ಚಿತ್ರದುರ್ಗ | ಕರ್ತವ್ಯ ಲೋಪ, ಇಬ್ಬರು ಗ್ರಾಪಂ ಪಿಡಿಓಗಳ ಅಮಾನತು : ಜಿಪಂ ಸಿಇಒ ಆದೇಶ
ಸುದ್ದಿಒನ್, ಹಿರಿಯೂರು, ಮಾರ್ಚ್.03 : ತಾಲ್ಲೂಕಿನ ಕರಿಯಾಲ ಹಾಗೂ ಯರಬಳ್ಳಿ ಗ್ರಾಮ ಪಂಚಾಯಿತಿ ಪಿಡಿಒಗಳು ಕರ್ತವ್ಯ ಲೋಪವೆಸಗಿದ್ದರೆಂಬ ಆರೋಪದ ಮೇರೆಗೆ ಇಬ್ಬರನ್ನೂ ಪಿಡಿಓ ಗಳನ್ನು ಅಮಾನತು ಮಾಡಿ, ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೊರಡಿಸಿದ್ದಾರೆ.
ಕರಿಯಾಲ ಗ್ರಾಮ ಪಂಚಾಯಿತಿ ಪಿಡಿಒ ಈ. ಚಂದ್ರಕಲಾ ಹಾಗೂ ಯರಬಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎಸ್. ಬಸವರಾಜ್ ಅಮಾನತುಗೊಂಡಿದ್ದಾರೆ.
ಯರಬಳ್ಳಿ ಗ್ರಾಮ ಪಂಚಾಯಿತಿಯ ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 58/1ರಲ್ಲಿ 2.15 ಗುಂಟೆ ಗೆ ಸ್ವತ್ತಿಗೆ ಸಂಬಂಧಿಸಿದಂತೆ ಜಾಗೃತಿ ಎಜುಕೇಶನ್ ಟ್ರಸ್ಟ್ ಗೊಲ್ಲಹಳ್ಳಿ ಚಂದ್ರಶೇಖರ್ ಬೆಳಗೆರೆ ಬಿನ್ ಹೆಚ್ ಶಂಕರಪ್ಪ ಇವರ ಹೆಸರಿಗೆ ನಿವೇಶನವನ್ನು ಯರಬಳ್ಳಿ ಗ್ರಾಮ ಪಂಚಾಯಿತಿ ಸಂ: 151000302700200251, ಸದರಿ ಸ್ವತ್ತಿನ ಸಂಖ್ಯೆ 239ಅಂತ ಇದ್ದ ದಾಖಲೆಯನ್ನು ಪಿಡಿಓ ಎಸ್ ಬಸವರಾಜ್ ಇವರು 151000302700200251, ಸದರಿ ಸ್ವತ್ತಿನ ಸಂಖ್ಯೆ 230 ಗ್ರಾಮ ಪಂಚಾಯತಿ ನಿರ್ಣಯದ ಸಂಖ್ಯೆ-7 ದಿನಾಂಕ 15/4/ 2020 ಈ ಸ್ವತ್ತು ದಾಖಲೆಯನ್ನು ನೀಡಲಾಗಿದೆ ಸದರಿ ಈ ಸ್ವತ್ತು ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮ ಮತ್ತು ಕಾನೂನುಬಾಹಿರವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಸರ್ಕಾರಕ್ಕೆ ಮತ್ತು ಗ್ರಾಮ ಪಂಚಾಯಿತಿಗೆ ಆರ್ಥಿಕ ನಷ್ಟ ಉಂಟು ಮಾಡಿರುತ್ತಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಪಿಡಿಓ ಎಸ್. ಬಸವರಾಜು ಅವರನ್ನು ಅಮಾನತು ಮಾಡಲಾಗಿದೆ.
ಅಲ್ಲದೆ ಜವನಗೊಂಡನಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಚಂದ್ರಕಲಾ ಅವರು ಸಾರ್ವಜನಿಕರಿಗೆ ಮತ್ತು ಜನಪ್ರತಿನಿಧಿಗಳೊಂದಿಗೆ ಸೌಜನ್ಯವಾಗಿ ವರ್ತಿಸದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ತೀವ್ರ ನಿರ್ಲಕ್ಷ ವಹಿಸುತ್ತಿದ್ದು, ಗ್ರಾಮ ಪಂಚಾಯತಿ ಕರ್ತವ್ಯಕ್ಕೂ ಸರಿಯಾಗಿ ಹಾಜರಾಗದೆ ತೀವ್ರ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದು, 2023- 24ನೇ ಸಾಲಿನ ಚಾಲ್ತಿ ವರ್ಷದ ಒಟ್ಟು ಕಂದಾಯ ಬೇಡಿಕೆ 9,31,801ರೂ ಗಳಿದ್ದು ಇದರಲ್ಲಿ ಕೇವಲ 1,51,901ರೂಗಳು ಮಾತ್ರ ವಸೂಲಿ ಮಾಡಿ, ಶೇಕಡಾ 16.30 ರಷ್ಟು ಮಾತ್ರ ಪ್ರಗತಿ ಸಾಧಿಸಿರುತ್ತಾರೆ. ಈ ಬಗ್ಗೆ ಸಾಕಷ್ಟು ಬಾರಿ ಈ ಕಚೇರಿಯಿಂದ ಪ್ರಗತಿ ಸಾಧಿಸಲು ಸೂಚಿಸಿದ್ದರೂ, ಪ್ರಗತಿ ಸಾಧಿಸದೆ ಮೇಲಾಧಿಕಾರಿಗಳ ಸೂಚನೆಯನ್ನು ಉಲ್ಲಂಘಿಸುತ್ತಾರೆ ಎಂಬ ಆರೋಪದ ಮೇಲೆ ಅಮಾನತು ಮಾಡಲಾಗಿದೆ.