ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಸಮಾಜಮುಖಿ ಪರಿಸರ ನಡಿಗೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜು.07): ಮಧ್ಯ ಕರ್ನಾಟಕದಲ್ಲಿಯೇ ಚಿತ್ರದುರ್ಗ ವಿಶೇಷವಾದ ಸ್ಥಳ ಎನಿಸಿಕೊಂಡಿದೆ. ಸಾಹಿತಿ, ಸಂಶೋಧಕರು, ಕಲಾವಿದರನ್ನು ಕೊಟ್ಟ ಊರು ಚಿತ್ರದುರ್ಗ. ಅನೇಕ ಕ್ರೀಡಾಪಟುಗಳು, ನಟ-ನಟಿಯರು ಇಲ್ಲಿಗೆ ಬಂದು ಹೋಗಿದ್ದಾರೆ. ಎಲ್ಲದಕ್ಕೂ ಹೇಳಿ ಮಾಡಿಸಿದಂತ ಜಾಗ ಇದು ಎಂದು ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.
ಕೋಟೆ ಸಮೀಪವಿರುವ ಡಾರ್ಮೆಟ್ರಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಚಿಂತನಶೀಲ ಸಮಾಜಮುಖಿ ನಡೆದು ನೋಡ ಕರ್ನಾಟಕ-15 ಪರಿಸರ ನಡಿಗೆಯನ್ನು ಉದ್ದೇಶಿಸಿ ಮಾತನಾಡಿದ ಡಾ.ಬಿ.ರಾಜಶೇಖರಪ್ಪನವರು ಶ್ರೀಲಂಕಾದ ಸಂಜಾತ ಅಮೇರಿಕಾ ವಾಸಿ ಸಿರಿ ಪೊನ್ನಂ ಪೆರುಮ ಹೇಳಿಕೆ ಪ್ರಕಾರ 380 ಕೋಟಿ ವರ್ಷದ ಹಿಂದೆ ಇಲ್ಲಿ ಜೀವ ಉಗಮವಾಗಿತ್ತು. ಶಿಲಾಯುಗ, ಪ್ರಾಚೀನ ನೂತನ ಶಿಲಾಯುಗಕ್ಕೆ ಸಂಬಂಧಿಸಿದ ಮನುಷ್ಯನ ಚಟುವಟಿಕೆ ಜರುಗಿದೆ. ಮನುಷ್ಯ ವಾಸ ಮಾಡಿ ಭೇಟೆಯಾಡಿದ್ದಾನೆ. ಕ್ರಮೇಣ ಕೃಷಿಕ, ಸಾಂಸ್ಕøತಿಕ ವ್ಯಕ್ತಿಯಾಗಿ ಮಾರ್ಪಟ್ಟಿದ್ದಾನೆ ಎನ್ನುವುದು ತಿಳಿಯುತ್ತದೆ ಎಂದರು.
ಕರ್ನಾಟಕದ ಪ್ರಮುಖ ರಾಜರ ಆಳ್ವಿಕೆಗೆ ಚಿತ್ರದುರ್ಗ ಒಳಪಟ್ಟಿದೆ. ಬಾದಾಮಿ, ಕದಂಬರು, ಗಂಗರು, ಬಾದಾಮಿ ಚಲುಕ್ಯ, ರಾಷ್ಟ್ರಕೂಟರು, ವಿಜಯನಗರ ಅರಸರು, ಕಲ್ಯಾಣ ಚಲುಕ್ಯರು, ಚಿತ್ರದುರ್ಗದ ಅರಸರು ಪ್ರಮುಖ ರಾಜ ವಂಶಸ್ಥರು ಆಳಿದ್ದಾರೆ.
ಮಯೂರ ಶರ್ಮ ಕ್ಷತ್ರಿಯತ್ವವನ್ನು ಸ್ವೀಕಾರ ಮಾಡಿದ ನಂತರ ತನ್ನ ಹೆಸರನ್ನು ಮಯೂರ ವರ್ಮ ಎಂದು ಬದಲಾಯಿಸಿಕೊಳ್ಳುತ್ತಾನೆ. ಚಂದ್ರವಳ್ಳಿಯಲ್ಲಿ ಭೈರಸಿದ್ದೇಶ್ವರ ದೇವಸ್ಥಾನವಿದೆ. ಅದರ ಮುಂಭಾಗದ ಬಂಡೆಯ ಮೇಲೆ ಮೂರು ಸಾಲಿನ ಶಾಸನವಿದೆ. ಕೊಪ್ಪಳದ ಪ್ರಾಚೀನ ಹೆಸರು ಕೊಪ್ಪಣ. ಆರು ಮೆದಕರಿನಾಯಕರು ಇಲ್ಲಿ ಆಳಿದ್ದಾರೆ. ಮೊದಲನೆ ಇಮ್ಮಡಿ ಮೆದಕರಿನಾಯಕ, ಎರಡನೆ ಇಮ್ಮಡಿ ಮೆದಕರಿನಾಯಕ ಹೀಗೆ ಆರನೆ ಮೆದಕರಿನಾಯಕ ಹೈದರಾಲಿ ಜೊತೆ ಹೋರಾಡಿದ್ದಾನೆ. ಶಾತವಾಹನ ಕಾಲದಿಂದಲೂ ಚಂದ್ರವಳ್ಳಿಯಲ್ಲಿ ಜನ ಇದ್ದರು. ಮೊದಲು ಸೂಳ್ಗಲ್ ಎಂದು ಕರೆಯಲಾಗುತ್ತಿತ್ತು. ಸೂಳ್ಗಲ್ ಮೊಟ್ಟ ಮೊದಲ ಕದಂಬರ ರಾಜಧಾನಿಯಾಗಿತ್ತು ಎಂದು ಕೆಲವು ಪ್ರಮುಖ ಅಂಶಗಳನ್ನು ವಿವರಿಸಿದರು.
ಚಂದ್ರಶೇಖರ ಬೆಳಗೆರೆ ಸಮಾಜಮುಖಿ ನಡೆದು ನೋಡ ಕರ್ನಾಟಕದ-15 ಪರಿಸರ ನಡಿಗೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಆರು ವರ್ಷದ ಹಿಂದೆ ರೂಪುಗೊಂಡ ಸಮಾಜಮುಖಿ ಮಾಸ ಪತ್ರಿಕೆ ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಚಂದ್ರಶೇಖರ ಪಾಟೀಲ್‍ರಿಂದ ಬಿಡುಗಡೆಯಾಯಿತು.
ತಾಂತ್ರಿಕ ವೇಗಕ್ಕೆ ತಕ್ಕಂತೆ ಕನ್ನಡದ ಮನಸ್ಸುಗಳನ್ನು ಸಿದ್ದಗೊಳಿಸುವುದು ಸಮಾಜಮುಖಿ ಉದ್ದೇಶ. ಸಂಡೂರಿನಿಂದ ಆರಂಭಗೊಂಡ ಪರಿಸರ ನಡಿಗೆ ಜು.7 ರಿಂದ 9 ರವರೆಗೆ ಚಿತ್ರದುರ್ಗ, ಚಂದ್ರವಳ್ಳಿ,ಭೀಮಸಮುದ್ರ, ಸಾಣೆಹಳ್ಳಿ, ಮೊಳಕಾಲ್ಮರು ತಾಲ್ಲೂಕಿನ ಅಶೋಕ ಸಿದ್ದಾಪುರ, ಜಟಂಗಿ ರಾಮೇಶ್ವರದಲ್ಲಿ ಸಂಚರಿಸಲಿದೆ. ಮೊಳಕಾಲ್ಮುರು ರೇಷ್ಮೆ ಸೀರೆ, ಕೊಂಡ್ಲಳ್ಳಿಯ ಕಂಬಳಿ, ಎಣ್ಣೆಗಾಣವನ್ನು ನೋಡಿಕೊಂಡು ವಾಪಸ್ ಮರಳುತ್ತೇವೆ. ಕರ್ನಾಟಕವನ್ನು ಎಲ್ಲಾ ಮಗ್ಗಲುಗಳಲ್ಲಿ ಅರ್ಥಮಾಡಿಕೊಳ್ಳುವುದು ಸಮಾಜಮುಖಿ ನಡಿಗೆಯ ಪ್ರಮುಖ ಧ್ಯೇಯ ಎಂದು ಹೇಳಿದರು. ಪರಿಸರ ನಡಿಗೆಯ ಹಿರಿಯ ಸದಸ್ಯ ವೆಂಕಟೇಶ್ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.