ಪಿಡಿಒ ಅಮಾನತು ಮಾಡಿ : ಕರುನಾಡ ವಿಜಯಸೇನೆ ಆಗ್ರಹ...!
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ.25 : ಹಣ ದುರುಪಯೋಗ, ಕರ್ತವ್ಯದಲ್ಲಿ ಲೋಪವೆಸಗುತ್ತಿರುವ ಭರಮಸಾಗರ ಗ್ರಾಮ ಪಂಚಾಯಿತಿ ಪಿ.ಡಿ.ಓ. ಶ್ರೀಮತಿ ಕೆ.ಎಸ್.ಶ್ರೀದೇವಿ ಇವರನ್ನು ಕೂಡಲೆ ಸೇವೆಯಿಂದ ಅಮಾನತ್ತುಗೊಳಿಸುವಂತೆ ಕರುನಾಡ ವಿಜಯಸೇನೆಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಪಂಚಾಯಿತಿಯ ಹಣ ದುರುಪಯೋಗಪಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿರುವ ಪಿ.ಡಿ.ಓ. ಶ್ರೀದೇವಿ ಇ.ಸ್ವತ್ತುಗಳಿಗೆ ರಸೀದಿ ನೀಡದೆ ಹಣವನ್ನು ಗುಳುಂ ಮಾಡುತ್ತಿದ್ದು, ಬೋಗಸ್ ಬಿಲ್ಲುಗಳ ಮೂಲಕ ಹಣ ಲೂಟಿ ಹೊಡೆಯುತ್ತಿದ್ದಾರೆಂದು ಪ್ರತಿಭಟನಾಕಾರರು ದೂರಿದರು.
ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಗ್ರಾಮ ಪಂಚಾಯಿತಿಯಲ್ಲಿಯೂ ಇದೆ ರೀತಿ ಹಣ ದುರುಪಯೋಗಪಡಿಸಿಕೊಂಡಿರುವ ಪಿ.ಡಿ.ಓ. ಕೆ.ಎಸ್.ಶ್ರೀದೇವಿ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಇಷ್ಟಾದರೂ ಇನ್ನು ಇವರ ಮೇಲೆ ಯಾವ ಕ್ರಮ ಕೈಗೊಳ್ಳದಿರುವುದರ ಹಿಂದಿರುವ ಉದ್ದೇಶವೇನು? ಎಂದು ಪ್ರಶ್ನಿಸಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ತಕ್ಷಣವೇ ಸೇವೆಯಿಂದ ಅಮಾನತ್ತುಗೊಳಿಸದಿದ್ದರೆ ಇದೇ ತಿಂಗಳ 29 ರಂದು ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಉಪಾಧ್ಯಕ್ಷರುಗಳಾದ ರತ್ನಮ್ಮ, ಮುಜಾಹಿದ್, ರಾಜ್ಯ ಸಮಿತಿ ಸದಸ್ಯ ನಿಸಾರ್ ಅಹಮದ್, ಅವಿನಾಶ್, ಸುರೇಶ್, ಪಿ.ಆರ್.ಹರೀಶ್‌ಕುಮಾರ್, ಸಿ.ಜಗದೀಶ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.