For the best experience, open
https://m.suddione.com
on your mobile browser.
Advertisement

ಸರ್ಕಾರಿ ನೌಕರರ ಮಕ್ಕಳು ಸತ್ಪ್ರಜೆಗಳಾಗಿ ನಾಡಿಗೆ ಕೀರ್ತಿ ತರಲಿ : ಸಿ.ಎಸ್. ಷಡಾಕ್ಷರಿ

07:47 PM Aug 12, 2024 IST | suddionenews
ಸರ್ಕಾರಿ ನೌಕರರ ಮಕ್ಕಳು ಸತ್ಪ್ರಜೆಗಳಾಗಿ ನಾಡಿಗೆ ಕೀರ್ತಿ ತರಲಿ    ಸಿ ಎಸ್  ಷಡಾಕ್ಷರಿ
Advertisement

Advertisement
Advertisement

ಚಿತ್ರದುರ್ಗ. ಆಗಸ್ಟ್.12:  ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಸಂಘದಿಂದ ಗುರುತಿಸಿ, ಗೌರವಿಸುವಂತಹ ಕಾರ್ಯವನ್ನು ರಾಜ್ಯ ಸರ್ಕಾರಿ ನೌಕರರ ಸಂಘ ಮಾಡುತ್ತಿದ್ದು, ನೌಕರರ ಮಕ್ಕಳು ಕೂಡ ಅವಕಾಶಗಳನ್ನು ಬಳಸಿಕೊಂಡು ಸತ್ಪ್ರಜೆಗಳಾಗಿ ನಾಡಿಗೆ ಕೀರ್ತಿ ತರಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸರ್ವ ಸದಸ್ಯರ ಸಭೆ, ನೌಕರರಿಗೆ ನಾಯಕತ್ವ ಗುಣಗಳು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಗಾರ, ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರಾಜ್ಯ ಸರ್ಕಾರಿ ನೌಕರರ ಸಂಘಟನೆಗೆ 104 ವರ್ಷಗಳ ಇತಿಹಾಸವಿದೆ. ನಮ್ಮಂತೆಯೇ ನಮ್ಮ ಸುತ್ತಲಿನ ವ್ಯವಸ್ಥೆಯೂ ಕೂಡ ಸುಂದರವಾಗಿ ಕಾಣಬೇಕಾದರೆ, ವ್ಯವಸ್ಥೆಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಬೇಕು. ಒಂದು ಸರ್ಕಾರಿ ಕಚೇರಿಗಿಂತ ವಿಭಿನ್ನವಾಗಿ, ವಿಶೇಷವಾಗಿರುವಂತಹ ಸಮೃದ್ಧಿಯಾದ ಸಂಘ ದೇಶದಲ್ಲಿ ಇದೆ ಎಂದರೆ ಅದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ. ರಾಜ್ಯದ ಸಂಘಟನೆಗಳ ಪೈಕಿ ಹೆಚ್ಚು ಪರಿಣಾಮಕಾರಿಯಾದ ಸಂಘಟನೆಯಾಗಿದೆ. ಇದು ಯಾವುದೇ ಪಕ್ಷಕ್ಕೆ, ಧರ್ಮಕ್ಕೆ, ಜಾತಿಗೆ ಅಂಟಿಕೊಳ್ಳದೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.

ಸಂಘದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ. ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಮುಂದೊಂದು ದಿನ ಡಿಸಿ, ಎಸಿ, ಪೊಲೀಸ್, ರೈತ, ವಾಣಿಜ್ಯೋದ್ಯಮಿಗಳಾಗುತ್ತೀರೋ ಗೊತ್ತಿಲ್ಲ. ಆದರೆ ಕನಿಷ್ಠ ಪಕ್ಷ ಇದ್ಯಾವುದು ಆಗಲಿಲ್ಲವೆಂದರೂ, ಈ ನೆಲದ ಸತ್ಪ್ರಜೆಯಾಗಿ ನಾಡಿಗೆ ಕೀರ್ತಿ ತರುವ ಕಾರ್ಯ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಯ ಹಿಂದಿರುವಂತಹ ಪೋಷಕರು, ತಮ್ಮ ಜೀವನದ ತೊಡಕುಗಳನ್ನು ನಿಭಾಯಿಸಿಕೊಂಡು ಉತ್ತಮವಾದ ಜೀವನ ಕಟ್ಟಿಕೊಟ್ಟಿದ್ದಾರೆ. ಅವರನ್ನು ಯಾವುದೋ ವೃದ್ದಾಶ್ರಮಕ್ಕೆ ದೂಡದೆ, ಉತ್ತಮ ಸಂಸ್ಕಾರವಂತರಾಗಿ, ತಂದೆ-ತಾಯಿಯನ್ನು,  ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಮುಂದಿನ ದಿನಗಳಲ್ಲಿ ಯಾರ ಮೇಲೆಯೂ ಅವಲಬಿತರಾಗದೆ, ಸ್ವಾಭಿಮಾನದಿಂದ  ಜೀವನ ರೂಪಿಸಿಕೊಂಡು, ಪೋಷಕರಿಗೆ, ಜಿಲ್ಲೆಗೆ, ತಾಲ್ಲೂಕಿಗೆ ಗೌರವ ತರುವಂತಹ ಕಾರ್ಯ ಮಾಡಬೇಕು ಎಂದರು.

ಸಂಘಟನೆಯ ಮೂಲಕ ನೌಕರರ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಿಲ್ಲವಾದರೂ, ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅದರಂತೆಯೇ ಸಂಘದ ಮೂಲಕ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ಏಳನೇ ವೇತನ ಆಯೋಗ ಜಾರಿಗೆ ತರುವುದರ ಜೊತೆಗೆ ಇಲ್ಲಿಯವರೆಗೆ ಒಟ್ಟು 25 ಸರ್ಕಾರಿ ಆದೇಶಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ.  ಕಳೆದ 5 ವರ್ಷದಲ್ಲಿ  ನೌಕರರು ಅತ್ಯಂತ ಸಂತೋಷ, ನೆಮ್ಮದಿಯಿಂದ ಜೀವನ ಸಾಗಿಸುವಂತಹ ವಾತಾವರಣ ನಿರ್ಮಾಣವಾಗಿದೆ ಎಂದರು. ಈ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇದೇ ಆಗಸ್ಟ್ 17ರಂದು ಸಂಘದ ವತಿಯಿಂದ ಸನ್ಮಾನಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ವ್ಯಕ್ತಿತ್ವ ಎಂಬುದು ತುಂಬಾ ಮುಖ್ಯ, ಆದರೆ ನಾವು ವಿಕಸನದ ಕಡೆಗೆ ಅಷ್ಟೇ ಯೋಚನೆ ಮಾಡ್ತಾ ಇದ್ದೇವೆ. ಸರ್ಕಾರಿ ನೌಕರರು ಮತ್ತೊಬ್ಬರಿಗೆ ಮಾದರಿಯಾಗಿರಬೇಕು. ನಮ್ಮ ನಡೆ, ನುಡಿಗಳಿಂದ ನಮ್ಮ ವ್ಯಕ್ತಿತ್ವ ಇಮ್ಮಡಿಗೊಳ್ಳಲು ಸಾಧ್ಯ.  ನಮ್ಮ ಸಮಾಜ ಮತ್ತು ಮಕ್ಕಳು ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಅರಿವನ್ನು ನಾವು ಹೊಂದಿರಬೇಕು. ಒಬ್ಬ ಸರ್ಕಾರಿ ನೌಕರನು ನಡೆ ನುಡಿಗಳಲ್ಲಿ ಮಾದರಿಯಾಗುವಂತಿರಬೇಕು.  ಏಕಂದರೆ ಮಕ್ಕಳು ನಮ್ಮ ನಡೆ, ನುಡಿ, ಸಂಸ್ಕಾರವನ್ನು ನೋಡಿ ಹೆಚ್ಚು ಕಲಿಯುತ್ತಾರೆ. ಹಿಂದೆ ನಮಗೆ ಪಾಠ ಹೇಳಿಕೊಟ್ಟಂತಹ ಪ್ರಾಥಮಿಕ ಶಾಲೆಯ ಶಿಕ್ಷಕರು, ಅಂಗನವಾಡಿಯಲ್ಲಿ ಬೆರಳು ಹಿಡಿದು ತಿದ್ದಿದಂತಹವರು ಇಂದಿಗೂ ನೆನಪಿನಲ್ಲಿದ್ದಾರೆ. ಅಂತೆಯೇ ನಾವು ಸಮಾಜಕ್ಕೆ ಎಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ, ಎಷ್ಟು ಜನರ ಮನಸ್ಸಿನಲ್ಲಿ ನಾವಿದ್ದೇವೆ ಎಂಬುದನ್ನು ತಿಳಿಯಬೇಕಿದೆ ಎಂದರು.

ಈ ಹಿಂದೆ ಎಸ್.ಎಸ್.ಎಲ್.ಸಿ, ಪಿಯುಸಿ, ಟಿ.ಸಿ.ಹೆಚ್. ಮುಗಿಸಿದವರು ಸರ್ಕಾರಿ ಕೆಲಸಕ್ಕೆ ಸೇರುತ್ತಿದ್ದರು. ಆದರೆ ಇಂದು  ಪದವಿ ಪಡೆದವರೂ ಕೂಡ ಸರ್ಕಾರಿ ನೌಕರಿಗಾಗಿ ಹೆಚ್ಚು ಕಷ್ಟ ಪಡುವ ಸ್ಥಿತಿ ಇದೆ.  ಹಿಂದೆ ಯಾವುದಾದರು ವಿಚಾರಗಳನ್ನು ತಿಳಿಯಬೇಕಾದರೆ ಪತ್ರಿಕೆಗಳಿಗೆ ಕಾಯಬೇಕಿತ್ತು, ಆದರೆ ಪ್ರಸ್ತುತ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಪಂಚದ ಯಾವುದೇ ಮೂಲೆಯ ವಿಚಾರಗಳು ಕೆಲವೇ ನಿಮಿಷಗಳಲ್ಲಿ ತಿಳಿಯಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವ ಜೊತೆಗೆ, ಉತ್ತಮ ಸಂಸ್ಕಾರ, ಸನ್ನಡತೆಯನ್ನು ರೂಡಿಸಿಕೊಂಡು ಸಂಸ್ಕಾರವಂತರಾಗಿ ಬಾಳಬೇಕು ಎಂದರು.

ಕುಟುಂಬದಲ್ಲಿ ಹಾಗೂ ವೃತ್ತಿಯಲ್ಲಿ ಹೀಗೆ  ಎರಡೂ ಕಡೆಗಳಿಂದ ಒತ್ತಡವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿದಾಗ ಮಾತ್ರ ಜೀವನದ ಯಶಸ್ಸಿನ ಬಂಡಿಯನ್ನು ಸಾಗಿಸಲು ಸಾಧ್ಯ. ನಮ್ಮ ಕೌಟುಂಬಿಕ ಕಾರ್ಯ ಯೋಜನೆಗಳು ಇತಿಮಿತಿಯಲ್ಲಿರಬೇಕು. ಮತ್ತೊಬ್ಬರನ್ನು ನೋಡಿ ಅನುಕರಿಸಿ ಅನಪೇಕ್ಷಿತ ಆಸೆಗಳಿಗೆ ಬಲಿಯಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು. ಒಬ್ಬ ಜವಾಬ್ದಾರಿಯುತ ನೌಕರನಾಗಿ ಸರಿಯಾದ ಚೌಕಟ್ಟನ್ನು ಹಾಕಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ.  ಒತ್ತಡದ ಮುಕ್ತ ಜೀವನದಿಂದ ಹೊರಬಂದು, ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ನಾವೆಲ್ಲ ನೌಕರ ವರ್ಗದವರು ಪಾತ್ರರಾಗೋಣ.  ನಾವು ಆರೋಗ್ಯವಾಗಿದ್ದರೆ ನಮ್ಮ ಕುಟುಂಬ ಆರೋಗ್ಯವಾಗಿರುತ್ತದೆ. ನಮ್ಮ ಕುಟುಂಬ ಆರೋಗ್ಯವಾಗಿದ್ದರೆ ಸಮಾಜ ಆರೋಗ್ಯವಾಗಿರುತ್ತದೆ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ ಸ್ವಾಗತಿಸಿದರು. ಜಿಲ್ಲಾ ಖಜಾಂಚಿ ವೀರೇಶ್ ಕಾರ್ಯಕ್ರಮ ನಿರೂಪಿಸಿದರು. ವ್ಯಕ್ತಿತ್ವ ವಿಕಸನ ತರಬೇತುದಾರ ಹೊಸದುರ್ಗದ ಹೆಚ್.ಎಸ್.ನವೀನ್ ಕುಮಾರ್ ಕಾರ್ಯಾಗಾರ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಖಜಾಂಚಿ ಸಿದ್ದರಾಮಣ್ಣ, ಹಿರಿಯ ಉಪಾಧ್ಯಕ್ಷ ಎಸ್.ಬಸವರಾಜ್, ಕಾರ್ಯದರ್ಶಿ ನೆಲ್ಕುದ್ರಿ ಸದಾನಂದ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಆರ್. ಮಂಜುನಾಥ್, ಕ್ಷೇತ್ರ ಸಮನ್ವಯಾಧಿಕಾರಿ ಈ.ಸಂಪತ್ ಕುಮಾರ್, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಅಭಿನವ್ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags :
Advertisement