For the best experience, open
https://m.suddione.com
on your mobile browser.
Advertisement

ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ : ಸಿಎಂ ಸಿದ್ದರಾಮಯ್ಯ ಸಂತಾಪ

05:03 PM Sep 12, 2024 IST | suddionenews
ಸಿಪಿಎಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನ   ಸಿಎಂ ಸಿದ್ದರಾಮಯ್ಯ ಸಂತಾಪ
Advertisement

Advertisement
Advertisement

ಸುದ್ದಿಒನ್, ನವದೆಹಲಿ, ಸೆಪ್ಟೆಂಬರ್. 12 : ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ನಿಧನರಾಗಿದ್ದಾರೆ. ಅವರು ಉಸಿರಾಟ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಆಗಸ್ಟ್ 19 ರಂದು ದೆಹಲಿಯ ಏಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ವೈದ್ಯರು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ಅಂತಿಮವಾಗಿ, ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು (ಸೆಪ್ಟೆಂಬರ್ 12, ಗುರುವಾರ) ಕೊನೆಯುಸಿರೆಳೆದರು.

ತೀವ್ರ ಜ್ವರದಿಂದ ಬಳಲುತ್ತಿದ್ದ ಸೀತಾರಾಂ ಯೆಚೂರಿ ಕಳೆದ 25 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಡಾ.ಶ್ರೀನಾಥರೆಡ್ಡಿ ಮತ್ತು ಡಾ.ಗೌರಿ ನೇತೃತ್ವದ ವೈದ್ಯಕೀಯ ತಂಡ ಚಿಕಿತ್ಸೆ ನೀಡಿತ್ತು. ಆದರೆ ಸೋಂಕನ್ನು ಹೋಗಲಾಡಿಸಲು ಬಳಸಿದ ಔಷಧಗಳು ಕೆಲಸ ಮಾಡದ ಕಾರಣ ಜಪಾನ್ ನಿಂದಲೂ ವಿಶೇಷ ಔಷಧಗಳನ್ನು ತರಿಸಲಾಗಿತ್ತು. ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಇದು ಕಮ್ಯುನಿಸ್ಟ್ ವಲಯದಲ್ಲಿ ತೀವ್ರ ದುಃಖವನ್ನುಂಟು ಮಾಡಿತು.

Advertisement
Advertisement

ಸೀತಾರಾಮ್ ಯೆಚೂರಿ ಅವರು 1952 ಆಗಸ್ಟ್ 12 ರಂದು ಚೆನ್ನೈನಲ್ಲಿ ಜನಿಸಿದರು. ಅವರು ಹೈದರಾಬಾದ್‌ನಲ್ಲಿ ಬೆಳೆದರು. 10ನೇ ತರಗತಿವರೆಗೆ ಆಲ್ ಸೇಂಟ್ಸ್ ಹೈಸ್ಕೂಲಿನಲ್ಲಿ, 12ನೇ ತರಗತಿಯ ಪರೀಕ್ಷೆಯಲ್ಲಿ ದೇಶಕ್ಕೆ ಪ್ರಥಮ ರ‍್ಯಾಂಕ್ ಪಡೆದಿದ್ದರು.

1969ರ ತೆಲಂಗಾಣ ಚಳವಳಿಯ ಸಂದರ್ಭದಲ್ಲಿ ಅವರು ದೆಹಲಿ ತಲುಪಿದ್ದರು. ಯೆಚೂರಿ ಅವರು ದೆಹಲಿಯ ಪ್ರೆಸಿಡೆಂಟ್ಸ್ ಎಸ್ಟೇಟ್ ಶಾಲೆಯಲ್ಲಿ ಪ್ರವೇಶ ಪಡೆದರು. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಹೈಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಅಖಿಲ ಭಾರತ ರ್ಯಾಂಕ್ ಒಂದನ್ನು ಸಾಧಿಸಿದರು. ಅವರು ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಮೊದಲ ಶ್ರೇಣಿಯೊಂದಿಗೆ ಅರ್ಥಶಾಸ್ತ್ರದಲ್ಲಿ ತಮ್ಮ ಬಿಎ (ಆನರ್ಸ್) ಪೂರ್ಣಗೊಳಿಸಿದರು. ನಂತರ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ (ಜೆಎನ್‌ಯು) ಅರ್ಥಶಾಸ್ತ್ರದಲ್ಲಿ ಎಂಎ ಮಾಡಿದರು. ಪಿಎಚ್‌ಡಿಗಾಗಿ ಜೆಎನ್‌ಯುನಲ್ಲಿ ಪ್ರವೇಶ ಪಡೆದರು. ಆದಾಗ್ಯೂ, 1975 ರಲ್ಲಿ, ಅವರು ತುರ್ತು ಪರಿಸ್ಥಿತಿಯಲ್ಲಿ ಬಂಧಿಸಲ್ಪಟ್ಟರು.

ಸಿಎಂ ಸಿದ್ದರಾಮಯ್ಯ ಸಂತಾಪ : ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಎಡ ಸಿದ್ದಾಂತದ ಪ್ರಖರ ಚಿಂತಕರಾಗಿದ್ದ ಯಚೂರಿ ಅವರು ಅಪ್ಪಟ ಪ್ರಜಾಪ್ರಭುತ್ವವಾದಿಯೂ ಆಗಿದ್ದರು.

ಕೋಮುವಾದಿ ರಾಜಕೀಯದ ವಿರುದ್ಧ ಜಾತ್ಯತೀತ ಶಕ್ತಿಗಳ ಒಗ್ಗೂಡಿಸುವಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತಾ ಬಂದಿರುವ ಯಚೂರಿಯವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ರೂವಾರಿಗಳಲ್ಲೊಬ್ಬರಾಗಿದ್ದರು. ಆ ಸರ್ಕಾರದ 'ಸಾಮಾನ್ಯ ಕನಿಷ್ಠ ಕಾರ್ಯಕ್ರಮ' ರಚನೆಯಲ್ಲಿಯೂ ಅವರದ್ದೇ ಪ್ರಧಾನ ಪಾತ್ರ ಇತ್ತು. ಕಳೆದ ವರ್ಷ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಆಗಮಿಸಿ, ಶುಭ ಹಾರೈಸಿದ್ದರು. ಈಗಿನ 'ಇಂಡಿಯಾ' ಒಕ್ಕೂಟ ಸ್ಥಾಪನೆಯಲ್ಲಿಯೂ ಅವರ ಕೊಡುಗೆ ಇದೆ.

ಸೀತಾರಾಮ್ ಯಚೂರಿ ಅವರ ನಿಧನದಿಂದ ಕೋಮುವಾದ ಮತ್ತು ಬಂಡವಾಳವಾದದ ವಿರುದ್ಧದ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ.

ಯಚೂರಿ ಅವರ ಕುಟುಂಬ ಮತ್ತು ಸಂಗಾತಿಗಳ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು x ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.

https://x.com/siddaramaiah/status/1834191388310659192?t=XibgT8XE-Gz79kMt3zIoOw&s=19

Advertisement
Tags :
Advertisement