135 ಸೀಟು ಗೆದ್ದಿದ್ದೀವಿ ಎಂಬ ಧಿಮಾಕು : ಕಾಂಗ್ರೆಸ್ ಮೇಲೆ ಹರಿಹಾಯ್ದ ಜೆಡಿಎಸ್
ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ನಡೆಯುತ್ತಲೆ ಇದೆ. ಇದೀಗ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ವಾಗ್ದಾಳಿ ನಡೆಸಿದೆ. ಮೂರ್ಖರಿಗೆ ಬುದ್ಧಿ ಮಂದ ಎನ್ನುವುದು ಮಾತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅದೇ ಆಗಿದೆ. ಅಧಿಕಾರದ ಮದದಿಂದ ಅದರ ಮಿದುಳಿಗೂ ಗೆದ್ದಲು ಹಿಡಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾಲ್ಕು ವರ್ಷದ ಹಿಂದೆ ಸರ್ಕಾರ ಮಾಡಲು ಸಿದ್ದರಾಮಯ್ಯ, ಡಿಕೆಶಿ ಮನೆಗೆ ಸಿದ್ದರಾಮಯ್ಯ ಬಂದಿದ್ದರಾ..? ಸುಳ್ಳು ಹೇಳುವುದಕ್ಕೆ ಸಾಸಿವೆ ಕಾಳಿನಷ್ಟಾದರೂ ಸಂಕೋಚ ಬೇಡವೇ..?. 135 ಸೀಟು ಗೆದ್ದಿದ್ದೀವಿ ಎಂಬ ಧಿಮಾಕಿನಲ್ಲಿ ಏನನ್ನೇ ಹೇಳಿದರು ಜನ ನಂಬುತ್ತಾರೆ ಎಂಬ ಅಹಂಕಾರವೇ ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರ ಮನೆ ಅಂಗಳದಲ್ಲಿ ಅಂಗಿ ಕಳಚಿ ಮುಖ ಒರೆಸಿಕೊಂಡು ನಿಂತ ಧೀರರು ಯಾರೆಂಬುದು ತಿಳಿದಿಲ್ಲವೆ. ಎಲ್ಲೋ ಇದ್ದ ಕುಮಾರಸ್ವಾಮಿಯನ್ನು ಬೆನ್ನತ್ತಿ, ದೇವೇಗೌಡರ ಪದತಲಕ್ಕೆ ಬಿದ್ದವರ ಪುರಾಣ ಬಿಚ್ಚಿಡಬೇಕೆ. ಕುಮಾರಸ್ವಾಮಿ, ಕೈ ಅಭಯದ ಸಂಕೇತವೆಂದು ನಂಬಿದ್ದರು. ಆದರೆ ಡಿಕೆ ಶಿವಕುಮಾರ್ ಅವರದ್ದು ಕೈ ಎತ್ತುವುದಷ್ಟೇ ಅಲ್ಲ ಕೈ ಕೊಡುವುದರಲ್ಲೂ ಎತ್ತಿದ ಕೈ ಎಂಬುದು ಗೊತ್ತಾಗಲೇ ಇಲ್ಲ. ಅಸೆಂಬ್ಲಿಯಲ್ಲೂ ಕೈ ಎತ್ತಿದರು, ಮಂಡ್ಯದಲ್ಲೂ ಕೈ ಎತ್ತಿದರು, ಬೆಂಗಳೂರು ಗ್ರಾಮಾಂತರದಲ್ಲೂ ಕೈ ಎತ್ತಿದರು. ಪಾಪ ಕುಮಾರಸ್ವಾಮಿ ಅವರು ಅವರನ್ನ ನಂಬಿದರು. ಬೆಂಗಳೂರು ಗ್ರಾಮಾಂತರದಲ್ಲಿ ಅವರ ಕೈ ಹಿಡಿದರು ಕುಮಾರಸ್ವಾಮಿ. ಆದರೆ ಮಂಡ್ಯದಲ್ಲಿ ಅದೇ ಕೈಯನ್ನು ನಡುರಸ್ತೆಯಲ್ಲಿ ಬಿಟ್ಟು ಜಾರಿ ಕೊಂಡರು. ಇದೆಂಥಾ ಕೈ ಚಳಕ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ವ್ಯಂಗ್ಯವಾಡಿದೆ.