ಸಿಎಂ ಪತ್ನಿ ಹೆಸರಿಗೆ 14 ಮೂಡಾ ಸೈಟ್ ಗಳು : ಸಿದ್ದರಾಮಯ್ಯ ಹೇಳಿದ್ದೇನು..?
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಧರ್ಮಪತ್ನಿ ಪಾರ್ವತಿ ಅವರ ಹೆಸರಿನಲ್ಲಿ 14 ಮೂಡಾ ಸೈಟುಗಳನ್ನು ಮಾಡಲಾಗಿದೆ ಎಂಬುದು ಬಾರೀ ಚರ್ಚೆಗೆ ಗ್ರಾಸವಾಗಿದೆ. ಆರ್ಟಿಐ ಕಾರ್ಯಕರ್ತ ಇದರಲ್ಲಿ ಅಕ್ರಮ ಮಂಜೂರಾತಿ ನಡೆದಿದೆ ಎಂದಿದ್ದಾರೆ. ಜೊತೆಗೆ ಸಿಎಂ ಪತ್ನಿ ಹೆಸರಿಗೆ ರಿಜಿಸ್ಟರ್ ಆಗಿರುವ ಹದಿನಾಲ್ಕು ಮೂಡಾ ಸೈಟುಗಳ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಇದೀಗ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
'ತಮ್ಮ ಧರ್ಮಪತ್ನಿಗೆ ಸೇರಿದ ಜಮೀನನ್ನು ಮೂಡಾ ಸ್ವಾಧೀನ ಮಾಡಿಕೊಂಡಿತ್ತು. ಅದಕ್ಕೆ ಪರ್ಯಾಯವಾಗಿ 50:50 ಅನುಪಾತದಲ್ಲಿ ಬೇರೆ ಕಡೆ ನೀಡಲಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಈ ನಿವೇಶನಗಳನ್ನು ನೀಡಲಾಗಿತ್ತು. ನನ್ನ ಪತ್ನಿಗೆ ಸೇರಿದ 3 ಎಕರೆ 16 ಗುಂಟೆ ಜಮೀನು ರಿಂಗ್ ರೋಡ್ ಪಕ್ಕದಲ್ಲಿದೆ. ಅದನ್ನು ನನ್ನ ಭಾವ ಮೈದುನ ಪಡೆದಿದ್ದು ದಾನವಾಗಿ ನೀಡಿದ್ದಾರೆ.
ನಾನು ಅಧಿಕಾರದಲ್ಲಿದ್ದಾಗ ತೆಗೆದುಕೊಳ್ಳಲು ಹೋಗಿಲ್ಲ. 50:50 ಅನುಪಾತದಲ್ಲಿ ತೆಗೆದುಕೊಳ್ಳಬೇಕು ಅಂತ ಕಾನೂನು ಮಾಡಿದ್ದು ಬಿಜೆಪಿಯವರು. ನಮ್ಮ ಜಮೀನನ್ನು ಸ್ವಾಧೀನ ಮಾಡಿಕೊಳ್ಳದೇ ಮೂಡಾದವರು ನಿವೇಶನಗಳನ್ನು ಮಾಡಿ ಹಂಚಿದ್ದರು. ಹಂಚಿದ ಮೇಲೆ ನಮಗೆ ಕಾನೂನುಬದ್ಧವಾಗಿ ನಿವೇಶನ ಕೊಡಬೇಕು. ಅದರಂತೆ 50:50 ಕೊಡಲು ಒಪ್ಪಿದರು. ಸರ್ಕಾರದ ನಿಯಮಾವಳಿ, ಆದೇಶದ ಪ್ರಕಾರ ಕೊಡಿ ಎಂದು ಬಿಜೆಪಿ ಅಧಿಕಾರದಲ್ಲಿದ್ದಾಗ ಕೇಳಿಕೊಂಡಿದ್ದೆವು. ಆಗ ಅವರು ಬೇರೆ ಬೇರೆ ಸ್ಥಳಗಳಲ್ಲಿ ಸಮಾನಾಂತರ ನಿವೇಶನಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ. ಇನ್ನು ತಮ್ಮ ಧರ್ಮಪತ್ನಿ ಹೆಸರಲ್ಲಿರುವುದು ಯಾವ ಸೈಟ್ ಗಳು ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ.