ದೆಹಲಿಗೆ ಟಿಕೆಟ್ ಗಾಗಿ ಹೋಗಿದ್ದರಾ..? ಸ್ಪಷ್ಟನೆ ನೀಡಿದ ಸಂಸದ ಸಿದ್ದೇಶ್ವರ
ದಾವಣಗೆರೆ: ಲೋಕಸಭಾ ಚುನಾವಣೆ ಸನಿಹವಾಗುತ್ತಿರುವಂತೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ದೆಹಲಿಯ ತನಕ ಹೋಗಿ, ಟಿಕೆಟ್ ಲಾಭಿ ನಡೆಸಯತ್ತಿದ್ದಾರೆ. ಇತ್ತಿಚೆಗಷ್ಟೇ ಸಂಸದ ಸಿದ್ದೇಶ್ವರ ಅವರು ಕೂಡ ದೆಹಲಿಗೆ ಭೇಟಿ ನೀಡಿದ್ದರು. ಟಿಕೆಟ್ ಕೇಳಲು ಹೋಗಿದ್ದಾರೆ ಎಂದು ಚರ್ಚೆಗಳು ಶುರುವಾಗಿದ್ದವು. ಇದೀಗ ಈ ಬಗ್ಗೆ ಸಂಸದ ಸಿದ್ದೇಶ್ವರ ಅವರು ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆಯ ವಡ್ಡಿನಹಳ್ಳಿಯಲ್ಲಿ ಮಾತನಾಡಿದ ಅವರು, ನಾನು ದೆಹಲಿಗೆ ಟಿಕೆಟ್ ಕೇಳಲು ಹೋಗಿಲ್ಲ. ಪಕ್ಷದ ಸಭೆಗಾಗಿ ಹೋಗಿದ್ದೆ. ದಾವಣಗೆರೆ ಕ್ಷೇತ್ರಕ್ಕೆ ಮೊದಲಿನಿಂದಲೂ ಬೇಡಿಕೆ ಇದೆ. ಆದರೆ ಈ ಬಾರಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ದಾವಣಗೆರೆ ಕ್ಷೇತ್ರದ ಟಿಕೆಟ್ ಅನ್ನು ಈ ಬಾರಿಯೂ ನನಗೆ ಕೊಡುತ್ತಾರೆ. ಜನರ ಪ್ರೀತಿ ನನ್ನ ಮೇಲಿದ್ದರೆ ಐದನೇ ಬಾರಿಗೆ ಸಂಸದನಾಗುತ್ತೇನೆ ಎಂದಿದ್ದಾರೆ.
ನಾನು ಮೂಲತಃ ಚಿತ್ರದುರ್ಗ ಜಿಲ್ಲೆಯವನೆಂದು ಕಾಂಗ್ರೆಸ್ ನವರು ಹೇಳುತ್ತಿದ್ದರು. ದಾವಣಗೆರೆ ಜಿಲ್ಲಾ ಬಿಜೆಪಿ ಘಟಕದಲ್ಲಿ ಯಾರೂ ಗಂಡಸರಿಲ್ವಾ ಎಂದು ಪ್ರಶ್ನೆ ಮಾಡಿದ್ದರು. ಇದೇ ಮಾತನ್ನು ಈಗ ನಮ್ಮ ಬಿಜೆಪಿಯ ಕೆಲ ನಾಯಕರು ಕೇಳುತ್ತಿದ್ದಾರೆ. ನನ್ನ ಪುತ್ರನಿಗೆ ನಾನು ಟಿಕೆಟ್ ಕೇಳಿಲ್ಲ. ಆತ ಸ್ಪರ್ಧೆ ಮಾಡಿದರೆ ಮಾಡಬಹುದು. ನಮ್ಮ ತಂದೆ ಸಂಸದರು, ನಾನು ಸಂಸದ, ನನ್ನ ಪುತ್ರನೂ ಸಂಸದನಾದರೆ ಹೊಸದೇನು ಅಲ್ಲ. ಬೇರೆ ಪಕ್ಷದಲ್ಲೂ ತಂದೆ, ಮಗ, ಮೊಮ್ಮಗ ಬೇಕಾದಷ್ಟು ಜನ ಸಿಗುತ್ತಾರೆ ಎಂದಿದ್ದಾರೆ. ಈ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ತನಗೆ ಟಿಕೆಟ್ ಸಿಗಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಯಾರಿಗೆ ಟಿಕೆಟ್ ನೀಡಲಿದೆ ಎಂಬುದಷ್ಟೇ ಕುತೂಹಲ.