ಭದ್ರಾಮೇಲ್ದಂಡೆ ಯೋಜನೆ ಜಾರಿಗೊಳಿಸದಿದ್ದರೆ ಚುನಾವಣೆಯಲ್ಲಿ ತಕ್ಕ ಪಾಠ : ರೈತ ಸಂಘಟನೆಗಳ ಆಕ್ರೋಶ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.22 : ಭದ್ರಾಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಕಾಯ್ದಿರಿಸಿರುವ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದಿರುವುದನ್ನು ವಿರೋಧಿಸಿ ಜಿಲ್ಲಾ ಪಂಚಾಯಿತಿಯಲ್ಲಿರುವ ಸಂಸದರ ಕಚೇರಿ ಎದುರು ಕಳೆದ ಹದಿನೆಂಟು ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಅಖಂಡ ಕರ್ನಾಟಕ ರೈತ ಸಂಘ ವಿವಿಧ ಜನಪರ, ಪ್ರಗತಿಪರ, ದಲಿತ ಸಂಘಟನೆಗಳಿಂದ ಬುಧವಾರ ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಲಾಯಿತು.
ಗಾಂಧಿ ವೃತ್ತದಿಂದ ಹೊರಟ ಪಂಜಿನ ಮೆರವಣಿಗೆ ಆನೆಬಾಗಿಲು, ದೊಡ್ಡಪೇಟೆ, ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಮುಂಭಾಗದಿಂದ ರಂಗಯ್ಯನಬಾಗಿಲು, ಜೋಗಿಮಟ್ಟಿ ವೃತ್ತದ ಮೂಲಕ ಜಿಲ್ಲಾ ಪಂಚಾಯಿತಿ ತಲುಪಿತು.
ಪಂಜಿನ ಮೆರವಣಿಗೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ ಬರಪೀಡಿತ ಪ್ರದೇಶ ಚಿತ್ರದುರ್ಗ ಜಿಲ್ಲೆಗೆ ಭದ್ರಾಮೇಲ್ದಂಡೆ ಯೋಜನೆಯನ್ನು ಜಾರಿಗೆ ತಂದು ನೀರು ಹರಿಸುವಂತೆ ಅನೇಕ ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಕೇಂದ್ರದ ಮೇಲೆ ರಾಜ್ಯ ಸರ್ಕಾರ. ರಾಜ್ಯದ ಮೇಲೆ ಕೇಂದ್ರ ಸರ್ಕಾರ ಆಪಾದನೆ ಮಾಡುವುದಲ್ಲಿ ಕಾಳ ಕಳೆಯುತ್ತಿದೆಯೇ ವಿನಃ ಯೋಜನೆಯಂತು ಇನ್ನು ಪೂರ್ಣಗೊಂಡಿಲ್ಲ. ದೇಶಕ್ಕೆ ಅನ್ನ ನೀಡುವ ರೈತರನ್ನು ಎಲ್ಲಾ ಪಕ್ಷಗಳು ಯಾಮಾರಿಸುತ್ತಲೆ ಬರುತ್ತಿವೆ. ಕೂಡಲೆ ಐದು ಸಾವಿರದ ಮುನ್ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿ ಭದ್ರಾಮೇಲ್ದಂಡೆ ಯೋಜನೆಯನ್ನು ಜಾರಿಗೆ ತರದಿದ್ದರೆ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಎಲ್ಲಾ ಪಕ್ಷಗಳಿಗೂ ತಕ್ಕ ಪಾಠ ಕಲಿಸಲಾಗುವುದೆಂದು ಎಚ್ಚರಿಸಿದರು.
ಹೊಳಲ್ಕೆರೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಜಯಣ್ಣ, ಮಹದೇವಪ್ಪ, ಹೊಳಲ್ಕೆರೆ ನಗರಾಧ್ಯಕ್ಷ ರಂಗಸ್ವಾಮಿ, ಮಲ್ಲಿಕಾರ್ಜುನ್, ರಂಗಸ್ವಾಮಿ, ಪ್ರಕಾಶ್, ಜಿಲ್ಲಾ ಕಾರ್ಯದರ್ಶಿ ಬಸವರಾಜಪ್ಪ, ಪ್ರಸನ್ನಕುಮಾರ್ ಇನ್ನು ಮುಂತಾದವರು ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.