ದಾವಣಗೆರೆ | 38 ನೇ ರಾಜ್ಯ ಮಟ್ಟದ ಪತ್ರಕರ್ತರ ಸಮಾವೇಶಕ್ಕೆ ಸಿಂಗಾರಗೊಂಡ ಬೆಣ್ಣೆನಗರಿ
ದಾವಣಗೆರೆ: ರಾಜ್ಯ ಮಟ್ಟದ 38ನೇ ಪತ್ರಕರ್ತರ ಸಮ್ಮೇಳನ ದಾವಣಗೆರೆ ನಗರದ ಹದಡಿ ರಸ್ತೆಯಲ್ಲಿರುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದಲ್ಲಿ ಫೆಬ್ರವರಿ 3 ಮತ್ತು 4 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಬೆಣ್ಣೆನಗರಿಯಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ದಾವಣಗೆರೆ ಜಿಲ್ಲೆಯಾಗಿ 31 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 38ನೇ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಈಗಾಗಕೇ ಎಲ್ಲಾ ಸಿದ್ದತೆ ಪೂರ್ಣಗೊಂಡಿದ್ದು, ಆಕರ್ಷಕ ವೇದಿಕೆ, ಕಲ್ಯಾಣ ಮಂಟಪದ ಮುಂಭಾಗದಲ್ಲಿ ವರ್ಣರಂಜಿತ ಸೀರೆಗಳಿಂದ ಸಿಂಗಾರ ಮಾಡಲಾಗಿದೆ.
ಛಾಯಾಚಿತ್ರ ಪ್ರದರ್ಶನ, ವಸ್ತು ಪ್ರದರ್ಶನ ಹಾಗೂ ವ್ಯಂಗ್ಯಚಿತ್ರ ಪ್ರದರ್ಶನಕ್ಜೆ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ 20 ಮಳಿಗೆಗಳನ್ನು ಸ್ಥಾಪಿಸಲಾಗಿದೆ.
ಎಸ್ಪಿ ಉಮಾ ಪ್ರಶಾಂತ್, ಡಿಸಿ ಡಾ.ಎಂ.ವಿ.ವೆಂಕಟೇಶ್ ಭೇಟಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಹಿನ್ನೆಲೆಯಲ್ಲಿ ಎಸ್ಪಿ ಉಮಾ ಪ್ರಶಾಂತ್, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವುದರಿಂದ ಯಾವುದೇ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಅವರಿಗೆ ಸೂಚಿಸಿದ ಅವರು, ಸಮ್ಮೇಳನ 31 ವರ್ಷಗಳ ಬಳಿಕ ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ನಡೆಯುತ್ತಿದ್ದು, ಎಲ್ಲರೂ ಯಶಸ್ವಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ, ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವುದರಿಂದ ದಾವಣಗೆರೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಂದೋಬಸ್ತ್ ಗೆ ,500 ಜನ ಪೊಲೀಸ್ ಸಿಬ್ಬಂದಿ, 100 ಜನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದ ಹೊರಗಡೆ ಮತ್ತು ಒಳಗಡೆ ಒಂದು ಡಿವೈಎಸ್ಪಿ, 4 ಜನ ಸಿಪಿಐ, 19 ಜನ ಪಿಎಸ್ಐ, 19 ಜನ ಎಎಸ್ಐ,94 ಜನ ಎಚ್.ಸಿ, 31 ಜನ ಮಹಿಳಾ ಎಚ್ ಸಿ ಸೇರಿದಂತೆ ಒಟ್ಟು 168 ಜನ ಪೊಲೀಸ್ ಸಿಬ್ಬಂದಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಾಹನ ನಿಲುಗಡೆಗೆ ವ್ಯವಸ್ಥೆ:
ರಾಜ್ಯದಿಂದ ಆಗಮಿಸುವ ಪ್ರತಿನಿಧಿಗಳ ವಾಹನಗಳನ್ನು ನಿಲುಗಡೆಗೆ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದ ಮುಂಭಾಗದಲ್ಲಿರುವ ಖಾಲಿ ಜಾಗ ಮತ್ತು ಐಟಿಐ ಕಾಲೇಜು ಆವರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ ರಾಜ್ಯದಿಂದ ಆಗಮಿಸುವ ಪ್ರತಿನಿಧಿಗಳು ವಾಹಗಳ ನಿಲುಗಡೆಗೆ ವ್ಯವಸ್ಥೆ ಮಾಡಿರುವ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿಗಳಾದ ಬಸವರಾಜ್, ಮಲ್ಲೇಶ್ ದೊಡ್ಡಮನಿ, ಸಿಪಿಐಗಳಾದ ಸುನೀಲ್ ಕುಮಾರ್, ಸುರೇಶ್ ಸಗರಿ, ನಾಗರಾಜ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ಏಕಬೋಟೆ, ಉಪಾಧ್ಯಕ್ಷ ಎಚ್.ಎನ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್, ಖಜಾಂಚಿ ಎನ್.ವಿ..ಬದರಿನಾಥ್, ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಣ್ಣ, ದಾವಣಗೆರೆ ವರದಿಗಾರರ ಕೂದ ಅಧ್ಯಕ್ಷ ಕೆ.ಏಕಾಂತಪ್ಪ, ಪ್ರಧಾನ ಕಾರ್ಯದರ್ಶಿ ಸಿ.ವರದರಾಜ್, ಕಾರ್ಯದರ್ಶಿ ಎ.ಎನ್.ನಿಂಗಪ್ಪ, ಖಜಾಂಚಿ ಮಧುನಾಗರಾಜ್, ಪ್ರಚಾರ ಸಮಿತಿಯ ನಿರ್ವಾಹಕರಾದ ರಂಗನಾಥ್, ಹೆಚ್ ಎಂ ಪಿ ಕುಮಾರ್ ಸೇರಿದಂತೆ ಹಿರಿಯ ಪತ್ರಕರ್ತರು,
ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.
ವರದಿ ಮತ್ತು ಫೋಟೋ ಕೃಪೆ :
ಇ.ಎಂ. ಮಂಜುನಾಥ
ಉಪ ಸಂಪಾದಕರು, ಜನತಾವಾಣಿ.
ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ
Mob. : 94482 77772