ತಂತ್ರಜ್ಞಾನ ಜಾಗರೂಕತೆಯಿಂದ ಬಳಸಿ : ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್
ಚಿತ್ರದುರ್ಗ, (ಸೆ.27) : ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ತುಂಬಾ ಜಾಗರೂಕತೆಯಿಂದ ಬಳಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ಹೇಳಿದರು.
ನಗರ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸರ್ಕಾರಿ ವಿಜ್ಞಾನ ಕಾಲೇಜು ಇವರ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳನ್ನು ತಪ್ಪಾಗಿ ಬಳಸಿದ್ದಲ್ಲಿ ಅಪರಾಧಿಯ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂಬುದನ್ನು ತಿಳಿಹೇಳಿದ ಅವರು, ಸೈಬರ್ ಅಪರಾಧಗಳು ಯಾವ ರೀತಿಯಲ್ಲಿ ಅಪಾಯಗಳನ್ನು ತಂದೊಡ್ಡುತ್ತದೆ ಎಂಬುವುದರ ಕುರಿತು ಮಾಹಿತಿ ನೀಡಿದರು.
ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಮಂಜುನಾಥ್ “ಸೈಬರ್ ಕ್ರೈಮ್ಸ್ ಅಂಡ್ ಇಟ್ಸ್ ಲಾ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಸೈಬರ್ ಅಪರಾಧಗಳ ವಿಧಗಳು, ವಿವಿಧ ವೆಬ್‍ಸೈಟ್‍ಗಳು, ವಾಟ್ಸಪ್ ಸುರಕ್ಷತೆ ಬಗ್ಗೆ ಸವಿವರವಾಗಿ ವಿವರಣೆ ನೀಡಿದರು.
ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ದಾಖಲಾದ ಸೈಬರ್ ಅಪರಾಧಗಳ ಬಗ್ಗೆಯೂ ಮಾಹಿತಿ ನೀಡಿ ವಿದ್ಯಾರ್ಥಿಗಳು ತುಂಬಾ ಎಚ್ಚರಿಕೆಯಿಂದ ಮೊಬೈಲ್‍ಗಳನ್ನು ಬಳಸಬೇಕು ಹಾಗೂ ಆನ್‍ಲೈನ್ ಜಾಬ್, ಬಹುಮಾನಗಳು ಎಂಬ ಆಮಿಷಕ್ಕೆ ಒಳಗಾಗಿ ಮೋಸಹೋಗಬಾರದು ಎಂದು ಹೇಳಿದರು.
ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಅನಿಲ್‍ಕುಮಾರ್ ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಾಧರ್, ಕಾಲೇಜಿನ ಪ್ರಾಂಶುಪಾಲ ಪ್ರೊ.ಸಿದ್ರಾಮ ಚನ್ನಗೊಂಡ, ಪ್ರಾಧ್ಯಾಪಕರಾದ ಡಾ.ರಮೇಶ್ ಅಯ್ಯನಹಳ್ಳಿ, ಪ್ರೊ.ಕೆ.ಬಿ.ವಿದ್ಯಾ, ಡಾ.ಮಹೇಶ್ ನಾಯ್ಕ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.