ಚಿತ್ರದುರ್ಗಕ್ಕೆ ಬಂತು ದೆಹಲಿ ಚಲೋ ಯಾತ್ರೆ : ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಬೇಡಿಕೆಗಳೇನು ?
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.27 : ನೂತನ ಪಿಂಚಣಿ ರದ್ದುಪಡಿಸುವುದು ಸೇರಿದಂತೆ ಹನ್ನೆರಡು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಕಳೆದ 25 ರಂದು ಬೆಂಗಳೂರಿನಿಂದ ಆರಂಭಿಸಿರುವ ದೆಹಲಿ ಚಲೋ ಯಾತ್ರೆ ಮದ್ದೂರು, ಮಳವಳ್ಳಿ, ಮೈಸೂರು, ಹಾಸನ, ಶಿವಮೊಗ್ಗ, ದಾವಣಗೆರೆ ಮೂಲಕ ಬುಧವಾರ ಚಿತ್ರದುರ್ಗಕ್ಕೆ ಆಗಮಿಸಿತು.
ರಾಜ್ಯದಲ್ಲಿ ಏಳನೇ ವೇತನ ಆಯೋಗದ ವೇತನ ಪರಿಷ್ಕರಣೆ ಶೇ.40 ರಷ್ಟು ಹೆಚ್ಚಿಸಿ ಕೂಡಲೆ ಜಾರಿಗೊಳಿಸಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳಲ್ಲಿ, ಸಾರ್ವಜನಿಕ ಉದ್ದಿಮೆಗಳಲ್ಲಿ ಖಾಲಿಯಿರುವ 60 ಲಕ್ಷ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಬೇಕು.
ರಾಜ್ಯದಲ್ಲಿ ಆಡಳಿತ ಸುಧಾರಣಾ ಆಯೋಗ-2 ರಲ್ಲಿ ನೌಕರ ವಿರೋಧಿ ಮತ್ತು ಸಾರ್ವಜನಿಕ ಸೇವೆಗಳ ಖಾಸಗೀಕರಣ ಶಿಫಾರಸ್ಸುಗಳನ್ನು ಕೈಬಿಡಬೇಕು. ತಡೆಹಿಡಿದಿರುವ ಹದಿನೆಂಟು ತಿಂಗಳ ತುಟ್ಟಿಭತ್ಯೆಯನ್ನು ತುರ್ತಾಗಿ ಬಿಡುಗಡೆಗೊಳಿಸಬೇಕು.ಅನುಕಂಪ ಆಧಾರಿತ ನೀಡುವ ಕೆಲಸಗಳಿಗೆ ವಿಧಿಸಿರುವ ಎಲ್ಲಾ ನಿಬಂಧನೆಗಳನ್ನು ರದ್ದುಪಡಿಸಬೇಕು.
ರಾಜ್ಯದ ಎಲ್ಲಾ ಇಲಾಖೆಗಳಲ್ಲಿನ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿ ಸಿ.ಅಂಡ್ ಆರ್.ಪರಿಷ್ಕರಣೆ ಮತ್ತು ಮುಂಬಡ್ತಿ ನೀಡಲು ಕ್ರಮ ವಹಿಸುವುದು. ಸಚಿವಾಲಯದ ಸಿ ಅಂಡ್ ಆರ್. ನಿಯಮಗಳ ಪ್ರಕಾರವೇ ಖಾಲಿ ಹುದ್ದೆಗಳ ನಿಯೋಜನೆ, ಭರ್ತಿಗೆ ಕ್ರಮ ಕೈಗೊಂಡು ಹುದ್ದೆಗಳ ರದ್ದತಿ ವಿಲೀನ ಪ್ರಕ್ರಿಯೆ ಕೈಬಿಡಬೇಕು.
ಆರೋಗ್ಯ, ಆಹಾರ, ಶಿಕ್ಷಣ ಒಳಗೊಂಡಂತೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ/ಹೊರಗುತ್ತಿಗೆ/ಅತಿಥಿ ನೌಕರರನ್ನು ನಿಯಮಾನುಸಾರ ಖಾಯಂಗೊಳಿಸಿ ಸುಪ್ರೀಂಕೋರ್ಟ್ ಅನುಸಾರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು.
ಅಸಂವಿಧಾನಿಕವಾದ ನೌಕರ ವಿರೋಧಿ ಅಂಶಗಳನ್ನು ನಡತೆ ನಿಯಮಗಳಿಂದ ಕೈಬಿಡಬೇಕು. ನೌಕರ/ಕಾರ್ಮಿಕ ಸಂಘಟನೆಗಳಿಗೆ ಪ್ರಜಾಸತ್ತಾತ್ಮಕ ಹಕ್ಕನ್ನು ಖಾತರಿಪಡಿಸಬೇಕು ಮತ್ತು ನ್ಯಾಯಯುತವಾದ ಬೇಡಿಕೆಗಳಿಗಾಗಿ ಒತ್ತಾಯಿಸುತ್ತಿರುವ ನೌಕರ ಸಂಘಟನೆಗಳ ಸಂಯೋಜನೆ ರದ್ದತಿ ಆದೇಶ ಹಿಂದಕ್ಕೆ ಪಡೆಯಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಬೇಕೆಂದು ಒತ್ತಾಯಿಸಿ ನ.3 ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದೆಂದು ದೆಹಲಿ ಚಲೋ ಯಾತ್ರೆಯಲ್ಲಿ ಭಾಗವಹಿಸಿರುವ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕಾರ್ಯಾಧ್ಯಕ್ಷೆ ಎನ್.ಶೋಭಾ ಲೋಕನಾಗಣ್ಣ ತಿಳಿಸಿದರು.
ಅಧ್ಯಕ್ಷ ಜೈಕುಮಾರ್ ಹೆಚ್.ಎಸ್. ನಾಗರಾಜ್ ಪತ್ತಾರ್, ಸಂಘಟನಾ ಕಾರ್ಯದರ್ಶಿ ವಿನಯ್ ದೆಹಲಿ ಚಲೋ ಯಾತ್ರೆಯಲ್ಲಿದ್ದರು.