ಫೆಬ್ರವರಿ 23 ರಿಂದ 25 ರವರೆಗೆ ಕುಂದೂರಿನಲ್ಲಿ ಅಂಭಾದೇವಿ ರಥೋತ್ಸವ
ಸುದ್ದಿಒನ್, ಹೊಸದುರ್ಗ, ಫೆಬ್ರವರಿ.12 : ತಾಲ್ಲೂಕಿನ ಬಾಗೂರು ಸಮೀಪದ ಕುಂದೂರು ಗೊಲ್ಲರಹಟ್ಟಿಯ ಗೋವರ್ಧನಗಿರಿ ಜಗದಾಂಬ ಮಹಾಸಂಸ್ಥಾನ ಮಠದಲ್ಲಿ ಫೆಬ್ರವರಿ 23ರಿಂದ 25ರವರೆಗೆ 11ನೇ ವರ್ಷದ ದಕ್ಷಿಣಮ್ನಾಯ ಕ್ಷೇತ್ರದ ಅಂಭಾದೇವಿ ಮತ್ತು ತಿರುಪತಿ ವೆಂಕಟೇಶ್ವರ ಬ್ರಹ್ಮರಥೋತ್ಸವ ಜರುಗಲಿದೆ.
ಫೆಬ್ರವರಿ 23ರಂದು ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ಹಾಗೂ ಸಂಜೆ 7ಕ್ಕೆ ಅಂಭಾದೇವಿ ಮತ್ತು ತಿರುಮಲ ಸ್ವಾಮಿಗೆ ಕಂಕಣಧಾರಣೆ ಜರುಗಲಿದೆ.
ಫೆಬ್ರವರಿ 24ರಂದು ಬೆಳಿಗ್ಗೆ 10.30ಕ್ಕೆ ಮಹಾಸಂಸ್ಥಾನ ಮಠದ ತಿಮ್ಮಪ್ಪ ಸ್ವಾಮೀಜಿಯಿಂದ ಗೋವರ್ಧನಗಿರಿ ಸಿಂಹಾಸನ ಪೀಠಾರೋಹಣ ನಡೆಯಲಿದ್ದು, ಅದೇ ದಿನ ಸಂಜೆ 5ಗಂಟೆಗೆ ದೇವಿಯ ಬ್ರಹ್ಮರಥೋತ್ಸವ ಜರುಗಲಿದೆ. ರಥೋತ್ಸವದ ನಂತರ ಗೋವರ್ಧನಗಿರಿ ಧರ್ಮದ ಬಾವುಟ ಹರಾಜು ಹಾಕಲಾಗುವುದು.
ಫೆಬ್ರವರಿ 25ರಂದು ಸಂಜೆ 4.30ಕ್ಕೆ ಕುಂಭೋತ್ಸವ ಆಚರಣೆಯೊಂದಿಗೆ ಜಾತ್ರೆ ಕೊನೆಗೊಳ್ಳಲಿದೆ. ಆಗಮಿಸುವ ಭಕ್ತರಿಗೆ ಮೂರು ದಿನವೂ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಅಂಭಾದೇವಿಯ ದೇವಸ್ಥಾನ ಕಟ್ಟಡ ಕಾರ್ಯ ಆರಂಭವಾಗಿದ್ದು, ಸರ್ವ ಭಕ್ತರು ಕಟ್ಟಡ ನಿರ್ಮಾಣಕ್ಕೆ ತನು ಮನ ಧನ ಸಹಾಯದೊಂದಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಂಸ್ಥಾನ ಮಠದ ಪ್ರಕಟಣೆ ತಿಳಿಸಿದೆ.