ಹಲ್ಲಿನ ಅನಾರೋಗ್ಯಕ್ಕೂ ಕಣ್ಣಿಗೂ ಸಂಬಂಧವಿದೆಯೇ ? ಡಾ. ಸಂತೋಷ್ ಅವರ ವಿಶೇಷ ಲೇಖನ
ವಿಶೇಷ ಲೇಖನ : ಡಾ. ಸಂತೋಷ್, ಚಿತ್ರದುರ್ಗ ಮೊಬೈಲ್ ಸಂಖ್ಯೆ : 93424 66936
ಸುದ್ದಿಒನ್ : ಹಲ್ಲಿಗೂ ಕಣ್ಣಿಗೂ ಸಂಬಂಧವಿದೆ ಎಂದು ಬಹಳಷ್ಟು ಜನರು ತಿಳಿದಿದ್ದಾರೆ. ಆದರೆ ವಾಸ್ತವವಾಗಿ ಹಲ್ಲಿನ ಆರೋಗ್ಯ, ಅನಾರೋಗ್ಯಕ್ಕೂ ಕಣ್ಣಿನ ದೃಷ್ಟಿಗೆ ಯಾವುದೇ ಸಂಬಂಧ ಇರುವುದಿಲ್ಲ. ಇದೊಂದು ಸಂಪೂರ್ಣವಾಗಿ ತಪ್ಪು ತಿಳುವಳಿಕೆಯಾಗಿದೆ. ವಾಸ್ತವವಾಗಿ ನಮ್ಮ ದೇಹದ ರಚನೆಯು ಸಂಪೂರ್ಣ ಸಂಕೀರ್ಣಾತ್ಮಕವಾಗಿದ್ದರೂ ಯಾವುದೇ ಅಂಗಗಳು, ಅವುಗಳ ಕಾರ್ಯ ನಿರ್ವಹಣೆಯಲ್ಲಿ ಪರಸ್ಪರ ನರವ್ಯೂಹದಲ್ಲಿ ಸಂಬಂಧವಿರುವುದಿಲ್ಲ.
ಉದಾಹರಣೆಗೆ : ನಾವು ಕೈಯೆತ್ತಿದಾಗ ಕಾಲು ತಾನೇ ತಾನಾಗಿ ಮೇಲೇಳುವುದಿಲ್ಲ. ಕಣ್ಣು ಮುಚ್ಚಿದಾಗ ಕಿವಿಯು ಬಂದಾಗದೆ ಕೇಳಿಸುತ್ತದೆ. ಹಾಗೆಯೇ ಹಲ್ಲಿನ ಅನಾರೋಗ್ಯದಿಂದ ಕಣ್ಣಿನ ದೃಷ್ಟಿ ಯಾವುದೇ ರೀತಿಯಲ್ಲಿ ಬದಲಾಗುವುದಿಲ್ಲ. ಬಹಳಷ್ಟು ಜನರು ಈ ತಪ್ಪು ಅಭಿಪ್ರಾಯ ಹಾಗೂ ತಪ್ಪು ತಿಳುವಳಿಕೆಯಿಂದ ತಮ್ಮ ಹಲ್ಲಿನ ಅನಾರೋಗ್ಯವನ್ನು ಮತ್ತಷ್ಟು ಹಾಳು ಮಾಡಿಕೊಳ್ಳುತ್ತಾರೆ.
ದಂತ ವೈದ್ಯರ ಬಳಿಯಲ್ಲಿ ಬರುವ ಪ್ರತಿಯೊಬ್ಬ ರೋಗಿಯು ಕೇಳುವ ಮೊದಲ ಪ್ರಶ್ನೆಯೇ ಇದು. ಸರ್, ಹಲ್ಲು ಕಿತ್ತರೆ, ಹಲ್ಲಿನ ಚಿಕಿತ್ಸೆಯಿಂದ ನನಗೆ ದೃಷ್ಟಿ ಮಂಜಾಗುತ್ತದೆಯೇ, ಕಣ್ಣು ಹೋಗುತ್ತದೆಯೇ? ಅದರಲ್ಲೂ ಸುಶಿಕ್ಷಿತರು ಕೂಡ ಇದೇ ಪ್ರಶ್ನೆ ಕೇಳಿದಾಗ ಆಶ್ಚರ್ಯವಾಗುತ್ತದೆ.
ಈ ರೀತಿ ತಪ್ಪು ತಿಳುವಳಿಕೆಯಿಂದ ಹಲ್ಲಿನ ಅನಾರೋಗ್ಯವು ತೀವ್ರ ಗತಿಯಲ್ಲಿ ಹೆಚ್ಚಾಗಿ ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿ ದಂತ ವೈದ್ಯರಲ್ಲಿಗೆ ಬರುತ್ತಾರೆ. ವಾಸ್ತವವಾಗಿ ಹಲ್ಲಿನ ಆರೋಗ್ಯಕ್ಕಾಗಲಿ,ಕಣ್ಣಿನ ದೃಷ್ಟಿಗಾಗಲಿ ಯಾವುದೇ ಪರಸ್ಪರ ಸಂಬಂಧವಿರುವುದಿಲ್ಲ. ಒಂದಕ್ಕೆ ಚಿಕಿತ್ಸೆ ಮಾಡಿದರೆ ಮತ್ತೊಂದು ಅಂಗಕ್ಕೆ ಎಂದಿಗೂ ಹಾನಿಯಾಗುವುದಿಲ್ಲ.
ಇದು ಮೂಢನಂಬಿಕೆಯಾಗಿದೆ. ಮೂಢನಂಬಿಕೆಯ ಕಾರಣದಿಂದ ಎಷ್ಟೋ ಅನಾರೋಗ್ಯಕರ ಸಮಸ್ಯೆಗಳು ಗುಣಪಡಿಸಲಾಗದ ಹಂತಕ್ಕೆ ತಲುಪಿ ಕೊನೆಗೆ ರೋಗಿಗಳು ಸಾವನ್ನಪ್ಪಿರುವುದು ನಾವೆಲ್ಲರೂ ನೋಡಿದ್ದೇವೆ. ಹಲ್ಲಿಗೂ ಕಣ್ಣಿಗೂ ಸಂಬಂಧ ಇದೆ ಎಂದು ನಂಬುವ ಬಹಳಷ್ಟು ಜನರು ಇದನ್ನು ನೇರವಾಗಿ ತಿಳಿದವರಲ್ಲಿ ಎಂದಿಗೂ ಕೇಳುವುದಿಲ್ಲ.
ಬದಲಾಗಿ ಒಬ್ಬರು ಹೇಳುವ ಮಿಥ್ಯ ಕಥೆಯನ್ನು ಆಧಾರ ರಹಿತವಾಗಿ ಕ್ಷಣಮಾತ್ರದಲ್ಲಿ ನಂಬಿರುತ್ತಾರೆ.
ಅದನ್ನು ಪರೀಕ್ಷಿಸುವ ಅಥವಾ ನೈಜತೆಯನ್ನು ತಿಳಿಯುವ ಪ್ರಯತ್ನವನ್ನೂ ಮಾಡುವುದಿಲ್ಲ.
ಇದರಿಂದ ಅನಾರೋಗ್ಯವು ತೀವ್ರ ಗತಿಗೆ ತಲುಪಿ ರೋಗಿಯ ಹಣ ಮತ್ತು ಸಮಯ ಅನಗತ್ಯವಾಗಿ ವ್ಯರ್ಥವಾಗುತ್ತದೆ. ಯಾವುದೇ ರೋಗದ ಸ್ಥಿತಿಯು ಪ್ರಾಥಮಿಕ ಹಂತದಲ್ಲಿ ಪಡೆಯುವ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂದಿಸಿ ರೋಗ ಮುಂದುವರೆದಂತೆ ತಡೆಯುತ್ತದೆ. ನಾವು ಮೂಢನಂಬಿಕೆ ಹಾಗೂ ತಪ್ಪು ತಿಳಿವಳಿಕೆಯಿಂದ ಚಿಕಿತ್ಸೆ ಪಡೆಯದೆ
ರೋಗವು ಉಲ್ಬಣಿಸಿದಾಗ ಯಾವುದೇ ಉಪಯೋಗ ಆಗುವುದಿಲ್ಲ.
ವಿವರಣೆ : ದೇಹದ ರಚನೆಯಲ್ಲಿ ಎಲ್ಲಾ ಅಂಗಾಂಗಗಳು ತಮ್ಮಷ್ಟಕ್ಕೆ ತಾವೇ ಸ್ವತಂತ್ರ ಅಂಗಗಳಾಗಿದ್ದು ಒಂದಕ್ಕೊಂದು ಯಾವುದೇ ಪರಸ್ಪರ ಸಂಬಂಧ ಇರುವುದಿಲ್ಲ. ಆದ್ದರಿಂದ ಒಂದೊಂದು ಅಂಗಕ್ಕೂ ಒಂದೊಂದು ಸ್ವತಂತ್ರ ನರ ಜಾಲವಿರುತ್ತದೆ. ತಮ್ಮದೇ ಆದ ಸ್ವತಂತ್ರ ನರಮಂಡಲ, ರಕ್ತನಾಳ,ಪರಿಚಲನೆ, ಅಂಗ ಕಾರ್ಯಚರಣೆ ಹೊಂದಿರುತ್ತದೆ.
ಹಲ್ಲುಗಳು ಮತ್ತು ಕಣ್ಣುಗಳು ಪ್ರತ್ಯೇಕವಾಗಿ ಸಂಪೂರ್ಣ ಬೇರೆಬೇರೆ ಮೂಳೆಯಲ್ಲಿ ಸ್ಥಾನ ಪಡೆದಿವೆ.
ಹಲ್ಲಿನ ಭಾಗಕ್ಕೆ ಐದನೇ ಬುರುಡೆ ನರ (ಟ್ರೈ ಜಮೈನಲ್) ಸಂಪರ್ಕ ಸಾಧಿಸಿದರೆ, ಕಣ್ಣುಗಳಿಗೆ ಎರಡನೇ ಬುರುಡೆ ನರ (ಆಪ್ಟಿಕ್ ನರ )ಸಂಪರ್ಕ ಕೊಡುತ್ತದೆ.
ಹಿಂದಿನ ಕಾಲದಲ್ಲಿ ಶಿಕ್ಷಣದ ತೀವ್ರ ಕೊರತೆ ಇದ್ದಿತು, ವೈಜ್ಞಾನಿಕ ದೃಷ್ಟಿಕೋನದಲ್ಲಿ ಯೋಚನೆ ಮಾಡುವ ವಿಧಾನವು ತಿಳಿದಿರುತ್ತಿರಲಿಲ್ಲ. ವೈಜ್ಞಾನಿಕ ಬದಲಾವಣೆಗಳನ್ನು ಒಪ್ಪಲು ಹಿಂಜರಿಯುತ್ತಿದ್ದರು. 40 ವರ್ಷ ಆದ ನಂತರ ವಯಸ್ಸಾಗುತ್ತಾ ಬರುವುದು, ದೈಹಿಕವಾಗಿ ಎಲ್ಲಾ ಅಂಗಾಂಗಗಳದ ಕಾರ್ಯ ಕ್ಷಮತೆಯು ಹಂತ ಹಂತವಾಗಿ ಇಳಿಕೆಯಾಗುತ್ತಾ ಸಾಗುತ್ತದೆ.
ಜೊತೆಗೆ ಚಾಳಿಸು ಎಂದರೆ 40 ವರ್ಷದ ನಂತರ ಪ್ರತಿ ವ್ಯಕ್ತಿಯ ಕಣ್ಣುಗಳಿಗೆ ಸಣ್ಣ ಅಕ್ಷರಗಳು ಮಬ್ಬಾಗುತ್ತವೆ. ದೃಷ್ಟಿ ದೋಷವು ಕೂಡ ಬರುವುದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಯಾವುದೇ ಹಲ್ಲು ಕೀಳಿಸದಿದ್ದರೂ ಕಣ್ಣು ಮಂಜಾಗುತ್ತದೆ. ದೃಷ್ಟಿ ದೋಷ ಬರುತ್ತದೆ. ಜೊತೆಗೆ ಹಿಂದಿನ ಕಾಲದಲ್ಲಿ ಹಲ್ಲುಗಳ ಆರೋಗ್ಯಕ್ಕೆ ಸರಿಯಾದ ಚಿಕಿತ್ಸೆಯಾಗಲಿ,ಹಲ್ಲಿನ ಆರೋಗ್ಯಕ್ಕೆ ಆರೈಕೆ ಮಾಡಲು ಸಾಧ್ಯವಿಲ್ಲದಂತೆ ಹಲ್ಲುಗಳು ಕೂಡ ಸಹಜವಾಗಿ ಅಲುಗಾಡಲು ಹಾಗೂ ಉದುರಲು ಶುರುವಾಗುತ್ತಿತ್ತು.
ಹಲ್ಲು ಉದುರುವುದಕ್ಕೂ, ಕಣ್ಣು ಮಂಜಾಗುವುದಕ್ಕೂ ತಾಳೆ ಹಾಕಿ ಸಂಬಂಧವಿದೆಯೆಂದು ಅರ್ಥೈಸಿದ ಹಿಂದಿನವರಿಗೆ ಮಾಹಿತಿ ಹಾಗೂ ಶಿಕ್ಷಣ, ಅರಿವಿನ ಕೊರತೆ ಇದ್ದಿತು. ವೈಜ್ಞಾನಿಕವಾಗಿ ಜಗತ್ತು ಇಂದು ಬಹಳಷ್ಟು ಮುಂದುವರೆದಿದ್ದು ಅಲ್ಲಿಗೂ ಕಣ್ಣಿಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲವೆಂದು ರುಜುವಾತಾಗಿದೆ. ರೋಗಪೀಡಿತ ಹಲ್ಲು ಕೇಳಿಸಿಕೊಂಡವರ ಕಣ್ಣುಗಳು ಮಂಜಾಗುವುದು, ಕುರುಡಾಗುವುದು ಆಗುತ್ತಿದ್ದರೆ ಇಂದು ಲಕ್ಷಾಂತರ ಜನ ಕುರುಡರು ಜಗತ್ತಿನ ಎಲ್ಲೆಡೆ ಇರಬೇಕಾಗಿತ್ತು.
ದಂತ ರೋಗಗಳಿಂದ ಹಲವಾರು ಜನರು ನರಳುತ್ತಿದ್ದರೂ ಮೂಢನಂಬಿಕೆಯ ಕಾರಣಕ್ಕೆ ದಂತ ವೈದ್ಯರಲ್ಲಿಗೆ ಹೋಗದೆ ನಿರ್ಲಕ್ಷಿಸಿ ಮತ್ತಷ್ಟು ಸಮಸ್ಯೆ ತಂದುಕೊಳ್ಳುತ್ತಾರೆ. ತೀವ್ರತರವಾದ ಸಮಸ್ಯೆ ಇದ್ದರೂ ಕೂಡ ಸ್ವಯಂ ಚಿಕಿತ್ಸೆ ಪಡೆದುಕೊಂಡು ಗುಣವಾಗಲೆಂದು ಬಯಸುತ್ತಾರೆ.
ಸಮಸ್ಯೆ ತೀವ್ರಗತಿಯಲ್ಲಿ ಬೃಹದಾಕಾರದಲ್ಲಿ ಬೆಳೆಯಲು ಬಿಟ್ಟು ಸಮಸ್ಯೆ ಹೆಚ್ಚಾದ ನಂತರ ರೋಧನೆ ಪಡುತ್ತಾರೆ.
ಏನು ಮಾಡಬೇಕು :
ದಂತ ಸಮಸ್ಯೆಗಳು ಇರುವ ಬಗ್ಗೆ ಸ್ವಯಂ ಪರೀಕ್ಷೆಯನ್ನು ಮಾಡಿಕೊಳ್ಳಬೇಕು ಅಥವಾ ದಂತವೈದ್ಯರೊಂದಿಗೆ ಪ್ರತಿ ವರ್ಷಕ್ಕೆ ಒಂದು ಬಾರಿ ಭೇಟಿಕೊಟ್ಟು ಪರೀಕ್ಷೆ ಮಾಡಿಸಿಕೊಳ್ಳಬೇಕು.
• ತೀವ್ರ ಹುಳುಕಾದ ರೋಗಪೀಡಿತ ಹಲ್ಲುಗಳು ಇದ್ದರೆ ವೈದ್ಯರ ಸಲಹೆ ಮೇರೆಗೆ ಅದನ್ನು ಕೀಳಿಸಿಕೊಳ್ಳಬೇಕು.
• ಹಲ್ಲು ಸ್ವಲ್ಪ ಅಲುಗಾಡಿದ ತಕ್ಷಣ ಅದನ್ನು ದಂತ ವೈದ್ಯರಿಂದ ಚಿಕಿತ್ಸೆ ಪಡೆದು ಸರಿಪಡಿಸಬೇಕು.
• ಹಲ್ಲುಗಳನ್ನು ಕೀಳಿಸಿಕೊಳ್ಳಲು ಇಚ್ಛೆ ಇಲ್ಲದಿದ್ದರೆ ಅದನ್ನು ಉಳಿಸಿಕೊಳ್ಳುವ ರೂಟ್ ಕೆನಾಲ್ ಚಿಕಿತ್ಸೆ, ವಸಡು ರೋಗ ಶಸ್ತ್ರಚಿಕಿತ್ಸೆ ಕಡೆಗೆ ಗಮನ ಹರಿಸಿ. ಇದರ ಬಗ್ಗೆ ವೈದ್ಯರಲ್ಲಿ ತಿಳಿದುಕೊಳ್ಳಬೇಕು.
• ಹಲ್ಲುಗಳ ಆರೈಕೆ ಮಾಡಿದಷ್ಟು ನಿಮಗೆ ಧೀರ್ಘಕಾಲೀನವಾಗಿ ಹಲ್ಲುಗಳು ನಿಮ್ಮ ಜೊತೆಯಲ್ಲಿ ಇರುತ್ತವೆ.
• ಹಲ್ಲುಗಳು ಕೀಳಿಸಿಕೊಳ್ಳಲೇಬೇಕಾದ ಪ್ರಮೇಯವೇ ಬಾರದಂತೆ ಅದರ ಆರೋಗ್ಯದ ಕಡೆಗೆ ಗಮನಹರಿಸಿ.
• ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಇರುವ ಇಂದಿನ ಆಧುನಿಕ ಯುಗದಲ್ಲಿ ಹಲ್ಲುಗಳನ್ನು ಕೀಳಿಸಿಕೊಳ್ಳಬೇಕಾದ ಆಯ್ಕೆಯ ವಿಧಾನವು ಕೊನೆಯದಾಗಿರಲಿ.
• ಹಲ್ಲುಗಳ ಸಮಸ್ಯೆಯು ತೀವ್ರ ಗತಿಯಲ್ಲಿ ಇದ್ದು ನೋವು ಪೀಡಿತರಾಗಿದ್ದರೂ ತಾನೇ ತಾನಾಗಿ ಉದರಲಿ ಎಂದು ಎಂದಿಗೂ ಕಾಯಬೇಡಿ.
• ಅಲುಗಾಡುವ ಹಲ್ಲು, ಮುರಿದ,ಚುಚ್ಚುವ ಹಲ್ಲುಗಳಿದ್ದರೆ ಅದನ್ನು ಸರಿಪಡಿಸಬೇಕು.
• ಮೂಢನಂಬಿಕೆಗಳಿಂದ ಎಂದಿಗೂ ಅನಾರೋಗ್ಯ ತಂದುಕೊಳ್ಳಬೇಡಿರಿ.