For the best experience, open
https://m.suddione.com
on your mobile browser.
Advertisement

ದಾವಣಗೆರೆಯಲ್ಲಿ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆ, ನೋಂದಣೆಗೆ ಚಾಲನೆ

05:43 PM Dec 26, 2023 IST | suddionenews
ದಾವಣಗೆರೆಯಲ್ಲಿ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆ  ನೋಂದಣೆಗೆ ಚಾಲನೆ
Advertisement

Advertisement

ದಾವಣಗೆರೆ, ಡಿ. 26 : ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಜಿಲ್ಲೆಯಲ್ಲಿ ಯುವನಿಧಿಗೆ ನೋಂದಣಿ ಪ್ರಕ್ರಿಯೆಗೆ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಎಂ.ವಿ ಚಾಲನೆ ನೀಡಿದರು.

ಮಂಗಳವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರ್ಕಾರದ ಐದನೇ ಗ್ಯಾರಂಟಿಯಾದ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದೊಂದಿಗೆ ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಯವರು ಚಾಲನೆ ನೀಡಿರುವರು.

Advertisement

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ, ಡಿಪ್ಲಮೋ ಮುಗಿಸಿರುವ ನಿರುದ್ಯೋಗಿ ಯುವಕ-ಯುವತಿಯರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಅರ್ಜಿದಾರರು ಕರ್ನಾಟಕದ ನಿವಾಸಿಗಳಾಗಿರಬೇಕು ಮತ್ತು 2023 ರಲ್ಲಿ ಕೋರ್ಸ್  ಪೂರ್ಣಗೊಳಿಸಿರಬೇಕು. ಪದವಿ ಪಾಸ್ ಆದವರಿಗೆ 3 ಸಾವಿರ, ಡಿಪ್ಲೊಮೋ ತೇರ್ಗಡೆ ಹೊಂದಿದವರಿಗೆ 1,500 ರೂಪಾಯಿಗಳನ್ನು ಎರಡು ವರ್ಷಗಳವರೆಗೆ ನೀಡಲಾಗುತ್ತದೆ. ಪದವಿ ಪಡೆದು ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿರುವವರು ಈ ಯೋಜನೆಗೆ ಅರ್ಹರಾಗುವುದಿಲ್ಲ. ಅರ್ಜಿ ಸಲ್ಲಿಸುವಾಗ ನೀಡಿದ ದಾಖಲೆಗಳನ್ನು ಪರಿಶೀಲಿಸುವ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಂಡಿದೆ.

ಯುವ ನಿಧಿ ಫಲಾನುಭವಿಗಳು ಕೆಲಸ ದೊರೆತಿದೆಯೋ ಇಲ್ಲವೋ ಎಂಬುದನ್ನು ಪ್ರತಿ ತಿಂಗಳು ಸಂದೇಶ ಅಥವಾ ಮಾಹಿತಿ ನೀಡಬೇಕಾಗುತ್ತದೆ. ಸ್ವಂತ ಉದ್ಯೋಗ ಆರಂಭಿಸಿದರೆ, ಉದ್ಯೋಗ ಸಿಕ್ಕರೆ ಈ ಭತ್ಯೆ ಪಡೆಯುವಂತಿಲ್ಲ. ಐಟಿ- ಜಿಎಸ್‍ಟಿ ನೋಂದಣಿ, ಇಎಸ್‍ಐ, ಪಿಎಫ್ ಮಾಹಿತಿಯಿಂದಲೂ ಉದ್ಯೋಗ ಪಡೆದಿರುವ ಬಗ್ಗೆ ಮಾಹಿತಿ ಸಿಗಲಿದೆ. ವಿದ್ಯಾರ್ಥಿಗಳು ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳದೇ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್.ಬಿ ಇಟ್ನಾಳ್ ಮಾತನಾಡಿ ಗ್ರಾಮ ಮಟ್ಟದಲ್ಲಿ  ಬಾಪೂಜಿ ಸೇವಾ ಕೇಂದ್ರದಲ್ಲಿ ಈ ದಿನದಿಂದಲೇ ಅರ್ಜಿಗಳನ್ನು ಸ್ವೀಕಾರ ಮಾಡಲಾಗುತ್ತಿದೆ. ಅಲ್ಲದೇ ಡಿ. 27 ರಿಂದ 29 ರವರೆಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿ.ಡಿ.ಓ, ಡಾಟಾ ಎಂಟ್ರಿ ಆಪರೇಟರ್, ಅಂಗನವಾಡಿ ಕಾರ್ಯಕರ್ತೆಯರು, ಬ್ಯಾಂಕ್ ಪ್ರತಿನಿಧಿಗಳು ಹಾಗೂ ಇ.ಡಿ.ಸಿ.ಎಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ಕ್ಯಾಂಪ್‍ಗಳನ್ನು ಆಯೋಜನೆ ಮಾಡಲಾಗುತ್ತದೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸ್ಥಿತಿಗತಿ, ಆಧಾರ್ ಜೋಡಣೆ ಹಾಗೂ  ಇನ್ನಿತರೆ ತಾಂತ್ರಿಕ ಸಮಸ್ಯೆಗಳಿದ್ದರೆ, ಇಲ್ಲಿ ಬಗೆಹರಿಸಿಕೊಳ್ಳಬಹುದು ಎಂದರು.

ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ, ಡಿ, ಕೌಶಲ್ಯಾಭಿವೃದ್ಧಿ ಅಧಿಕಾರಿ ಬಸವನಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಷಣ್ಮುಖಪ್ಪ ಉಪಸ್ಥಿತರಿದ್ದರು.

Tags :
Advertisement