Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಾಸಕರಿಗೆ ನಗರಸಭೆ ಸದಸ್ಯರುಗಳಿಂದ ದೂರುಗಳ ಸುರಿಮಳೆ : ನಗರಸಭೆಯಲ್ಲಿ ನಡೆದ ಬಿಸಿಬಿಸಿ ಚರ್ಚೆಯ ಮಾಹಿತಿ ಇಲ್ಲಿದೆ...!

08:31 PM Jun 13, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜೂ.13) ಡಿವೈಡರ್‍ಗಳ ಮೇಲೆ ಮಣ್ಣು ಸುರಿದು ಅದರ ಮೇಲೆ ಚಿಕ್ಕ ಚಿಕ್ಕ ಗಿಡಗಳನ್ನು ನೆಡಲು ಎರಡು ಕೋಟಿ ರೂ. ಬಿಲ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಪಾಸ್ ಮಾಡಬೇಡಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಮಂಜುನಾಥಗೊಪ್ಪೆ ಶಾಸಕರಿಗೆ ದೂರಿದಾಗ ಬಿಲ್ ತಡೆಯಿರಿ ಎಂದು ಪೌರಾಯುಕ್ತರಿಗೆ ಸೂಚಿಸಿದರು.

Advertisement

ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ಸದಸ್ಯರ ಹಾಗೂ ಅಧಿಕಾರಿಗಳ ಸಭೆಯಲ್ಲಿ ನಗರಸಭೆ ಸದಸ್ಯರು ನೂತನ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರಿಗೆ ದೂರುಗಳ ಸುರಿಮಳೆಗೈದರು.

10, 11, 12 ನೇ ವಾರ್ಡ್‍ನಲ್ಲಿ ಅತಿ ಹೆಚ್ಚು ಮುಸ್ಲಿಂರಿದ್ದಾರೆ. ಅಂತಹ ವಾರ್ಡ್‍ಗಳನ್ನು ಹಿಂದಿನ ಶಾಸಕರು ಕಡೆಗಣಿಸಿದ್ದಾರೆ. ನನ್ನ ವಾರ್ಡ್‍ನಲ್ಲಿ ಒಂದು ಬೋರ್ ಕೂಡ ಕೊರೆಸಿಲ್ಲ. ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದೆ ಎಂದು ತನ್ನ ಸಮಸ್ಯೆಗಳನ್ನು ಹೇಳಿಕೊಂಡರು.

ಹದಿನೈದನೆ ವಾರ್ಡ್ ಸದಸ್ಯ ನಗರಸಭೆ ಮಾಜಿ ಅಧ್ಯಕ್ಷ ಡಿ.ಮಲ್ಲಿಕಾರ್ಜುನ್ ಮಾತನಾಡಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಟ್ಯಾಂಕರ್‍ಗಳಿಲ್ಲ. ಬಾಡಿಗೆ ಟ್ಯಾಂಕರ್‍ಗಳನ್ನು ಪಡೆದುಕೊಂಡು ಜನರಿಗೆ ಕುಡಿಯುವ ನೀರು ಒದಗಿಸಿ. ಶಾಂತಿಸಾಗರದಿಂದ ನಗರಕ್ಕೆ ನೀರು ಬರಲು ಹತ್ತು ಕಡೆ ಸೋರುತ್ತಿದೆ. ಆದ್ದರಿಂದ ಎರಡು ಮೂರು ದಿನಕ್ಕೊಮ್ಮೆ ನೀರು ಕೊಡುತ್ತಿದ್ದೇವೆಂದು ಪೌರಾಯುಕ್ತರು ಉತ್ತರಿಸಿದರು.

ಶಾಂತಿಸಾಗರದಿಂದ ನೀರು ಸರಬರಾಜು ಮಾಡಿಕೊಳ್ಳುವುದಕ್ಕಾಗಿ ನಿರ್ಮಿಸಿರುವ ಟ್ಯಾಂಕ್‍ಗಳು ಕಳಪೆಯಾಗಿದೆ. ಬೇಕಾಬಿಟ್ಟಿ ಪೈಪ್ ಹಾಕಿ ಬಿಲ್ ತೆಗೆದುಕೊಂಡಿದ್ದಾರೆ. 35 ವಾರ್ಡ್‍ಗಳಲ್ಲಿ ಯಾವ್ಯಾವ ಕಾಮಗಾರಿಯಾಗಿದೆ. ನೀರಿಗೂ ತಾರತಮ್ಯವಾಗಿದೆ. ಒಂದು ಬೋರ್ ಕೂಡ ಹಾಕಿಸಿಲ್ಲ. ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ. ಇಲ್ಲಿಯವರೆಗೂ ಆಗಿರುವ ಅಕ್ರಮ, ಹಗರಣಗಳ ತನಿಖೆಯಾಗಲಿ ಎಂದು ಸದಸ್ಯ ನಸ್ರುಲ್ಲಾ ದೂರಿದಾಗ ಯಾವುದೇ ಬಿಲ್ ಪಾಸ್ ಮಾಡಬೇಡಿ ತನಿಖೆಗೊಳಪಡಿಸಿ ಎಂದು ಶಾಸಕರು ಪೌರಾಯುಕ್ತರಿಗೆ ಸೂಚಿಸಿದರು.

ಅಮೃತ್ ಯೋಜನೆಯಡಿ ಕಾಮಗಾರಿಗಳು ಅರ್ಧಂಬರ್ಧ ಆಗಿದೆ. ಹಳೆ ಮೋಟಾರ್‍ಗಳಿವೆ. ಬೋರ್ ಕೊರಿಸಲಾಗಿದೆ. ನೀರಲ್ಲ. ಪಂಪ್ ಮೋಟಾರ್ ಅಳವಡಿಸಿ ಹಣ ದೋಚಲಾಗಿದೆ. ಜನರಿಗೆ ನೀರು ಕೊಡಲು ಆಗುತ್ತಿಲ್ಲ. ಗಾಂಧಿ ವೃತ್ತದಲ್ಲಿ ಗಾಂಧಿ ಪ್ರತಿಮೆ ಕೂರಿಸಿ. ಡಿವೈಡರ್‍ಗಳನ್ನು ಸರಿಪಡಿಸಿ ಎಂದು ಮನವಿ ಮಾಡಿದರು.

ಸದಸ್ಯ ಹೆಚ್.ಭಾಸ್ಕರ್ ಮಾತನಾಡುತ್ತ ಕೋಟೆಗೆ ಹೋಗುವ ರಸ್ತೆಯಲ್ಲಿರುವ ಹಳೆ ಸೇತುವೆ ಇಂದಲ್ಲ ನಾಳೆ ಬೀಳುವಂತಿದೆ. ದುರಂತ ಸಂಭವಿಸುವ ಮುನ್ನ ಸರಿಪಡಿಸಿ ಎಂದು ಶಾಸಕರ ಗಮನ ಸೆಳೆದರು.

25 ನೇ ವಾರ್ಡ್ ಸದಸ್ಯ ಜೈನುಲ್ಲಾಬ್ದಿನ್ ಮಾತನಾಡಿ ನನ್ನ ವಾರ್ಡ್‍ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ. ಸ್ಲಂ ಏರಿಯ ಒಂದು ಬೋರ್ ಇಲ್ಲ. ಕುಡಿಯುವ ನೀರಿಗೆ ತೊಂದರೆಯಿದೆ. ಹಿಂದಿನ ಶಾಸಕರು ನಮ್ಮ ವಾರ್ಡ್‍ನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದರು ಎಂದು ಆಪಾದಿಸಿದರು.

ಸರ್ಕಾರಿ ಜಾಗದಲ್ಲಿ ಮಾಂಸ ಮದ್ಯ ಮಾರಾಟಕ್ಕೆ ಅವಕಾಶ ಕೊಡುವಂತಿಲ್ಲ. ಆದರೂ ನಿಯಮ ಉಲ್ಲಂಘಿಸಿ ಗಾಂಧಿ ವೃತ್ತದ ಸಮೀಪ ಹಳೆ ದೀಪ ಹೋಟೆಲ್ ಇದ್ದ ಜಾಗದಲ್ಲಿ ಬಾರ್ ತೆರೆಯಲಾಗಿದೆ. 35 ವಾರ್ಡ್‍ಗಳಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಕಾಮಗಾರಿಗಳಾಗಿವೆ ಎನ್ನುವ ಪಟ್ಟಿ ತೆಗೆಸಿದರೆ ಎಲ್ಲಾ ಅಕ್ರಮಗಳು ಬಹಿರಂಗವಾಗುತ್ತವೆಂದು ಬಹಳಷ್ಟು ಸದಸ್ಯರುಗಳು ಶಾಸಕರಿಗೆ ಮನವರಿಕೆ ಮಾಡಿದರು.

32 ನೇ ವಾರ್ಡ್ ಸದಸ್ಯೆ ತಾರಕೇಶ್ವರಿ ನನ್ನ ಗಮನಕ್ಕೆ ತಾರದೆ ಆಶ್ರಯ ಮನೆಗಳನ್ನು ನೀಡಲಾಗಿದೆ ಎಂದು ತನ್ನ ಅಸಹಾಯಕತೆಯನ್ನು ಶಾಸಕರ ಎದುರು ತೋಡಿಕೊಂಡರು.

ಏಳನೆ ವಾರ್ಡ್ ಸದಸ್ಯೆ ಪಿ.ಕೆ.ಮೀನಾಕ್ಷಿ ನನ್ನ ವಾರ್ಡ್ ಅತ್ಯಂತ ಪುರಾತನ, ಹಿಂದುಳಿದಿದೆ. ಆಗಿರುವ ಕಾಮಗಾರಿಗಳೆಲ್ಲಾ ಕಳಪೆಯಿಂದ ಕೂಡಿದೆ. ಕುಡಿಯುವ ನೀರಿನ ಸಮಸ್ಯೆಯಿದೆ. ಸ್ವಚ್ಚತೆಯಿಲ್ಲ. ಬೋರ್ ಹಾಕಿಸಿಕೊಡಿ ಎಂದು ಶಾಸಕರಲ್ಲಿ ವಿನಂತಿಸಿದರು.

ಎಲ್ಲಾ ಸದಸ್ಯರುಗಳ ಸಮಸ್ಯೆ ಹಾಗೂ ದೂರುಗಳನ್ನು ಸಮಧಾನದಿಂದ ಆಲಿಸಿದ ಶಾಸಕ ಕೆ.ಸಿ.ವೀರೇಂದ್ರಪಪ್ಪಿ ನಗರಸಭೆ ಅಧಿಕಾರಿಗಳು ಹೈಸ್ಕೂಲ್ ಫೀಲ್ಡ್ ಒಂದನ್ನು ಸರ್ಕಸ್‍ಗೆ 60 ದಿನಕ್ಕೆ ಬಾಡಿಗೆ ಕೊಟ್ಟಿದ್ದರು. ಅದನ್ನು ರದ್ದುಪಡಿಸಿದ್ದೇನೆ. ಸ್ವಲ್ಪ ಮೈಮರೆತರೆ ಏನು ಬೇಕಾದರೂ ಬರೆದು ಕೊಡುತ್ತಾರೆ. ನೀವುಗಳು ಜನಪ್ರತಿನಿಧಿಗಳು ಅಧಿಕಾರ ಚಲಾಯಿಸಿ ಯಾವುದೆ ಕಾರಣಕ್ಕೂ ಹೆದರಬೇಡಿ ಎಂದು ಸದಸ್ಯರುಗಳಿಗೆ ಧೈರ್ಯ ತುಂಬಿದರು.

Advertisement
Tags :
bunchchitradurgacity councilcomplaintsdiscussionfeaturedinformationlegislatorsmemberssuddioneಚಿತ್ರದುರ್ಗದೂರುಗಳುನಗರಸಭೆಬಿಸಿಬಿಸಿ ಚರ್ಚೆಮಾಹಿತಿಶಾಸಕರುಸದಸ್ಯರುಸುದ್ದಿಒನ್ಸುರಿಮಳೆ
Advertisement
Next Article