ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶಿಷ್ಯ ವೇತನ ಪಡೆದು ಮಕ್ಕಳು ಶಿಕ್ಷಣವಂತರಾಗಿ ಉತ್ತಮ ಪ್ರಜೆಗಳಾಗಲಿ : ಡಿಡಿಪಿಐ ಮಂಜುನಾಥ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.12 : ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಂಡು ಏಳಿಗೆಯಾಗಲಿ ಎನ್ನುವ ಸದುದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರು ಸ್ವ-ಸಹಾಯ ಸಂಘಗಳನ್ನು ಹುಟ್ಟು ಹಾಕಿದ್ದಾರೆಂದು ತ್ರೈಮಾಸಿಕ ಪರಿಶೀಲನಾ ಕೆಡಿಪಿ. ಸಮಿತಿ ಸದಸ್ಯ ಸಿ.ಬಿ.ನಾಗರಾಜ್ ತಿಳಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ ಚಿತ್ರದುರ್ಗ ಸಿರಿಗೆರೆ ವತಿಯಿಂದ ವಾಸವಿ ವಿದ್ಯಾಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ವ-ಸಹಾಯ ಸಂಘಗಳಿಂದ ಸಾಲ ಪಡೆದವರು ಸಕಾಲಕ್ಕೆ ಸರಿಯಾಗಿ ಸಾಲ ಮರು ಪಾವತಿಸಿ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿ ಆರು ಸಾವಿರ ಕೋಟಿ ರೂ.ಗಳ ಸಾಲ ನೀಡಿದ್ದಾರೆ. ಮೊಬೈಲ್ ಗೀಳಿಗೆ ಬಲಿಯಾಗಿರುವ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸರಿದಾರಿಗೆ ತರುವ ಹೊಣೆಗಾರಿಕೆ ತಾಯಂದಿರ ಮೇಲಿದೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಸ್ವ-ಸಹಾಯ ಸಂಘಗಳ ಸದಸ್ಯರ ಮಕ್ಕಳ ಶಿಕ್ಷಣಕ್ಕಾಗಿ ಮಂಜೂರಾಗಿರುವ ಸುಜ್ಞಾನ ನಿಧಿ ಶಿಷ್ಯ ವೇತನಾ ಮಂಜೂರಾತಿ ಪತ್ರ ವಿತರಿಸಿ ಮಾತನಾಡುತ್ತ ಆರ್ಥಿಕ ತೊಂದರೆಯಿಂದ ಪ್ರತಿಭಾವಂತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಕಾರಣಕ್ಕಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ
ಡಾ.ಡಿ.ವೀರೇಂದ್ರ ಹೆಗಡೆರವರು ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನವನ್ನು ಪ್ರತಿ ವರ್ಷವೂ ಮಂಜೂರು ಮಾಡುತ್ತಿದ್ದಾರೆ. ಮಕ್ಕಳು ಸದುಪಯೋಗಪಡಿಸಿಕೊಂಡು ಶಿಕ್ಷಣವಂತರಾಗುವ ಮೂಲಕ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುವಂತೆ ಕಿವಿಮಾತು ಹೇಳಿದರು.
ಮಾನವ ಸಂಪತ್ತು ಬಳಕೆ ಮಾಡಿಕೊಂಡು ಶಿಕ್ಷಣದಿಂದ ಏನನ್ನು ಬೇಕಾದರೂ ಸಾಧಿಸಬಹುದು. ಅನೇಕ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕ, ಬೆಂಚ್ ಡೆಸ್ಕ್ಗಳ ವಿತರಣೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಒದಗಿಸಲಾಗುತ್ತಿದೆ. ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ನೀಡಿದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಮಾತನಾಡುತ್ತ ಯೋಜನೆ ಆರಂಭಗೊAಡು 25 ವರ್ಷಗಳಾಗಿದೆ. ಸ್ವ-ಸಹಾಯ ಸಂಘಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಪ್ರತಿ ವರ್ಷವೂ ಸುಜ್ಞಾನ ನಿಧಿ ಶಿಷ್ಯ ವೇತನ ಕೊಡಲಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ 114 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಈ ವರ್ಷ 24400 ಮಕ್ಕಳಿಗೆ ವಿತರಣೆಯಾಗಿದೆ. 1035 ಶಾಲೆಗಳಿಗೆ ಗೌರವ ಶಿಕ್ಷಕರುಗಳನ್ನು ನೇಮಕ ಮಾಡಿದ್ದೇವೆ. ಶಾಲೆಯ ಕಟ್ಟಡಕ್ಕೆ ಅನುದಾನ, ಬೋಧನಾ ಸಾಮಾಗ್ರಿ, ಡೆಸ್ಕ್, ಬೆಂಚು, ಕುಡಿಯುವ ನೀರು, ಶೌಚಾಲಯ ಹೀಗೆ ಶಿಕ್ಷಣಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡುತ್ತ ಬರುತ್ತಿದೆ ಎಂದು ವಿವರಿಸಿದರು.
ಮಕ್ಕಳು ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿರುವುದು ಆತಂಕದ ಸಂಗತಿ. ದುಶ್ಚಟಗಳಿಂದ ದೂರವಿದ್ದು, ಶಿಕ್ಷಣದ ಕಡೆಗೆ ಒತ್ತು ಕೊಡಬೇಕೆಂದು ತಿಳಿಸಿದರು.
ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಸತ್ಯನಾರಾಯಣಶೆಟ್ಟಿ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್, ಸದಸ್ಯರುಗಳಾದ ರೂಪ ಜನಾರ್ಧನ್, ರಾಜು ನಾಯಕ್, ನಾಗರಾಜ್ ಸಂಗಮ್, ಮಹಮದ್ ನೂರುಲ್ಲಾ, ಕಿರಣ್ ಶಂಕರ್, ಶಾಂತ ಅಶೋಕ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ವೇದಿಕೆಯಲ್ಲಿದ್ದರು.
ತಾಲ್ಲೂಕು ಯೋಜನಾಧಿಕಾರಿಗಳಾದ ಬಿ.ಅಶೋಕ್, ರವಿಚಂದ್ರನ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.