ದಾವಣಗೆರೆಯಲ್ಲಿ ಶುರುವಾಯ್ತು ನೀರಿನ ಅಭಾವ : 19 ಗ್ರಾಮಗಳಿಗೆ ಬರದ ಛಾಯೆ..!
ಈ ಬಾರಿ ಜನ ಸಾಮಾನ್ಯರೆಲ್ಲಾ ಬೇಸಿಗೆ ಮುನ್ನವೇ ತತ್ತರಿಸಿ ಹೋಗುತ್ತಿದ್ದಾರೆ. ಅದಕ್ಕೆಲ್ಲಾ ಕಾರಣ ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದು. ಬರದಿಂದ ಈಗಾಗಲೇ ರೈತರು ತತ್ತರಿಸಿ ಹೋಗಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ದಾವಣಗೆರೆಯಲ್ಲಿ ಜನ ಬೇಸಿಗೆಯಿಂದ ಬೆವರುತ್ತಿದ್ದಾರೆ. ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
ದಾವಣಗೆರೆಯ ನೀರಿನ ಸಮಸ್ಯೆ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಎಂ ವಿ ವೆಂಕಟೇಶ್ ಅವರು, ತೀವ್ರ ಬಿಸಿಲು ಇರುವುದರಿಂದ ಮುಂದೆ ಸಮಸ್ಯೆಯಾಗಲಿರುವ 126 ಗ್ರಾಮಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ಇಲ್ಲಿ ಖಾಸಗಿ ಕೊಳವೆ ಗುರುತಿಸಿಟ್ಟುಕೊಳ್ಳಲಾಗಿದೆ. ಅವುಗಳು ಲಭ್ಯವಾಗದಿದ್ದಲ್ಲಿ ಸಮಸ್ಯೆಯಾದ 24 ಗಂಟೆಯೊಳಗೆ ಟ್ಯಾಂಕರ್ ಗಳ ಮೂಲಕ ನೀರು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಗಸ್ಟ್ ತಿಂಗಳಲ್ಲಿ ಶೇಕಡ 90% ಮಳೆ ಕೊರತೆ ಎದುರಿಸಲಾಗಿದೆ.ಇದರಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಇಳಿಕೆಯಾಗಿದ್ದು, ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಪೂರೈಕೆಯಾಗುತ್ತಿರುವ ಗ್ರಾಮಗಳಿಗೆ ನೀರಿನ ಸಮಸ್ಯೆ ಇರುವುದಿಲ್ಲ. ಭದ್ರಾ ಜಲಾಶಯದ ಮೂಲಕ ತುಂಗಾ ಭದ್ರಾ ನದಿಗೆ ಹಾಗೂ ಕಾಲುವೆಗಳಿಗೆ ನೀರು ಪೂರೈಕೆಯಾಗಲಿದೆ. ಶಾಂತಿ ಸಾಗರದಿಂದ ಹಲವು ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಕಾಲುವೆ ಮೂಲಕ ಶಾಂತಿಸಾಗರಕ್ಕೆ ಬಿಡಿಸಲಾಗಿದೆ. ಕಾಲುವೆಯ ಕೊನೆ ಭಾಗದ ರೈತರಿಗೆ ನೀರು ತಲುಪಿಸುವ ಉದ್ದೇಶದಿಂದ ನಾಲೆಗೆ ಅಕ್ರಮವಾಗಿ ಅಳವಡಿಸಲಾಗಿದ್ದ ಪಂಪ್ ಸೆಟ್‌ಗಳ ತೆರವಿಗೂ ತಂಡ ರಚಿಸಲಾಗಿದೆ. ಸಮಸ್ಯೆಗಳು ಎದುರಾದರೆ ಅಲ್ಲಿ 144 ಸೆಕ್ಷನ್ ಜಾರಿಗೊಳಿಸಲು ತಹಶಿಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.