ಕರ್ನಾಟಕದಲ್ಲೂ ಬಾಂಬೆ ಮಿಠಾಯಿ ನಿಷೇಧಕ್ಕೆ ನಿರ್ಧಾರ : ಅಷ್ಟಕ್ಕೂ ಮಿಠಾಯಿಯಲ್ಲಿರುವ ರೊಡಮೈನ್-ಬಿ ಎಷ್ಟು ಡೇಂಜರ್..?
ಬಾಂಬೆ ಮಿಠಾಯಿ ಅಂದ್ರೆ ಸಾಕು ಬಾಯಲ್ಲಿ ನೀರು ಬರುವುದೇ ಹೆಚ್ಚು. ಮಕ್ಕಳಂತು ನಾಲಿಗೆಯನ್ನು ಪಿಂಕ್ ಮಾಡಿಕೊಂಡು ತಿಂದು ಖುಷಿ ಪಡುತ್ತಾರೆ. ಆದರೆ ಇಂಥ ತಿಂಡಿಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದರೆ ಆತಂಕವಾಗುವುದಿಲ್ಲವೆ. ಯಾಕಂದ್ರೆ ಈ ಬಾಂಬೆ ಮಿಠಾಯಿಯನ್ನು ತಿನ್ನುವುದಕ್ಕೆ ಯಾವುದೇ ರೀತಿಯ ವಯಸ್ಸಿನ ಅಂತರವಿಲ್ಲ. ಎಲ್ಲಾ ವರ್ಗದವರು ಇಷ್ಟಪಟ್ಟು ತಿನ್ನುತ್ತಾರೆ. ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದ ಮೇಲೆ ಹಲವು ರಾಜ್ಯಗಳಲ್ಲಿ ಈಗಾಗಲೇ ಬಾಂಬೆ ಮಿಠಾಯಿ ಬ್ಯಾನ್ ಮಾಡಲಾಗಿದೆ. ಇದೀಗ ಕರ್ನಾಟಕ ಸರ್ಕಾರದಿಂದಲೂ ಬ್ಯಾನ್ ಮಾಡುವ ಯೋಚನೆ ಮಾಡಿದೆ.
ಈ ಬಾಂಬೆ ಮಿಠಾಯಿಯಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ರೊಡಮೈನ್-ಬಿ ಎಂಬ ಹಾನಿಕಾರಕ ಅಂಶವಿದೆ. ಈ ಹಿನ್ನೆಲೆ ಈಗಾಗಲೇ ಪುದುಚೇರಿ ಹಾಗೂ ತಮಿಳುನಾಡಿನಲ್ಲಿ ಬ್ಯಾನ್ ಮಾಡಲಾಗಿದೆ. ಕರ್ನಾಟಕ ಭಾರತೀಯ ಆಹಾರ ಮತ್ತು ಗುಣಮಟ್ಟ ಪ್ರಾಧಿಕಾರದ ಜಂಟಿ ಆಯುಕ್ತ ಡಾ.ಹರೀಶ್ವರ ಈ ಬಗ್ಗೆ ಮಾಹಿತಿ ನೀಡಿದ್ದು, ರಾಜ್ಯಾದ್ಯಂತ ವ್ಯಾಪಾರ ಮೇಳಗಳು, ಮದುವೆಗಳು ಮತ್ತು ಉದ್ಯಾನವನಗಳು ಸೇರಿದಂತೆ ಎಲ್ಲಾ ಕಡೆಯಲ್ಲೂ ಕಾಟನ್ ಕ್ಯಾಂಡಿಯ ತಯಾರಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಪರೀಕ್ಷೆಯ ಫಲಿತಾಂಶಗಳ ನಂತರ ಅದರ ನಿಷೇಧದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಇದೆ ವೇಳೆ ಆರೋಗ್ಯ ಆಯುಕ್ತರಾದ ರಂದೀಪ್ ಮಾತನಾಡಿ, ಆಹಾರ ಸುರಕ್ಷತಾ ಆಯುಕ್ತರು ಈಗಾಗಲೇ ಕಾಟನ್ ಕ್ಯಾಂಡಿ ಮಾದರಿಗಳ ಸಂಗ್ರಹವನ್ನು ಪ್ರಾರಂಭಿಸಿದ್ದಾರೆ. ನಾವೂ ಫಲಿತಾಂಶಗಳನ್ನು ವಿಶ್ಲೇಷಿಸುತ್ತೇವೆ. ಇದಲ್ಲದೆ ಆರೋಗ್ಯ ಕಮಿಷನರೇಟ್ ನಿಂದಲೂ ನಾವೂ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಮೌಲ್ಯಮಾಪನ ಮಾಡುತ್ತೇವೆ ಎಂದಿದ್ದಾರೆ.
ರೊಡಮೈನ್-ಬಿ ಆಹಾರಕ್ಕರ ಸೇರಿದಾಗ ಇದು ಬಣ್ಣವನ್ನು ಹೆಚ್ಚಿಸುತ್ತದೆ. ಮಾನವನ ದೇಹಕ್ಕೆ ಇದು ವಿಷಕಾರಿಯಾಗಿದೆ. ಆಕ್ಸಿಡೇಟಿವ್ ಒತ್ತಡವನ್ನು ಜಾಸ್ತಿ ಮಾಡುತ್ತದೆ. ಯಕೃತ್ ಹಾನಿ, ಗೆಡ್ಡೆಗಳನ್ನು ಬೆಳೆಯುವಂತೆ ಮಾಡುತ್ತೆ. ಈ ಮೂಲಕ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಕಾಟನ್ ಕ್ಯಾಂಡಿಗೆ ಮಾತ್ರವಲ್ಲ ಜೆಲ್ಲಿಗಳು ಹಾಗೂ ಮಿಠಾಯಿಗಳಿಗೆ ಆಕರ್ಷಕ ಬಣ್ಣ ನೀಡಲು ಈ ಕೆಮಿಕಲ್ ಬಳಕೆ ಮಾಡಲಾಗುತ್ತದೆಯಂತೆ.