ಚಿತ್ರದುರ್ಗ | ಒಳ ಮೀಸಲಾತಿ ಅನುಷ್ಠಾನ ವಿಳಂಬ : ತಮಟೆ ಚಳುವಳಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 12 : ಪರಿಶಿಷ್ಟ ಜಾತಿಗಳಲ್ಲಿನ ಉಪ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯಗಳಿಗಿದೆ ಎಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಷ್ಠಾನಕ್ಕೆ ತರಲು ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ.ಬಿ.ಕೃಷ್ಣಪ್ಪ) ಸ್ಥಾಪಿತ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ತಮಟೆ ಚಳುವಳಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಹೊರಟ ದಲಿತರು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿ ನಂತರ ಒನಕೆ ಓಬವ್ವ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ತಮಟೆ ಚಳುವಳಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ಪ್ರೊ.ಬಿ.ಕೃಷ್ಣಪ್ಪನವರು ಒಳ ಮೀಸಲಾತಿಗಾಗಿ ಮೂವತ್ತು ವರ್ಷಗಳ ಕಾಲ ನಡೆಸಿದ ಹೋರಾಟಕ್ಕೆ ಸುಪ್ರೀಂಕೋರ್ಟ್ ತೀರ್ಪಿನಿಂದ ಜಯ ಸಿಕ್ಕಂತಾಗಿದೆ. ಹಾಗಾಗಿ ಒಳ ಮೀಸಲಾತಿಯನ್ನು ಜಾರಿಗೊಳಿಸಿ ಇಲ್ಲವಾದಲ್ಲಿ ಕುರ್ಚಿ ಖಾಲಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗಡುವು ನೀಡಿದರು.
ಕರ್ನಾಟಕ, ಪ0ಜಾಬ್, ಹರಿಯಾಣ, ಬಿಹಾರ, ತಮಿಳುನಾಡು, ಆಂಧ್ರ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಒಳ ಮೀಸಲಾತಿಗಾಗಿ ಸಾಕಷ್ಟು ಹೋರಾಟಗಳು ನಡೆದ
ಫಲವಾಗಿ ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳಿಗೆ ಒಳ ಮೀಸಲಾತಿ ನೀಡುವ ಅಧಿಕಾರವನ್ನು ಸುಪ್ರೀಂಕೋರ್ಟ್ ಆಯಾ ರಾಜ್ಯಗಳಿಗೆ ವಹಿಸಿದ್ದರೂ ರಾಜ್ಯ ಸರ್ಕಾರ ಜಾಣ ಕುರುಡತನ ಪ್ರದರ್ಶಿಸುತ್ತಿರುವುದರಿಂದ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲಾಗುವುದೆಂದು ಕೆಂಗುಂಟೆ ಜಯಣ್ಣ ಎಚ್ಚರಿಸಿದರು.
ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃದ್ದಿಗೆ ಬಳಕೆಯಾಗಬೇಕಾಗಿದ್ದ 25 ಸಾವಿರ ಕೋಟಿ ರೂ.ಗಳನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಚಿತ ಗ್ಯಾರೆಂಟಿಗಳಿಗೆ ಬಳಸಿ ಎಸ್ಸಿ.ಎಸ್ಟಿ.ಗಳಿಗೆ ದ್ರೋಹವೆಸಗಿರುವುದರಿಂದ ಸಮಾಜ ಕಲ್ಯಾಣ ಸಚಿವರು ನೈತಿಕ ಹೊಣೆ ಹೊತ್ತು ಕೂಡಲೆ ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಂಘಟನಾ ಸಂಚಾಲಕರುಗಳಾದ ನಾಗೇಂದ್ರಪ್ಪ, ಬಸವರಾಜ್, ಆರ್.ವೀರಭದ್ರಸ್ವಾಮಿ, ಹಿರಿಯ ಮುಖಂಡ ಶ್ರೀನಿವಾಸ್‍ಮೂರ್ತಿ, ಮೊಳಕಾಲ್ಮುರು ತಾಲ್ಲೂಕು ಸಂಚಾಲಕ ಕರಿಬಸಪ್ಪ, ಹಿರಿಯೂರು ತಾಲ್ಲೂಕು ಸಂಚಾಲಕ ರಘುನಾಥ್, ಚಳ್ಳಕೆರೆ ತಾಲ್ಲೂಕು ಸಂಚಾಲಕ ವಿಜಯಕುಮಾರ್, ಹೊಳಲ್ಕೆರೆ ತಾಲ್ಲೂಕು ಸಂಚಾಲಕ ಸುಂದರಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ಶಿವಣ್ಣ ಮುತ್ತುಗದೂರು, ನವೀನ್ ಮದ್ದೇರು, ಗುಂಡಿಮಡು ಮಂಜಣ್ಣ, ವಿಶ್ವನಾಥಹಳ್ಳಿ ಮಂಜಣ್ಣ, ಆರ್.ರುದ್ರಮುನಿ, ಕರಿಯಪ್ಪ, ಚಿತ್ರದುರ್ಗ ತಾಲ್ಲೂಕು ಸಂಚಾಲಕ ಗುರುಮೂರ್ತಿ, ಡಿ.ಓ.ಮುರಾರ್ಜಿ ಸೇರಿದಂತೆ ನೂರಾರು ದಲಿತರು ತಮಟೆ ಚಳುವಳಿಯಲ್ಲಿ ಪಾಲ್ಗೊಂಡಿದ್ದರು.