ದಾವಣಗೆರೆಯಲ್ಲಿ ವೈದ್ಯರ ಯಡವಟ್ಟು : ಹೆರಿಗೆ ವೇಳೆ ಮಗುವಿನ ಮರ್ಮಾಂಗ ಕಟ್, ಮಗು ಸಾವು..!
ದಾವಣಗೆರೆ: ಎಷ್ಟೋ ಸಲ ವೈದ್ಯರ ಯಡವಟ್ಟಿನ ಬಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಹಲವರ ಪ್ರಾಣವೂ ಹೋಗಿದೆ. ಅದರಲ್ಲೂ ಹೆರಿಗೆ ಸಮಯದಲ್ಲೂ ವೈದ್ಯರ ಯಡವಟ್ಟಿನಿಂದ ಅನಾಹುತಗಳು ನಡೆದು ಹೋಗಿವೆ. ಇದೀಗ ದಾವಣಗೆರೆಯಲ್ಲಿ ಹೆರಿಗೆ ಸಮಯದಲ್ಲಿಯೇ ಮಗುವಿನ ಮರ್ಮಾಂಗಕ್ಕೆ ಕತ್ತರಿ ಹಾಕಲಾಗಿದೆ.
ಈ ಘಟನೆ ನಡೆದಿರುವುದು ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ. ಕೊಂಡಜ್ಜಿ ರಸ್ತೆಯಲ್ಲಿ ವಾಸವಿದ್ದ ಗರ್ಭಿಣಿ, ಹೆರಿಗೆಗೆಂದು ದಾಖಲಾಗಿದ್ದರು. ಗರ್ಭಿಣಿಯನ್ನು ಪರೀಕ್ಷೆ ಮಾಡಿದ ವೈದ್ಯರು ಸಿ ಸೆಕ್ಷನ್ ಮಾಡಿಸಿಕೊಳ್ಳಲು ಸೂಚನೆ ನೀಡಿದರು. ಮನೆಯವರು ಕೂಡ ಸಿಸೇರಿಯನ್ ಮಾಡಿಸಲು ಒಪ್ಪಿದರು. ಬಳಿಕ ಗರ್ಭಿಣಿಯನ್ನು ಆಪರೇಷನ್ ರೂಮಿಗೆ ಕರೆದುಕೊಂಡು ಹೋಗಿ, ಅರವಳಿಕೆಯನ್ನು ನೀಡಿದ್ದಾರೆ. ಆದರೆ ಆಪರೇಷನ್ ಮಾಡುವ ವೇಳೆ ಈ ಅವಘಡ ಸಂಭವಿಸಿದೆ. ಈ ಘಟನೆ ನಡೆದಿರುವುದು ಜೂನ್ 27ರಂದು. ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ.
ನಿಜಾಮುದ್ದೀನ್ ಎಂಬ ವೈದ್ಯ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಆಪರೇಷನ್ ವೇಳೆ ಮಗುವಿನ ಮರ್ಮಾಂಗವನ್ನೇ ಕತ್ತರಿಸಿದ್ದಾರೆ. ಹೆರಿಗೆಯಾಗುವಾಗಲೇ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ತಕ್ಷಣ ಮಗುವನ್ನು ಬಾಪುಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಸತತ ಶಸ್ತ್ರ ಚಿಕಿತ್ಸೆಯನ್ನು ಮಗುವಿಗೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಮಗುವಿನ ಸಾವಿಗೆ ವೈದ್ಯರು ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಮಗುವಿನ ಸಾವಿಗರ ಕಾರಣವಾದ ವೈದ್ಯನನ್ನು ಅಮಾನತು ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ. ಮಗುವನ್ನು ಕೊಂದಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈದ್ಯರನ್ನು ನಂಬಿ ಜನ ಕಣ್ಣು ಮುಚ್ಚಿ ಬರುತ್ತಾರೆ. ಈ ರೀತಿಯ ಯಡವಟ್ಟುಗಳಿಂದ ಕೆಲವೊಬ್ಬರ ಜೀವವೇ ಹೋಗಿ ಬಿಡುತ್ತೆ. ವೈದ್ಯರು ಕೂಡ ಎಚ್ಚರಿಕೆಯಿಂದ ಕೆಲಸ
ಮಾಡಬೇಕಿದೆ.