ಶಾಂತಿ, ಸೌಹಾರ್ಧತೆ ಹಾಗೂ ಸಂಭ್ರಮದಿಂದ ಗೌರಿ ಗಣೇಶ, ಈದ್ ಮಿಲಾದ್ ಹಬ್ಬ ಆಚರಿಸಬೇಕು : ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ
ದಾವಣಗೆರೆ ಆ, 28 : ಶಾಂತಯುತ, ಸೌಹಾರ್ಧ ಹಾಗೂ ಸಂಭ್ರಮದಿಂದ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಜನರಲ್ಲಿ ಮನವಿ ಮಾಡಿದರು.
ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಬುಧುವಾರ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಾಗರೀಕ ಸೌಹಾರ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಣೇಶ ಚತುರ್ಥಿಯನ್ನು ಪ್ರತಿ ವರ್ಷದ ಆಚರಣೆಯಂತೆ ಹಾಗೂ ಸಾಂಪ್ರದಾಯಿಕವಾಗಿ ಈ ವರ್ಷವೂ ಆಚರಿಸಬೇಕು. ಸಾರ್ವಜನಿಕವಾಗಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸುವ ಪ್ರತಿಯೊಬ್ಬರು ಸಂಬಂಧ ಪಟ್ಟ ಇಲಾಖೆಯಿಂದ ಅನುಮತಿ ಪಡೆದುಕೊಂಡು ಪರಿಸರಕ್ಕೆ ಮಾರಕವಾಗಿರುವ ಪಿಓಪಿ ಗಣೇಶ ಮೂರ್ತಿಗಳ ಬಳಕೆ ಮಾಡದೇ, ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು ಎಂದು ತಿಳಿಸಿದರು.
ಸರ್ಕಾರ ಈಗಾಗಲೇ ಹಬ್ಬದ ಆಚರಣೆಗೆ ನಿರ್ದೇಶನಗಳನ್ನು ನೀಡಿದ್ದು, ಗಜಾನನ ಉತ್ಸವ ಸಮಿತಿಯವರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ಪೆಂಡಾಲ್ ನಿರ್ಮಿಸಬೇಕು, ಪೆಂಡಾಲಗಳಲ್ಲಿ ಅವಘಡ ಸಂಭವಿಸದಂತೆ ಎಚ್ಚರವಹಿಸಬೇಕು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಬಾರದು. ಮೂರ್ತಿ ಪ್ರತಿಷ್ಠಾಪನೆಗೆ ಧ್ವನಿವರ್ಧಕಗಳ ಬಳಕೆಗೆ ಅಧಿಕೃತವಾಗಿ ಪರವಾನಗಿ ಪಡೆಯಬೇಕು. ಹಸಿರು ಪಟಾಕಿ ಬಳಸಿ. ಆಸ್ಪತ್ರೆ, ಶಾಲಾ, ಕಾಲೇಜು ಅಕ್ಕಪಕ್ಕದಲ್ಲಿ ಪಟಾಕಿ ಸಿಡಿಸುವಂತಿಲ್ಲ. ಮತ್ತು ಸುರಕ್ಷತೆ ದೃಷ್ಟಿಯಿಂದ ಪಟ್ಟಣದಾದ್ಯಂತ್ಯ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು. ಅಹಿತಕರ ಘಟನೆಗಳು ಜರುಗದಂತೆ ಎಚ್ಚರವಹಿಸಲಾಗುವುದು. ಗಣೇಶ ವಿಸರ್ಜನೆಗೆ ನಿಗಧಿ ಮಾಡುವ ರಸ್ತೆಯನ್ನು ಬದಲಿಸಬಾರದು. ನಿಗದಿತ ಸಮಯದಲ್ಲಿಯೇ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು ಎಂದರು.
ಯಾವುದೇ ರೀತಿಯಾಗಿ ದಾರಿ ಮಧ್ಯದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಜನರಿಗೆ ಓಡಾಡಲು ತೊಂದರೆಯಾಗುವಂತೆ ಮಾಡಬಾರದು ಪ್ರತಿಯೊಬ್ಬರು ಯಾವುದೇ ರೀತಿಯಾಗಿ ಅಹಿತಕರ ಘಟನೆಗಳು ಸಂಭವಿಸದಂತೆ ಗಣೇಶನ ಚತುರ್ಥಿ ಆಚರಣೆ ಮಾಡಿ ಎಂದು ತಿಳಿಸಿದರು.
ಸಮಾಜದ ಮುಖಂಡರು ಹಾಗೂ ಹಿರಿಯರು ಯುವಕರಿಗೆ ತಿಳಿವಳಿಕೆಯನ್ನು ನೀಡಿ ಈದ್ ಮಿಲಾದ್ ಹಾಗೂ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ವಾಟ್ಸ್‍ಪ್ ಮೂಲಕ ಬರುವ ಅನಗತ್ಯ ವಿಷಯಗಳನ್ನು ನಂಬಬಾರದು, ಒಂದು ವೇಳೆ ಅನಗತ್ಯ ಸಂದೇಶಗಳನ್ನು ಫಾರ್ವರ್ಡ್ ಮಾಡುವವರ ಬಗ್ಗೆ ತಿಳಿದುಬಂದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಾಜ, ಕಾನೂನು, ದೇಶ , ಹಾಗೂ ಸಂವಿಧಾನ ಬಿಟ್ಟು ನಾವ್ಯಾರೂ ದೊಡ್ಡವರಲ್ಲ, ಆದ್ದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಎಲ್ಲ ವರ್ಗದ ಜನರು ವ್ಯವಸ್ಥೆಗೆ ಸಹಕರಿಸಿ ಪರಸ್ಪರ ಗೌರವ ಕೊಟ್ಟು ತಾವೆಲ್ಲರೂ ಶಾಂತಯುತವಾಗಿ ಹಬ್ಬಗಳನ್ನು ಆಚರಣೆ ಮಾಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಮಾತನಾಡಿ ಗಣೇಶ ಉತ್ಸವÀಗಳು ನಮ್ಮ ಸಂಸ್ಕøತಿ, ಸಂಪ್ರದಾಯಗಳನ್ನು ಬಿಂಬಿಸುವ ಉತ್ಸವಗಳಾಗಬೇಕು, ವಿನಾಕಾರಣ ಗೊಂದಲದ ವಾತಾವರಣ ಸೃಷ್ಟಿಯಾಗಬಾರದು. ಪೆÇಲೀಸ್ ಇಲಾಖೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಗಣೇಶ ಪ್ರತಿಷ್ಠಾಪಿಸಿರುವ ಕಡೆಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು, ಅದು ನಿಮಗೂ, ನಮಗೂ ಹೆಚ್ಚು ಅನುಕೂಲ, ಯಾವುದೇ ರೀತಿ ಅಹಿತಕರ ಘಟನೆಗಳು ನಡೆದಯಂತೆ ತಡೆಯಬಹುದಾಗಿದೆ ಎಂದು ಹೇಳಿದರು.
ಸಾರ್ವಜನಿಕವಾಗಿ ವಿವಿಧ ಸಂಘ ಸಂಸ್ಥೆಗಳು ಗಣೇಶ ಪ್ರತಿಷ್ಠಾಪಿಸುವ ಮುನ್ನ ಪಾಲಿಸಬೇಕಾದ ನಿಯಮ ಹಾಗೂ ನಿಬಂಧನಗಳನ್ನು ಪಾಲಿಸಬೇಕು, ಮುಖ್ಯವಾಗಿ ಗಣೇಶ ಪ್ರತಿಷ್ಠಾಪಿಸುವ ಸ್ಥಳದ ಮಾಹಿತಿ ಹಾಗೂ ಸ್ಥಳದ ಮಾಲೀಕರಿಂದ, ಪೊಲೀಸ್ ಇಲಾಖೆಯ ಅನುಮತಿ ಕಡ್ಡಾಯವಾಗಿ ಪಡೆದಿರಬೇಕು.
ಗಣೇಶ ಹಬ್ಬವನ್ನು ಶ್ರದ್ದಾಭಕ್ತಿ, ಶಾಂತಿ ಮತ್ತು ಸೌಹಾರ್ಧತೆಯ ಸಂಕೇತವಾಗಿ ಆಚರಿಸಬೇಕು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಬ್ಬಗಳ ಆಚರಣೆಯಲ್ಲಿ ದುಂದು ವೆಚ್ಚಗಳಿಗೆ ಅವಕಾಶ ನೀಡದೇ ಧಾರ್ಮಿಕತೆ ಸಾರುವಂತಿರಬೇಕು. ಭಾವೈಕ್ಯತೆ ಬಿತ್ತುವ ಮೂಲಕ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ಆಚರಣೆ ಮಾಡಬೇಕು. ಇಂತಹ ಅವಕಾಶಗಳ ಬಳಕೆ ಮಾಡಿಕೊಂಡು ಶಾಂತಿ ಕದಡಲು ಪ್ರಯತ್ನಿಸುವ ಕಿಡಿಗೇಡಿಗಳ ಮೇಲೆ ಇಲಾಖೆ ಹೆಚ್ಚಿನ ನಿಗಾ ವಹಿಸುತ್ತದೆ, ಇಲಾಖಾ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಗಣೇಶ ವಿಸರ್ಜನೆ ವೇಳೆ ಕರ್ಕಶವಾದ ಸದ್ದು ಮಾಡುವುದು ನಿಷೇಧಿಸಲಾಗಿದೆ, ಹಿರಿಯರು, ಆನಾರೋಗ್ಯದಿಂದ ಬಳಲುತ್ತಿರುವ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಳ್ಳಬೇಕೆಂದರು.
ಸಮಾಜದ ಮುಖಂಡರು ಹಾಗೂ ಹಿರಿಯರು ಯುವಕರಿಗೆ ತಿಳಿವಳಿಕೆಯನ್ನು ನೀಡಿ ಈದ್-ಮಿಲಾದ್ ಹಬ್ಬದ ಸಂದರ್ಭದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಮುಸ್ಲಿಂ ಭಾಂದವರು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ಧತೆಯಿಂದ ಆಚರಿಸಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆಯ ಆಯುಕ್ತರಾದ ರೇಣುಕಾ ಮಾತನಾಡಿ ಮನೆಗಳಲ್ಲಿನ ಚಿಕ್ಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಪ್ರಮುಖ ಸರ್ಕಲ್‍ಗಳಲ್ಲಿ 30 ಮೊಬೈಲ್ ಟ್ಯಾಂಕರ್‍ಗಳನ್ನು ಅಳವಡಿಸಲಾಗಿರುತ್ತದೆ. ವಿಸರ್ಜನೆ ಮಾಡುವ ವೇಳೆ ಒಂದು ಕಡೆ ಮೂರ್ತಿ ಕೊಡುವುದು, ಇನ್ನೊಂದು ಕಡೆ ಹೂವು, ಪೇಟ ಇತ್ಯಾದಿಗಳನ್ನು ಕೊಡಬೇಕು. ಹಾಗೂ ದೊಡ್ಡ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲು ಶಿರಮಗೊಂಡನಹಳ್ಳಿಯಲ್ಲಿ ಟ್ಯಾಂಕರ್‍ಗಳನ್ನು ಅಳವಡಿಸಲಾಗಿದೆ. ಮತ್ತು ಪಾಕಿರ್ಂಗ್ ಕುಡಿಯುವ ನೀರು, ಲೈಟ್, ಸಿ.ಸಿ ಕ್ಯಾಮೆರಾಗಳ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಪಾಲಿಕೆಯಲ್ಲಿ ಮೂವರು ಅಧಿಕಾರಿಗಳನ್ನು ನೇಮಿಸಿ, ಗಣೇಶ ಮೂರ್ತಿ ಪ್ರತಿಷ್ಟಾಪಿಸಲು ಬೇಕಾದ ಎನ್.ಓ.ಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಉಪ ವಿಭಾಗಾಧಿಕಾರಿ ಸಂತೋಷ ಪಾಟೀಲ್, ಹೆಚ್ಚುವರಿ ರಕ್ಷಣಾಧಿಕಾರಿ ವಿಜಯಕುಮಾರ್ ಎಂ ಸಂತೋಷ್, ಮಂಜುನಾಥ್ ಹಾಗೂ ಇನ್ನಿತರೆ ಪೊಲೀಸ್ ಅಧಿಕಾರಿಗಳು, ಸಮಾಜದ ಮುಖಂಡರು ಉಪಸ್ಥಿತರಿದ್ದರು.