10 ಹೂಡಿಕೆ ಯೋಜನೆಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಅನುಮೋದನೆ : ಸಚಿವ ಎಂ.ಬಿ.ಪಾಟೀಲ್
ಬೆಳಗಾವಿ ಸುವರ್ಣ ಸೌಧ. ಡಿ.08 : ಬೆಂಗಳೂರಿನ ಇನ್ವೆಸ್ಟ್ ಕರ್ನಾಟಕ ಹಾಗೂ ಹುಬ್ಬಳ್ಳಿ ಎಫ್.ಎಂ.ಸಿ.ಜಿ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡ ಒಡಂಬಡಿಕೆಗಳ ಪೈಕಿ 10 ಯೋಜನೆಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯಲ್ಲಿ ಅನುಮೊದನೆ ನೀಡಲಾಗಿದೆ.
ಇದರ ಪ್ರಕಾರ ಕಂಪನಿಗಳಿಗೆ ಉದ್ದಿಮೆ ಸ್ಥಾಪನೆಗೆ ಅಗತ್ಯವಾದ ಭೂಮಿ, ನೀರು, ವಿದ್ಯುತ್ ಪೂರೈಕೆ ಹಾಗೂ ಇತರೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಶುಕ್ರವಾರ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ, ವಿಧಾನ ಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪನವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು.
ಬೆಂಗಳೂರಿನಲ್ಲಿ ಜರುಗಿದ ಇನ್ವೆಸ್ಟ್ ಕರ್ನಾಟಕ-2022 ಸಮಾವೇಶದಲ್ಲಿ 57 ಕಂಪನಿಗಳೊಂದಿಗೆ ರೂ.5.41 ಲಕ್ಷ ಕೋಟಿಗಳ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹುಬ್ಬಳ್ಳಿಯಲ್ಲಿ ಜರುಗಿದ ಎಫ್.ಎಂ.ಸಿ.ಜಿ ಬಂಡವಾಳ ಹೂಡಿಕೆದಾರ ಸಮಾವೇಶದಲ್ಲಿ 16 ಕಂಪನಿಗಳೊಂದಿಗೆ ರೂ.1.27 ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಗಳು ಬೃಹತ್ ಕೈಗಾರಿಕೆಗಳು ಆಗಿರುವುದರಿಂದ ಕೈಗಾರಿಕೆಗಳ ಸ್ಥಾಪನೆಗೆ ಕನಿಷ್ಠ 3 ರಿಂದ 4 ವರ್ಷ ಕಾಲಾವಕಾಶ ಬೇಕಾಗಿರುತ್ತದೆ. 5.41 ಲಕ್ಷ ಕೋಟಿ ಬಂಡವಾಳ ಹೂಡಿಕೆಯಲ್ಲಿ ವಿದ್ಯುತ್ ಹಾಗೂ ನವೀಕರಿಸಬಹುದಾದ ಇಂಧನಗಳ ಕ್ಷೇತ್ರದಲ್ಲಿ ಶೇ.38 ರಷ್ಟು ಬಂಡವಾಳ ಹೂಡಿಕೆಯಾಗಿದೆ ಎಂದರು.
ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಸುಮಾರು ರೂ.75 ಕೋಟಿ ಹಾಗೂ ಹುಬ್ಬಳ್ಳಿ ಎಫ್.ಎಂ.ಸಿ.ಜಿ ಸಮಾವೇಶಕ್ಕೆ ರೂ.12.23 ಲಕ್ಷ ವೆಚ್ಚವಾಗಿದೆ. ರಾಜ್ಯ ಸರ್ಕಾರದ 2020-25ರ ಕೈಗಾರಿಕಾ ನೀತಿ ಅಡಿ, ಕೈಗಾರಿಕೆ ಸ್ಥಾಪನೆಗೆ ಸರ್ಕಾರದ ಪ್ರೋತ್ಸಾಹ ಮತ್ತು ರಿಯಾಯಿತಿಗಳನ್ನು ಪಡೆಯುವ ಕೈಗಾರಿಕೆಗಳು ಸರೋಜಿನಿ ಮಹಿಷಿ ವರದಿಯಂತೆ ಗ್ರೂಪ್ ಡಿ ವರ್ಗದಲ್ಲಿ ಕನ್ನಡಿಗರಿಗೆ ಶೇ.100 ರಷ್ಟು ಹಾಗೂ ಒಟ್ಟು ಉದ್ಯೋಗಗಳಲ್ಲಿ ಶೇ.70ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಕಲ್ಪಿಸಬೇಕು ಎಂದು ಸಚಿವ ಎಂ.ಬಿ.ಪಾಟೀಲ್ ಮಾಹಿತಿ ನೀಡಿದರು.
ಸಾರ್ವಜನಿಕರ ಹಣ ವ್ಯಯಮಾಡಿ ನಡೆಸುವ ಬಂಡವಾಳ ಹೂಡಿಕೆ ಸಮಾವೇಶಗಳು ವ್ಯರ್ಥ್ಯವಾಗಬಾರದು. ಕೈಗಾರಿಕೆಗಳು ಸ್ಥಾಪನೆ ಆಗಬೇಕು. ಹೀಗೆ ಸ್ಥಾಪಿಸಿದ ಕೈಗಾರಿಕೆಗಳು ಕನ್ನಡಿಗರಿಗೆ ಉದ್ಯೋಗ ಅವಕಾಶ ನೀಡಬೇಕು. ಈ ಹಿಂದೆ 1995ರಲ್ಲಿ ಅಂದಿನ ರಾಜ್ಯ ಸರ್ಕಾರ ಟಯೋಟಾ ಕಂಪನಿಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಿಡಿದಿ ಬಳಿ 450 ಎಕರೆ ಜಮೀನು ನೀಡಿ, ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿತ್ತು. 18 ವರ್ಷಗಳ ತೆರಿಗೆಯನ್ನು ಕಂಪನಿ ಇಟ್ಟುಕೊಂಡು, ಪುನಃ ರಾಜ್ಯ ಸರ್ಕಾರಕ್ಕೆ ಸಂದಾಯ ಮಾಡುವ ಅವಕಾಶವನ್ನು ನೀಡಿತ್ತು.
ಆದರೆ ಸರ್ಕಾರ ಕನ್ನಡಿಗರಿಗೆ ಉದ್ಯೋಗ ನೀಡಲು ವಿಧಿಸಿದ ಷರತ್ತನ್ನು ಕಂಪನಿ ಸರಿಯಾಗಿ ಅನುಷ್ಠಾನ ಮಾಡಲಿಲ್ಲ. ಈಗಲೂ ಕಂಪನಿ ರೂ.8 ಸಾವಿರ ಕೋಟಿಗೂ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡಿದೆ. ರತ್ನಗಂಬಳಿ ಹಾಸಿ ಬೃಹತ್ ಕಂಪನಿಗಳನ್ನು ತಂದು ರಾಜ್ಯದ ಜನರಿಗೆ ಉಪಯೋಗವಾಗದಿದ್ದರೆ ಹೇಗೆ? ಸರ್ಕಾರ ಈ ಕುರಿತು ಸೂಕ್ತ ಕ್ರಮ ವಹಿಸಬೇಕು ಎಂದು ಶಾಸಕ ಎಂ.ಚಂದ್ರಪ್ಪ ಒತ್ತಾಯಿಸಿದರು.
ಟಯೋಟಾ ಕಂಪನಿಯೊಂದಿಗಿನ ಒಪ್ಪಂದ ಕುರಿತು ಸದ್ಯ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ. ಇದೆ ಮಾದರಿ ಸವಲತ್ತು ಪಡೆದ ಎಲ್ಲಾ ಕೈಗಾರಿಕೆಗಳು ಸರ್ಕಾರದ ಆದೇಶಗಳನ್ನು ಪಾಲನೆ ಮಾಡುತ್ತಿವೆಯೇ ಎಂಬುದನ್ನು ಪರಿಶೀಲಿಸುವುದಾಗಿ ಸಚಿವ ಎಂ.ಬಿ.ಪಾಟೀಲ್ ಸದನದಲ್ಲಿ ಆಶ್ವಾಸನೆ ನೀಡಿದರು.