For the best experience, open
https://m.suddione.com
on your mobile browser.
Advertisement

ಕಾಮಗಾರಿಗಳು ಕಳಪೆಯಾಗಿದ್ದರೆ ತನಿಖೆಗೊಳಪಡಿಸಿ : ಶಾಸಕ ಕೆ.ಸಿ.ವೀರೇಂದ್ರಪಪ್ಪಿ

08:15 PM Jun 13, 2023 IST | suddionenews
ಕಾಮಗಾರಿಗಳು ಕಳಪೆಯಾಗಿದ್ದರೆ ತನಿಖೆಗೊಳಪಡಿಸಿ   ಶಾಸಕ ಕೆ ಸಿ ವೀರೇಂದ್ರಪಪ್ಪಿ
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, (ಜೂ.13) : ಅಮೃತ ಯೋಜನೆಯಡಿ ಆಗಿರುವ ಕಾಮಗಾರಿಗಳು ಕಳಪೆಯಾಗಿದ್ದರೆ ತನಿಖೆಗೊಳಪಡಿಸಿ ಎಂದು ನೂತನ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ನಗರಸಭೆ ಪೌರಾಯುಕ್ತ ಶ್ರೀನಿವಾಸ್‍ಗೆ ಸೂಚಿಸಿದರು.

ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಸದಸ್ಯರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಶಾಸಕರು ಐದು ವರ್ಷಗಳ ಕಾಲ ಸರಿಯಾಗಿ ನೀರು ಪೂರೈಸುವ ಕೆಲಸ ನಿಭಾಯಿಸದಿದ್ದರೆ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ಆಗಿರುವ ಕಾಮಗಾರಿಗಳನ್ನು ತನಿಖೆ ನಡೆಸಲು ರೆಸಲೂಷನ್ ಮಾಡಿ ಎಂದು ಪೌರಾಯುಕ್ತರಿಗೆ ಎಚ್ಚರಿಕೆ ನೀಡಿದ ಶಾಸಕರು ಮೂವತ್ತು ವರ್ಷಗಳಿಂದ ನಗರದಲ್ಲಿ ಏನಾಗಿದೆ ಎನ್ನುವುದು ಬೇಕಾಗಿಲ್ಲ. ಇನ್ನು ಮುಂದೆ ನಗರವನ್ನು ಯಾವ ರೀತಿ ಅಭಿವೃದ್ದಿಪಡಿಸಬೇಕು ಎನ್ನುವುದು ಮುಖ್ಯ. ಅದಕ್ಕಾಗಿ ಅಧಿಕಾರಿಗಳು ಹಾಗೂ ಸದಸ್ಯರುಗಳ ಪರಸ್ಪರ ಸಹಕಾರ ಬೇಕು ಎಂದು ಮನವಿ ಮಾಡಿದರು.

Advertisement

ರಾಜಮಹರಾಜರುಗಳು ಆಳಿದ ಐತಿಹಾಸಿಕ ಚಿತ್ರದುರ್ಗ ನಗರ ಹಿಂದೆ ಹೇಗಿತ್ತೋ ಈಗಲೂ ಹಾಗೆ ಇದೆ. ನಗರ ಅಭಿವೃದ್ದಿ ಆಗದಿರುವುದಕ್ಕೆ ಏನು ಕಾರಣ ಎಂದು ಒಂದು ವರ್ಷದ ಹಿಂದೆ ಸರ್ವೆ ಮಾಡಿಸಿದ್ದೇನೆ. ಪ್ರತಿ ಐದು ವರ್ಷಗಳಿಗೊಮ್ಮೆ ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದಿಂದ ನಗರ ವಿಸ್ತರಣೆಯಾಗಬೇಕು. ಆಗಿಲ್ಲ. ಅದಕ್ಕೆ ಕಾರಣಗಳೇನು ಎನ್ನುವುದನ್ನು ಹುಡುಕುವ ಬದಲು ಅಭಿವೃದ್ದಿಗೆ ಏನು ಬೇಕೋ ಅದನ್ನು ಸರ್ಕಾರ ಮಟ್ಟದಿಂದ ಮಾಡಿಸಲು ಶ್ರಮಿಸುತ್ತೇನೆ.

ನಗರದಲ್ಲಿರುವ ಸಾಕಷ್ಟು ಸರ್ಕಾರಿ ಕಚೇರಿಗಳು ಹಳೆಯದಾಗಿದೆ. ಸಿಬ್ಬಂದಿಗಳು ಕೂರಲು ಜಾಗವಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಪೌರ ಕಾರ್ಮಿಕರ ಸಂಖ್ಯೆ ಕಡಿಮೆಯಿದೆ. ಕನಿಷ್ಟ ನೂರು ಪೌರ ಕಾರ್ಮಿಕರನ್ನಾದರೂ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಸರ್ಕಾರದಲ್ಲಿ ಚರ್ಚಿಸುತ್ತೇನೆ. ಶಾಂತಿಸಾಗರದಿಂದ ನಗರಕ್ಕೆ ನೀರು ಸರಬರಾಜಾಗುವ ಪೈಪ್‍ಲೈನ್ ಇನ್ನೊಂದು ದಿನದಲ್ಲಿ ದುರಸ್ಥಿಯಾಗದಿದ್ದರೆ ನಾಡಿದ್ದಿನಿಂದ ಬಾಡಿಗೆ ಟ್ಯಾಂಕರ್‍ಗಳನ್ನು ತೆಗೆದುಕೊಂಡು ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.

ಯು.ಜಿ.ಡಿ.ಯಿಂದ ನಗರಕ್ಕಿಂತ ಹೆಚ್ಚು ಗ್ರಾಮೀಣ ಪ್ರದೇಶದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ನಗರದ ಕೊಳಚೆ ನೀರು ಮಲ್ಲಾಪುರ ಕೆರೆ ಸೇರಿ ಅಲ್ಲಿಂದ ಗೋನೂರಿಗೆ ಹೋಗುತ್ತದೆ. ನಗರಸಭೆಯಲ್ಲಿ ಕೇವಲ ಒಬ್ಬರೆ ಇಂಜಿನಿಯರ್ ಇದ್ದಾರೆ. ಇನ್ನು ನಾಲ್ಕೈದು ಇಂಜಿನಿಯರ್‍ಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಿ. ಇಲ್ಲಿಯವರೆಗೂ ಕಾಮಗಾರಿಗಳಲ್ಲಿ ಆಗಿರುವ ತಾರತಮ್ಯಗಳನ್ನು ಪಟ್ಟಿ ಮಾಡಿ ಇನ್ನು ಮುಂದೆ ನಗರದ 35 ವಾರ್ಡ್‍ಗಳಲ್ಲಿಯೂ ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣಲಾಗುವುದು.

ನನಗೆ ಯಾರು ಓಟು ಹಾಕಿದ್ದಾರೆ. ಹಾಕಿಲ್ಲ ಎನ್ನುವುದು ಬೇಡ. ಕೋಟೆ ರಸ್ತೆ ಮೊದಲು ಸರಿಯಾಗಬೇಕು. ಗುಣಮಟ್ಟವಿಲ್ಲದೆ ಕಳಪೆಯಾದರೆ ಸಹಿಸುವುದಿಲ್ಲ. ಈಗಾಗಲೆ ನಗರದಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ಡಿವೈಡರ್‍ಗಳನ್ನು ತೆಗೆಯುವುದಕ್ಕಾಗಿ ಸಂಬಂಧಪಟ್ಟ ಇಲಾಖೆಯವರಿಂದ ವರದಿ ಕೇಳಿದ್ದೇನೆ. ಶೇ.80 ರಷ್ಟು ಪೇಪರ್ ವರ್ಕ್ ಮುಗಿದಿದೆ. ಜುಲೈ ತಿಂಗಳೊಳಗೆ ಮುಗಿಸಬೇಕೆಂಬ ಗುರಿಯಿದೆ. ಸಿಬ್ಬಂದಿಗಳ ಹಾಜರಾತಿ ಡೈರಿಯನ್ನು ಸರಿಯಾಗಿ ನಿರ್ವಹಿಸಿ. ನಗರದ 35 ವಾರ್ಡ್‍ಗಳಲ್ಲಿ ಎಷ್ಟು ಬೋರ್‍ಗಳಿವೆ. ಎಲ್ಲೆಲ್ಲಿ ಎಷ್ಟು ಬೋರ್‍ಗಳು ಬೇಕು ಎನ್ನುವುದನ್ನು ಪಟ್ಟಿ ಮಾಡಿ ವರದಿ ಕೊಡಿ. ಸದಸ್ಯರುಗಳು ಚುರುಕಾಗಿ ಅಧಿಕಾರಿಗಳ ಬೆನ್ನತ್ತಿ ಕೆಲಸ ಮಾಡಿಸಿಕೊಳ್ಳಿ. ಖಾತೆ ಬದಲಾವಣೆ, ಇ-ಸ್ವತ್ತಿಗಾಗಿ ಜನರನ್ನು ವಿನಾ ಕಾರಣ ಅಲೆದಾಡಿಸಬೇಡಿ ಎಂದು ಪೌರಾಯುಕ್ತರು ಹಾಗೂ ಸಿಬ್ಬಂದಿಗಳಿಗೆ ಚುರುಕು ಮುಟ್ಟಿಸಿದರು.

ನಗರಸಭೆ ಮಾಜಿ ಅಧ್ಯಕ್ಷೆ ತಿಪ್ಪಮ್ಮ, ಮಾಜಿ ಉಪಾಧ್ಯಕ್ಷೆ ಶ್ವೇತ ವೀರೇಶ್, ಸದಸ್ಯರುಗಳಾದ ವೆಂಕಟೇಶ್, ಪೂಜ, ಗೀತ, ನಾಗಮ್ಮ, ಕೆ.ಬಿ.ಸುರೇಶ್, ಮಾಜಿ ಸದಸ್ಯರುಗಳಾದ ಫಕೃದ್ದಿನ್, ದಾವೂದ್, ರಮೇಶ್, ನಗರಸಭೆ ಮ್ಯಾನೇಜರ್ ಮಂಜುಳ, ಲೆಕ್ಕ ಅಧೀಕ್ಷಕ ಮೆಹಬೂಬ್‍ಆಲಿ, ಸಹಾಯಕ ಇಂಜಿನಿಯರ್ ಗಿರೆಡ್ಡಿ, ಪರಿಸರ ಇಂಜಿನಿಯರ್ ಜಾಫರ್, ಹೆಲ್ತ್ ಇನ್ಸ್‍ಪೆಕ್ಟರ್‍ಗಳು ಸಭೆಯಲ್ಲಿ ಹಾಜರಿದ್ದರು.

Advertisement
Tags :
Advertisement