ಮಾಧ್ಯಮಗಳು ಸುಳ್ಳು, ದ್ವೇಷ ಬಿತ್ತುವ ಹಾಗೂ ಪೇಯ್ಡ್ ಸುದ್ದಿ ಪ್ರಕಟಿಸಬಾರದು : ಜಿಲ್ಲಾಧಿಕಾರಿ ಟಿ.ವೆಂಕಟೇಶ್
ಸುದ್ದಿಒನ್, ಚಿತ್ರದುರ್ಗ, ಫೆ.22 : ಮಾಧ್ಯಮಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ಯಶಸ್ವಿಯಾಗಿ ಚುನಾವಣೆ ನಡೆಸಲು ಸಹಕಾರ ನೀಡಬೇಕು ಎಂದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣೆ ಅಧಿಕಾರಿ ಟಿ.ವೆಂಕಟೇಶ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಮಾದರಿ ನೀತಿ ಸಂಹಿತೆ ಹಾಗೂ ಮಾಧ್ಯಮಗಳ ಹೊಣೆಗಾರಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣೆ ಜಾಹೀರಾತುಗಳನ್ನು ಪ್ರಕಟಿಸುವ ಮುನ್ನ ಪ್ರಮಾಣೀಕರಣ ಪಡೆದುಕೊಳ್ಳಬೇಕು. ಮಾಧ್ಯಮಗಳು ಯಾರ ಪರ ಅಥವಾ ವಿರುದ್ಧವಾಗಿ ಸುಳ್ಳು, ದ್ವೇಷ ಬಿತ್ತುವ ಹಾಗೂ ಪೇಯ್ಡ್ ನ್ಯೂಸ್ ಪ್ರಕಟಿಸಬಾರದು.
ಈ ರೀತಿಯ ಪ್ರಕಟಣೆಗಳು ಮಾದರಿ ನೀತಿಯ ಸ್ಪಷ್ಟ ಉಲಂಘನೆಯಾಗುತ್ತವೆ. ಇದನ್ನು ಚುನಾವಣೆ ಆಯೋಗವೂ ಕೂಡಾ ಗಂಭೀರವಾಗಿ ಪರಿಗಣಿಸುತ್ತದೆ. ಒಂದು ವೇಳೆ ನೀತಿ ಸಂಹಿತೆ ಉಲ್ಲಂಘನೆಯಾದರೆ ಅಂತಹ ಪ್ರಕರಣಗಳಿಗೆ ಪ್ರಜಾಪ್ರಾತಿನಿಧ್ಯ ಕಾಯ್ದೆ ಅನ್ವಯವಾಗುತ್ತದೆ ಮತ್ತು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು.ಆದ್ದರಿಂದ ಮಾಧ್ಯಮಗಳು ತಮ್ಮ ಹೊಣೆಗಾರಿಕೆಯನ್ನು ಅರಿತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಈ ಮೂಲಕ ಯಶಸ್ವಿಯಾಗಿ ಚುನಾವಣೆ ನಡೆಸಲು ಸಹಕಾರ ನೀಡಬೇಕು ಎಂದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಭೌಗೋಳಿಕ ವ್ಯಾಪ್ತಿಗೆ ತುಮಕೂರು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಚಿತ್ರದುರ್ಗ ಲೋಕಸಭಾ ಕ್ಷೇತಕ್ಕೆ ಸೇರುತ್ತವೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಮಾಸ್ಟರ್ ತರಬೇತುದಾರ ಹಾಗೂ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್, ಚುನಾವಣೆ ಮಾಧ್ಯಮ ಘಟಕ, ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾ ಸಮಿತಿ, ಪೇಯ್ಡ್ ನ್ಯೂಸ್, ಸಾಮಾಜಿಕ ಮಾಧ್ಯಮಗಳ ಪಾತ್ರ ಸೇರಿದಂತೆ ಹಲವು ವಿಚಾರಗಳ ಕುರಿತು ಪ್ರಾತ್ಯಕ್ಷತೆಯೊಂದಿಗೆ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ.ಸಿಇಓ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಜೆ.ಕುಮಾರಸ್ವಾಮಿ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಹಾಗೂ ಜಿಲ್ಲಾ ವೆಚ್ಚ ಉಸ್ತುವಾರು ಕೋಶದ ನೋಡಲ್ ಅಧಿಕಾರಿ ಡಿ.ಆರ್.ಮಧು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಸೇರಿದಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಮತ್ತಿತರರು ಇದ್ದರು.