For the best experience, open
https://m.suddione.com
on your mobile browser.
Advertisement

ಕೃತಕ ಹಲ್ಲು ಮತ್ತು ಅದರ ಬಳಕೆ : ಇಲ್ಲಿದೆ ಸಂಪೂರ್ಣ ಮಾಹಿತಿ..!

07:39 AM Aug 13, 2024 IST | suddionenews
ಕೃತಕ ಹಲ್ಲು ಮತ್ತು ಅದರ ಬಳಕೆ   ಇಲ್ಲಿದೆ ಸಂಪೂರ್ಣ ಮಾಹಿತಿ
Advertisement

Advertisement

ವಿಶೇಷ ಲೇಖನ : ಡಾ. ಸಂತೋಷ್ ಕೆ.ವಿ. , ಚಿತ್ರದುರ್ಗ           ಮೊ : 93424 66936

ಸುದ್ದಿಒನ್ : ದೈಹಿಕವಾಗಿ ಯಾವುದಾದರೂ ಅಂಗ ಊನವಾದರೆ ಅಥವಾ ಅದರ ಕಾರ್ಯಕ್ಷಮತೆ ಕ್ಷೀಣಿಸಿದರೆ, ನಮ್ಮ ದೇಹದಿಂದ ಹಾನಿಯಾಗಿ ಹೋದರೆ, ದೇಹದಿಂದ ಶಾಶ್ವತವಾಗಿ ಕಳೆದುಹೋದರೆ, ಆಗ ಕೃತಕ ಅಂಗಗಳ ಸಹಾಯದಿಂದ ಬದುಕು ನಡೆಸಬೇಕಾಗುತ್ತದೆ.
ಕೃತಕ ಹಲ್ಲುಗಳು ಕೂಡ ಇದೇ ರೀತಿ ಆಗಿರುತ್ತದೆ.
ನಮ್ಮ ನೈಸರ್ಗಿಕ ಹಲ್ಲುಗಳಷ್ಟು ಇವು ಕಾರ್ಯನಿರ್ವಹಿಸದಿದ್ದರೂ ಶೇಕಡ 90ರಷ್ಟು ಇದು ಮತ್ತೆ ಪುನಃ ನಮ್ಮ ಕಳೆದು ಹೋದ ಹಲ್ಲುಗಳ ಕೆಲಸವನ್ನು ಮಾಡಬಲ್ಲವು.

Advertisement

ನಮ್ಮ ಸೌಂದರ್ಯಕ್ಕೆ, ಊಟ ಮಾಡಲು, ಮಾತಿನ ಸ್ಪಷ್ಟತೆಗೆ, ಆಹಾರ ಜೀರ್ಣಿಸಿಕೊಳ್ಳಲು. ಎಲ್ಲದಕ್ಕೂ ಬೇಕಾಗಿರುವ ಹಲ್ಲುಗಳು ನಾನಾ ಕಾರಣಕ್ಕೆ ದೇಹದಿಂದ ಕಳೆದು ಹೋದಾಗ ಅದರ ಪುನರ್ ಜೋಡಣೆ ಅತ್ಯಗತ್ಯವಾಗಿರುತ್ತದೆ.

ಇಂತಹ ಮರುಜೋಡಣೆಗೆ ಬೇಕಾಗುವ ಕೃತಕ ಹಲ್ಲುಗಳು ಯಾವ ರೀತಿ ಇದ್ದರೆ ಅನುಕೂಲ ಎಂಬುದು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಈ ಲೇಖನದಲ್ಲಿ ಸರಳವಾಗಿ ಅದರ ಮಹತ್ವ ಹಾಗೂ ಅದರ ವಿವರಣೆ ನೀಡಲಾಗಿರುತ್ತದೆ.
ಕೃತಕ ಹಲ್ಲು ಜೋಡಣೆ ಅಥವಾ ಹಲ್ಲು ಕಟ್ಟಿಸಿಕೊಳ್ಳುವುದು ಎಂದು ಇದನ್ನು ಸರಳವಾಗಿ ಹೇಳಲಾಗುತ್ತದೆ.
ನಶಿಸಿದ ಹಲ್ಲಿನ ಜಾಗಕ್ಕೆ ಅಥವಾ ಈಗಾಗಲೇ ಅರ್ಧ ಹಾಳಾಗಿರುವ ಹಲ್ಲಿನ ಜಾಗಕ್ಕೆ ಹಲ್ಲು ಜೋಡಿಸುವುದಕ್ಕೆ ಹಲ್ಲು ಕಟ್ಟಿಸಿಕೊಳ್ಳುವುದು ಎನ್ನಲಾಗುತ್ತದೆ.

ಹಲ್ಲು ಹತ್ತಾರು ವಿವಿಧ ಕಾರಣಗಳಿಂದ ಹಾನಿಗೊಳಗಾಗುತ್ತದೆ.
ಅದರಲ್ಲಿ ಮುಖ್ಯವಾಗಿ ಹಲ್ಲು ಮೂಡದಿರುವುದು, ಅಪಘಾತ, ಆಕಸ್ಮಿಕ ಹೊಡೆತ,ಹುಳುಕು ,ಮೂಳೆ ಸವೆತವಾಗಿ ಹಲ್ಲು ಸಡಿಲಗೊಂಡು ಉದುರಿರುವುದು... ಇತ್ಯಾದಿ ಹಲವಾರು ಕಾರಣಗಳಿಂದ ಹಲ್ಲನ್ನು ಕಳೆದುಕೊಂಡರು ಇಂದು ಯಾರು ಯೋಚಿಸಬೇಕಾಗಿಲ್ಲ ಮುಂದುವರಿದ ಆಧುನಿಕ ಚಿಕಿತ್ಸಾ ವಿಧಾನದಿಂದ ನೈಸರ್ಗಿಕವಾಗಿ ಕಾಣುವ ಹಾಗೂ ಅದೇ ರೀತಿ ಕಾರ್ಯವನ್ನು ಮಾಡಬಲ್ಲ ಹಲ್ಲುಗಳ ಜೋಡಣೆ ಅತ್ಯಂತ ಸರಳವಾಗಿದೆ. ಸುಲಭದ ಕೆಲಸವಾಗಿದೆ. ಹಾಳಾದ ಎಲ್ಲಾ ಹಲ್ಲುಗಳಿಗೂ ರೂಟ್ ಕೆನಲ್ ಚಿಕಿತ್ಸೆ ಅಥವಾ ಫಿಲ್ಲಿಂಗ್ ಚಿಕಿತ್ಸೆ ಪ್ರಯೋಜನಕಾರಿಯಾಗಿರುವುದಿಲ್ಲ. ಆಗ ಹಲ್ಲು ಕಟ್ಟಿಸಿಕೊಳ್ಳುವುದು ಅನಿವಾರ್ಯ ಆಗಿರುತ್ತದೆ.

ಹಲ್ಲು ಕಟ್ಟಿಸಿಕೊಳ್ಳುವುದು :  ಹಲ್ಲುಗಳು ಯಾವ ರೀತಿ ನಾವು ಕಟ್ಟಿಸಕೊಳ್ಳಬೇಕು ಎಂಬುದನ್ನು ವೈದ್ಯರು ಹಾಗೂ ರೋಗಿಗಳು ಪರಸ್ಪರ ಸಮಾಲೋಚನೆಯ ಮೂಲಕ ತಿಳಿದುಕೊಂಡಾಗ ಅದರ ಪ್ರಯೋಜನ ಮತ್ತಷ್ಟು ಅನುಕೂಲಕಾರಿಯಾಗುತ್ತದೆ.
ಪ್ರತಿ ಹಲ್ಲುಗಳ ಆಯ್ಕೆ ಮಾಡುವಾಗಲೂ ವೈದ್ಯರಿಂದ ಸ್ಪಷ್ಟ ಮಾಹಿತಿ,ಅದರ ಬಳಕೆ, ಅದರ ಮಹತ್ವ,ಪ್ರಯೋಜನ, ಅದರ ಸಮಸ್ಯೆಗಳು.  ಎಲ್ಲವನ್ನು ಸಾಧ್ಯವಾದಷ್ಟು ತಿಳಿದುಕೊಳ್ಳಬೇಕು. ಹಲ್ಲು ಕಟ್ಟುವಿಕೆಯಲ್ಲಿ ಸಾಮಾನ್ಯವಾಗಿ ಮೂರು ವಿಧಾನಗಳನ್ನು ಅನುಸರಿಸಲಾಗಿರುತ್ತದೆ.

ಬಾಯಿಯಲ್ಲಿ ತೆಗೆದು ಹಾಗೂ ಹಾಕಿಕೊಳ್ಳುವ ಹಲ್ಲುಗಳು ಅಥವಾ ಹಲ್ಲು ಸೆಟ್.
ಇಂಪ್ಲಾಂಟ್ ಹಲ್ಲು: ಇದು ಮೂಳೆ ಒಳಗೆ ಫಿಕ್ಸ್ ಆಗುವ ಹಲ್ಲು ಆಗಿರುತ್ತದೆ.
ವ್ಯಕ್ತಿಯು ತೆಗೆಯಲು ಬಾರದಂತೆ ಪರಸ್ಪರ ಅಕ್ಕ ಪಕ್ಕದ ಹಲ್ಲಿನ ಆಧಾರಕ್ಕೆ ಫಿಕ್ಸ್ ಮಾಡುವ ಹಲ್ಲು (ಅಥವಾ ಹಲ್ಲುಗಳು).
ಇದರಲ್ಲಿ ವ್ಯಕ್ತಿಗೆ ಯಾವುದು ಉತ್ತಮ ಎಂದು ವೈದ್ಯರು ನಿರ್ಧರಿಸುತ್ತಾರೆ.

ಯಾವ ಹಲ್ಲು ಉತ್ತಮ :
ಹಲ್ಲುಗಳ ಮೂಲವಸ್ತು ನಮ್ಮ ದೇಹದೊಳಗೆ ಇರಬೇಕಾಗಿರುವುದರಿಂದ ಅದು ನಮ್ಮ ದೇಹಕ್ಕೆ ಒಗ್ಗುವಂತಹ ಮೂಲ ವಸ್ತುವೇ ಆಗಿರಬೇಕು. ಅದರಿಂದ ನಮಗೆ ಯಾವುದೇ ರೀತಿಯ ಅಲರ್ಜಿ ಆಗಬಾರದು. ಆಕಸ್ಮಿಕವಾಗಿ ಒಂದೊಮ್ಮೆ ಈ ಹಲ್ಲು ಉದುರಿದರೆ ದೇಹದ ಒಳಗಡೆ ಹೋದರೆ ಯಾವುದೇ ರೀತಿಯ ಅಡ್ಡ ಪರಿಣಾಮ ಉಂಟಾಗಬಾರದು. ಈ ಎಲ್ಲಾ ಗುಣಲಕ್ಷಣಗಳು ಇರುವ ವಸ್ತುವು ಮಾತ್ರ ಕೃತಕ ಹಲ್ಲುಗಳಲ್ಲಿ ಬಳಸಲಾಗುತ್ತದೆ.

ವಿವಿಧ ರೀತಿಯ ಹಲ್ಲುಗಳು:‌
ಆಕ್ರೇಲಿಕ್ : ದೀರ್ಘಕಾಲೀನ ಬಳಕೆಗೆ ಇವು ಯೋಗ್ಯವಾಗಿರುವುದಿಲ್ಲ.
ದೃಢತೆ ಆಧಾರದಲ್ಲಿ ಇವು ಬಹಳಷ್ಟು ಕನಿಷ್ಠವಾಗಿರುತ್ತದೆ.

ಮೆಟಲ್: ಇವು ಮಿಶ್ರ ಲೋಹದ ಸಂಯೋಜನೆಯಿಂದ ಮಾಡಲ್ಪಟ್ಟಿರುತ್ತವೆ.ಇವನ್ನು ಸಾಮಾನ್ಯವಾಗಿ ಸ್ಟೀಲ್ ಹಲ್ಲು ಎನ್ನಲಾಗುತ್ತದೆ. ಉತ್ತಮ ಗುಣಮಟ್ಟ ಹಾಗೂ ಗರಿಷ್ಠ ತಾಳಿಕೆ ಮಟ್ಟದಲ್ಲಿರುವ ಈ ವಸ್ತು ವ್ಯಾಪಕ ಬಳಕೆಯಲ್ಲಿದೆ. ಉತ್ತಮ ಕಾರ್ಯಕ್ಷಮತೆಯಿಂದ ಕೂಡಿರುವ ಇವು ದೀರ್ಘಕಾಲೀನ ಬಳಕೆಗೆ ಯೋಗ್ಯವಾಗಿರುತ್ತವೆ.

ಸಿರಾಮಿಕ್ ಮೆಟಲ್:
ಇದರಲ್ಲಿ ಲೋಹವನ್ನು ಅಡಿಪಾಯವನ್ನಾಗಿ ಬಳಸಿ ಅದರ ಮೇಲೆ ಸಿರಾಮಿಕ್ ( ಹಲ್ಲಿನ ಬಣ್ಣದ ) ಲೇಪನವನ್ನು ಮಾಡಲಾಗಿರುತ್ತದೆ.
ಉತ್ತಮ ಗುಣಮಟ್ಟ ಹಾಗೂ ಹಲ್ಲಿನ ಬಣ್ಣದ್ದಾಗಿರುತ್ತದೆ.

ಮೆಟಲ್ ರಹಿತ ಸೆರಾಮಿಕ್ ಐವೊಕ್ಲೋರ್: ಇದರಲ್ಲಿ ಲೋಹದ ಮಿಶ್ರಣ ಇರದೆ ಸಂಪೂರ್ಣ ಐವೋಕ್ಲೋರ್ , ಸೆರಾಮಿಕ್ ಇರುತ್ತದೆ.

ಇದರ ಜೊತೆಗೆ ವ್ಯಕ್ತಿಯ ಆಯ್ಕೆಯ ಮೇಲೆ ಹಾಗೂ ವೈದ್ಯರ ನಿರ್ಧಾರದ ಮೇಲೆ ವಿವಿಧ ರೀತಿಯ ಲೋಹದ ಹಲ್ಲುಗಳನ್ನು ಮಾಡಲಾಗುತ್ತದೆ.

Tags :
Advertisement