For the best experience, open
https://m.suddione.com
on your mobile browser.
Advertisement

ಪಿಎಂ ಆವಾಸ್ ಯೋಜನೆಯಡಿ 4 ಕೋಟಿಗೂ ಅಧಿಕ ಮನೆಗಳ ನಿರ್ಮಾಣ: ಪ್ರಹ್ಲಾದ್ ಜೋಶಿ

06:39 PM Dec 29, 2023 IST | suddionenews
ಪಿಎಂ ಆವಾಸ್ ಯೋಜನೆಯಡಿ 4 ಕೋಟಿಗೂ ಅಧಿಕ ಮನೆಗಳ ನಿರ್ಮಾಣ  ಪ್ರಹ್ಲಾದ್ ಜೋಶಿ
Advertisement

ಸುದ್ದಿಒನ್, ದಾವಣಗೆರೆ. ಡಿ.29:  ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕಳೆದ 10 ವರ್ಷಗಳಲ್ಲಿ ದೇಶದ ಬಡವರಿಗಾಗಿ  4 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.

Advertisement

ದಾವಣಗೆರೆ ತಾಲ್ಲೂಕಿನ ಹೆಮ್ಮನಬೇತೂರು ಗ್ರಾಮದಲ್ಲಿ ಶುಕ್ರವಾರ  ಆಯೋಜಿಸಲಾಗಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಹಿಂದೆ 3.50 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ 4 ಕೋಟಿಗೂ ಅಧಿಕ  ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಿದೆ. ಈ ಮೂಲಕ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದರು.

Advertisement

ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡ ಕುಟುಂಬಗಳಿಗೆ ಉಚಿತ ಎಲ್.ಪಿ.ಜಿ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದ ಅವರು, ಭವಿಷ್ಯದಲ್ಲಿ ದೇಶದ ಕೃಷಿ ಕ್ಷೇತ್ರ ಸಂಪೂರ್ಣ ತಾಂತ್ರಿಕತೆಯಗಳ ಮೇಲೆ ನಡೆಯಲಿದೆ. ಇದರ ಭಾಗವಾಗಿ ಬೆಳೆಗಳಿಗೆ ಔಷಧಿ ಸಿಂಪರಣೆಗೆ 15 ಸಾವಿರ ಡ್ರೋಣ್ ಗಳನ್ನು ದೇಶದ ಸ್ತ್ರೀ ಶಕ್ತಿ ಸಂಘಗಳಿಗೆ ಶೇ.80 ರಷ್ಟು ಸಹಾಯಧನದೊಂದಿಗೆ ನೀಡಲಿದೆ. ಈ ಯೋಜನೆಗೆ ನಮೋ ಡ್ರೋಣ್ ದೀದಿ ಎಂದು ಹೆಸರಿಸಲಾಗಿದೆ. ಈ ಡ್ರೋಣ್ ಸಹಾಯದಿಂದ ನ್ಯಾನೋ ಯೂರಿಯಾವನ್ನು ದಿನಕ್ಕೆ 100 ಎಕರೆ ಸಿಂಪರಣೆ ಮಾಡಬಹುದಾಗಿದೆ. ಈ ಯೋಜನೆ ದೇಶದಲ್ಲಿ ಬಹುದೊಡ್ಡ ಬದಲಾವಣೆ ತರಲಿದೆ ಎಂದರು.

ದಾವಣಗೆರೆ ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೈ ಗೊಂಡಿರುವ ಜನಕಲ್ಯಾಣ ಕಾರ್ಯಕ್ರಮಗಳಿಂದ ದೇಶದ ಅಭಿವೃದ್ಧಿಯ ಚಿತ್ರಣ ಬದಲಾಗಿದೆ ಎಂದರು. ಉಜ್ವಲ  2.0 ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಮತ್ತೆ  ನಾಲ್ಕು ಲಕ್ಷ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್ ವಿತರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿ ಸ್ವಾಮಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಕಾಶ್ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಿಗೆ  ವಿವಿಧ ಸೌಲಭ್ಯಗಳನ್ನು ಸಚಿವರು ವಿತರಿಸಿದರು. ಸಂಕಲ್ಪಯಾತ್ರೆ ಅಂಗವಾಗಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು.

Tags :
Advertisement