11 ಇಂದಿರಾ ಕ್ಯಾಂಟೀನ್ ಬಂದ್ : ಕಾಂಗ್ರೆಸ್ ವಿರುದ್ಧ ಬಿವೈ ವಿಜಯೇಂದ್ರ ಗರಂ..!
ಸಿದ್ದರಾಮಯ್ಯ ಸರ್ಕಾರವೇ ತಂದಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಈಗ ನೆಲ ಕಚ್ಚುತ್ತಿದೆ. ರಾಜ್ಯದ ಹನ್ನೊಂದು ಕಡೆ ಇಂದಿರಾ ಕ್ಯಾಂಟಿನ್ ಬಂದ್ ಮಾಡಲಾಗಿದೆ. ಈ ಸುದ್ದಿಯನ್ನು ಹಂಚಿಕೊಂಡು, ಆಕ್ರೋಶ ಹೊರ ಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು, ಹಿಂದಿನ ಸರ್ಕಾರದಲ್ಲಿ ಬಡವರ ಹಸಿವು ನೀಗಿಸಲು ಇಂದಿರಾ ಕ್ಯಾಂಟೀನ್ ಗಳನ್ನು ತೆರೆದಿರುವ ಬಗ್ಗೆ ಹೆಮ್ಮೆಪಟ್ಟು ಕೊಂಡಿದ್ದ ಕಾಂಗ್ರೆಸ್ಸಿಗರೇ, ಕಳೆದ ಬಾರಿಯ ನಮ್ಮ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಕ್ಯಾಂಟೀನ್ ಗಳನ್ನು ನಾವು ಮುಚ್ಚಿಸಲು ಹೊರಟಿದ್ದೇವೆ ಎಂದು ಅಪಪ್ರಚಾರ ನಡೆಸಿದಿರಿ. ಆದರೆ ಈಗೇನಾಗುತ್ತಿದೆ ? ಎಂದು ಪ್ರಶ್ನೆ ಮಾಡಿದ್ದಾರೆ.
ಬಡವರು ಹಾಗೂ ಶ್ರಮಿಕ ವರ್ಗದವರಿಗೆ ಹಸಿವು ನೀಗಿಸುತ್ತಿದ್ದ ನಿಮ್ಮದೇ ಯೋಜನೆಯ ಇಂದಿರಾ ಕ್ಯಾಂಟೀನ್ ಮುಚ್ಚಿಸುತ್ತಿದ್ದೀರಿ. ಬಡವರ ಬಗ್ಗೆ, ಹಸಿದವರ ಬಗ್ಗೆ, ನಿಮಗೆ ಪ್ರಾಮಾಣಿಕ ಕಾಳಜಿ ಇದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಗ್ಯಾರಂಟಿ ಯೋಜನೆಗಳನ್ನು ಮಾತ್ರ ಕೇಂದ್ರೀಕರಿಸಿರುವ ನೀವು ಅದನ್ನೂ ಪರಿಪೂರ್ಣವಾಗಿ ನಿಭಾಯಿಸಲಾಗದೆ, ಆರ್ಥಿಕ ಸಮತೋಲನ ಕಾಯ್ದುಕೊಳ್ಳಲಾಗದೆ, ರಾಜ್ಯದ ಬೊಕ್ಕಸ ಬರಿದು ಮಾಡಿ ಹಿಂದುಳಿದವರು, ದಲಿತರ ಕಲ್ಯಾಣ ಕಾರ್ಯಗಳನ್ನು ಮೂಲೆಗೊತ್ತಿ ಇದೀಗ ಬೀದಿಬದಿ ವ್ಯಾಪಾರ ಮಾಡಿ ಜೀವನ ಸಾಗಿಸುವ ಶ್ರಮಿಕ ವರ್ಗ ಹಾಗೂ ಬಡವರಿಗೆ ಹಸಿವು ನೀಗಿಸುವ ತಾಣವಾಗಿದೆ ಎಂದು ಹೇಳಿಕೊಳ್ಳುತ್ತಿದ್ದ ನಿಮ್ಮ ಇಂದಿರಾ ಕ್ಯಾಂಟೀನ್ ಅನ್ನು ಮುಚ್ಚಿಸಲು ಹೊರಟಿದ್ದೀರಿ.
ನಿಮ್ಮ ಸರ್ಕಾರದ ಕಾರ್ಯವೈಖರಿ ನೋಡಿದರೆ ಕರ್ನಾಟಕದ ಚಲನಶೀಲತೆಗೆ ತುಕ್ಕು ಹಿಡಿಸಲು ಹೊರಟಂತಿದೆ. ಇಂದಿರಾ ಕ್ಯಾಂಟೀನ್ ಗೆ ಆಗುತ್ತಿರುವ ಗತಿಯೇ ಬಡವರ ಇತರ ಯೋಜನೆಗಳಿಗೂ ಆಗುವುದು ನಿಶ್ಚಿತ ಎಂಬುದು ಸರ್ಕಾರದ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದರೆ ವೇದ್ಯವಾಗುತ್ತದೆ ಎ..ದು ಟ್ವೀಟ್ ಮಾಡಿದ್ದಾರೆ.