ದಾವಣಗೆರೆ ಹಾಗೂ ಹಾಸನ ಸಂಸದರ ಆಯ್ಕೆ ಅಸಿಂಧುಗೊಳಿಸುವಂತೆ ಹೈಕೋರ್ಟ್ ಮೊರೆ..!
ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಇಬ್ಬರು ಸಂಸದರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆಯಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಆಯ್ಕೆ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಬಿಜೆಪಿ ನಾಯಕರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಜಿ.ಎಸ್.ಗಾಯತ್ರಿ ತಕರಾರು ತೆಗೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಆಯ್ಕೆಯ ವಿಚಾರಕ್ಕೆ ಹೈಕೋರ್ಟ್ ಮೆಟ್ಟಿಲೇರಿದ್ದು, ಡಾ.ಪ್ರಭಾ ಅವರು ಚುನಾವಣಾ ಸಮಯದಲ್ಲಿ ಮಹಿಳೆಯರಿಗೆ ಒಂದು ಲಕ್ಷ ರೂಪಾಯಿಯ ಗ್ಯಾರಂಟಿ ಕಾರ್ಡ್ ವಿತರಿಸಿದ್ದಾರೆ. ಮತದಾರರಿಗೆ ಲಂಚದ ಆಮಿಷವೊಡ್ಡಿದ್ದಾರೆ. ಹೀಗಾಗಿ ಅವರು ಚುನಾವಣೆಯಲ್ಲಿ ಅಕ್ರಮವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸುವಂತೆ ಮನವಿ ಮಾಡಿದ್ದಾರೆ. ಡಾ.ಪ್ರಭಾ ಎದುರು ಈ ಬಾರೀ ಜಿ.ಎಸ್. ಗಾಯತ್ರಿ ಅವರು ಸೋಲು ಕಂಡಿದ್ದರು.
ಇನ್ನು ಹಾಸನ ಲೋಕಸಭಾ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿರುವ ಶ್ರೇಯಸ್ ಪಾಟೀಲ್ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸುವಂತೆ ಮನವಿ ಮಾಡಲಾಗಿದ್ದು, ವಕೀಲ ದೇವರಾಜೇಗೌಡ ಅವರ ಪುತ್ರ ಡಿ.ಚರಣ್ ತಕರಾರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹಿಂದಿನ ಐದು ವರ್ಷಗಳ ಆದಾಯ ತೆರಿಗೆ ರಿಟರ್ನ್ ಸಲ್ಲಿಸಿಲ್ಲ. ಪ್ರಮಾಣ ಪತ್ರದಲ್ಲಿಯೂ ಸಂಪೂರ್ಣ ಮಾಹಿತಿ ನೀಡಿಲ್ಲ. ಚುನಾವಣಾ ವೆಚ್ಚದ ಬಗ್ಗೆಯೂ ತಪ್ಪು ಮಾಹಿತಿ ನೀಡಿದ್ದಾರೆ. ಹೀಗಾಗಿ ಶ್ರೇಯಸ್ ಪಾಟೀಲ್ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ದೇವರಾಜೇಗೌಡ ಅವರ ಪುತ್ರ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎದುರು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೀಲ್ ಗೆಲುವು ಕಂಡಿದ್ದಾರೆ.