟಿ ಹಣ ಕಾಣಿಕೆಯಾಗಿ ಹರಿದು ಬಂದಿದೆ.
ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಬಳಿಕ ಈ ವಿಚಾರ ಗೊತ್ತಾಗಿದೆ. ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮತ್ತು ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರ ನೇತೃತ್ವದಲ್ಲಿ ಹುಂಡಿ ಕಾರ್ಯ ನಡೆದಿದೆ. ಸಿಸಿಟಿವಿ ಕ್ಯಾಮೆರಾದ ಕಣ್ಗಾವಲಿನಲ್ಲಿಯೇ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಅದರಲ್ಲಿ 2.28 ಕೋಟಿ ಹಣ, 92.5 ಗ್ರಾಂ ಚಿನ್ನ ಹಾಗೂ 2.746 ಗ್ರಾಂ ಬೆಳ್ಳಿ ಕೂಡ ಕಾಣಿಕೆ ರೂಪದಲ್ಲಿ ದೇವರ ಹುಂಡಿಯಲ್ಲಿ ಸೇರಿದೆ.