Lok Sabha Elections : ಲೋಕಸಭಾ ಚುನಾವಣೆ 2024 | ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದಲೇ ಸ್ಪರ್ಧೆ, ಉಳಿದವರ ವಿವರ ಇಲ್ಲಿದೆ...!
ಸುದ್ದಿಒನ್, ನವದೆಹಲಿ, ಮಾರ್ಚ್.02 : ಲೋಕಸಭಾ ಚುನಾವಣೆ 2024ರ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು ದಿಲ್ಲಿಯ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಶನಿವಾರ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.
ವಾರಣಾಸಿಯಿಂದ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಕಣಕ್ಕೆ ಇಳಿಯುವುದು ನಿಚ್ಚಳವಾಗಿದೆ. 34 ಕೇಂದ್ರ ಸಚಿವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದೆ. ಬಿಜೆಪಿ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ 28 ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಯುವಕರಿಗೆ 47, ಎಸ್‌ಸಿಗೆ 27 ಮತ್ತು ಎಸ್‌ಟಿಗೆ 18 ಸೀಟುಗಳನ್ನು ನಿಗದಿಪಡಿಸಲಾಗಿದೆ. 57 ಕ್ಷೇತ್ರಗಳಲ್ಲಿ ಒಬಿಸಿಗೆ ಅವಕಾಶ ನೀಡಲಾಗಿದೆ.
ಪಶ್ಚಿಮ ಬಂಗಾಳದಿಂದ 20,
ಮಧ್ಯಪ್ರದೇಶದಿಂದ 24,
ಗುಜರಾತ್‌ನಿಂದ 15,
ರಾಜಸ್ಥಾನದಿಂದ 15 ಮತ್ತು
ಕೇರಳದಿಂದ 12 ಜನರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ನೀಡಲಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಗುಜರಾತ್‌ನ ಗಾಂಧಿ ನಗರದಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಮತ್ತೊಬ್ಬ ಕೇಂದ್ರ ಸಚಿವ ರಾಜನಾಥ್ ಸಿಂಗ್ ಯುಪಿಯ ಲಕ್ನೋದಿಂದ ಸ್ಪರ್ಧಿಸಲಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಪ್ರದೇಶದ ಗುಣ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ.
ದಿಬ್ರುಗಢದಿಂದ ಶರ್ಭಾನಂದ ಸೋನೋವಾಲ್, ಅರುಣಾಚಲ ಪ್ರದೇಶದಿಂದ ಕಿರಣ್ ರಿಜಿಜು, ರಾಜ್‌ಕೋಟ್‌ನಿಂದ ಪುರುಷೋತ್ತಮ್ ರೂಪಲಾ, ಉಧಂಪುರದಿಂದ ಜಿತೇಂದ್ರ ಸಿಂಗ್, ಗೊಡ್ಡಾದಿಂದ ನಿಶಿಕಾಂತ್ ದುಬೆ, ಕುಂತಿಯಿಂದ ಅರ್ಜುನ್ ಮುಂಡಾ, ತ್ರಿಶೂರ್‌ನಿಂದ ಚಲನಚಿತ್ರ ನಟ ಸುರೇಶ್ ಗೋಪಿ ಮತ್ತು ಪಥನಂ ತಿಟ್ಟದಿಂದ ಅನಿಲ್ ಆಂಟನಿ ಅವರಿಗೆ ಅವಕಾಶ ನೀಡಲಾಗಿದೆ. ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ವಿದಿಶದಿಂದ ಲೋಕಸಭೆಗೆ ಕಣಕ್ಕಿಳಿಸಲಾಗಿದೆ. ಕೇಂದ್ರ ಸಚಿವರಾದ ವಿ ಮುರಳೀಧರನ್ ಅಟ್ಟಿಂಗಲ್ ಮತ್ತು ರಾಜೀವ್ ಚಂದ್ರಶೇಖರ್ ತಿರುವನಂತಪುರಂನಿಂದ ಸ್ಪರ್ಧಿಸಲಿದ್ದಾರೆ.
ಉತ್ತರ ದೆಹಲಿಯಲ್ಲಿ ಮನೋಜ್ ತಿವಾರಿ, ನವದೆಹಲಿ ಕ್ಷೇತ್ರದಲ್ಲಿ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್, ಪಶ್ಚಿಮ ದೆಹಲಿಯಲ್ಲಿ ಕಮಲಜೀತ್ ಸೆಹ್ರಾವತ್, ದಕ್ಷಿಣ ದೆಹಲಿಯಲ್ಲಿ ರಾಮ್‌ವೀರ್ ಸಿಂಗ್ ಬಿಧುರಿ ಮತ್ತು ದೆಹಲಿಯ ಚಾಂದಿನಿ ಚೌಕ್‌ನಿಂದ ಪ್ರವೀಣ್ ಖಂಡೇಲ್‌ವಾಲ್‌ಗೆ ಅವಕಾಶ ನೀಡಲಾಗಿದೆ.
ಮಧ್ಯಪ್ರದೇಶದ ಭೋಪಾಲ್ ಸ್ಥಾನವನ್ನು ಅಲೋಕ್ ಶರ್ಮಾಗೆ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಹಾಲಿ ಸಂಸದೆಯಾಗಿರುವ ಬಿಜೆಪಿಯ ವಿವಾದಿತ ನಾಯಕಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಬಿಜೆಪಿ ಹೈಕಮಾಂಡ್ ಕೊಕ್ ನೀಡಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತೊಮ್ಮೆ ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸಲಿದ್ದಾರೆ.
ರಾಜ್ಯವಾರು ಪಶ್ಚಿಮ ಬಂಗಾಳದಿಂದ 27, ಮಧ್ಯಪ್ರದೇಶದಿಂದ 24,
ಗುಜರಾತ್‌ನಿಂದ 15,
ರಾಜಸ್ಥಾನದಿಂದ 15,
ಕೇರಳದಿಂದ 12,
ಛತ್ತೀಸ್‌ಗಢದಿಂದ 12,
ಜಾರ್ಖಂಡ್‌ನಿಂದ 11,
ತೆಲಂಗಾಣದಿಂದ 9,
ದೆಹಲಿಯಿಂದ 5,
ಜಮ್ಮು ಮತ್ತು ಕಾಶ್ಮೀರದಿಂದ 2,
ಉತ್ತರಾಖಂಡದಿಂದ 3 ,
ಅರುಣಾಚಲ ಪ್ರದೇಶದಿಂದ 2 ಅಭ್ಯರ್ಥಿಗಳು,
ಗೋವಾದಿಂದ ಒಬ್ಬರು, ತ್ರಿಪುರಾದಿಂದ ಒಬ್ಬರು, ಅಂಡಮಾನ್ ನಿಕೋಬಾರ್‌ನಿಂದ ಒಬ್ಬರು ಮತ್ತು ದಮನ್ ಮತ್ತು ದಿಯುನಿಂದ ಒಬ್ಬರನ್ನು ಕಣಕ್ಕಿಳಿಸಲಾಗಿದೆ.