ಚಿತ್ರದುರ್ಗದಲ್ಲಿ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆ : ಅರ್ಜಿ ಸಲ್ಲಿಸುವುದು ಹೇಗೆ ? ಇಲ್ಲಿದೆ ಸಂಪೂರ್ಣ ಮಾಹಿತಿ
ಚಿತ್ರದುರ್ಗ. ಡಿ.26: ಜಿಲ್ಲಾಧಿಕಾರಿ ಜಿ.ಆರ್.ಜೆ ದಿವ್ಯಪ್ರಭು ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಯುವನಿಧಿ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಯೋಜನೆ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.
ಸರ್ಕಾರದ ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ಬರುವ ಜನವರಿ ಮಾಹೆಯಿಂದ ರಾಜ್ಯದಲ್ಲಿ ಜಾರಿಯಾಗಲಿದೆ. ಈ ಯೋಜನೆಯಡಿಯಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಾಂಗ ಮಾಡಿ, 2023 ತೇರ್ಗಡೆಯಾದ ಮತ್ತು ಫಲಿತಾಂಶ ಪ್ರಕಟಗೊಂಡ 180 ದಿನ ಅಥವಾ 6 ತಿಂಗಳ ಒಳಗಡೆ ಕೆಲಸ ದೊರೆಯದ ನಿರುದ್ಯೋಗಿ ಅರ್ಹ ಪದವೀಧರರಿಗೆ ರೂ. 3.000 ಹಾಗೂ ಡಿಪ್ಲೋಮಾ ತೇರ್ಗಡೆಯಾದವರಿಗೆ ರೂ. 1.500 ಮಾಸಿಕ ನಿರುದ್ಯೋಗ ಭತ್ಯೆಯನ್ನು ಆಧಾರ ಜೋಡಣೆಯ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುವುದು.
ಕರ್ನಾಟಕದಲ್ಲಿ ವಾಸವಿದ್ದು ಕನಿಷ್ಠ 6 ವರ್ಷಗಳವರೆಗೆ ಪದವಿ ಹಾಗೂ ಡಿಪ್ಲೋಮೊ ಅಧ್ಯಯನ ಮಾಡಿದವರು. ಉನ್ನತ ವ್ಯಾಸಾಂಗ ಮುಂದುವರಿಸದೇ ಇರುವವರು. ಖಾಸಗಿ ಉದ್ಯೋಗ ಅಥವಾ ಸ್ವಯಂ ಉದ್ಯೋಗ ಇಲ್ಲದವರು ಯೋಜನೆ ಲಾಭ ಪಡೆಯಲು ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಯುವನಿಧಿ ಯೋಜನೇಯ ನೋಂದಣಿ ಪ್ರಕ್ರಿಯೆಯು ಡಿ.26 ರಿಂದ ಜಿಲ್ಲೆಯಲ್ಲಿ ಆರಂಭವಾಗಿದೆ. ಸೇವಾಸಿಂಧು ಪೋರ್ಟಲ್ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಹಾಗೂ ಡಿಪ್ಲೋಮಾ ಸೇರಿದಂತೆ ಅಗತ್ಯ ದಾಖಲೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಮುಂಚಿತವಾಗಿ ತಾತ್ಕಾಲಿಕ ಪದವಿ ಹಾಗೂ ಡಿಪ್ಲೋಮಾ ಪ್ರಮಾಣ ಪತ್ರ ಪಡೆದು 180 ದಿನಗಳು ಪೂರ್ಣಗೊಳ್ಳುವ ಮುಂಚೆ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು ನಿರುದ್ಯೋಗಿ ಎಂದು ದೃಢೀಕರಿಸಬೇಕು ಮತ್ತು ಘೋಷಣೆಯನ್ನು ನೀಡಬೇಕು.
ನೋಂದಾಯಿತ ಅಭ್ಯರ್ಥಿ ವಿವರಗಳನ್ನು ಎನ್.ಎ.ಡಿ. ಮೂಲಕ ಪರಿಶೀಲಿಸಲಾಗುವುದು. ಮ್ಯಾನುವೆಲ್ ಮೂಲಕ ಅಪ್ಲೋಡ್ ಮಾಡಿದ ಅಪ್ ಲೋಡ್ ಮಾಡಿದ ಪದವಿ ಹಾಗೂ ಡಿಪ್ಲೋಮಾ ಪ್ರಮಾಣ ಪತ್ರಗಳನ್ನು ಆಯಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಿಗೆ ರವಾನಿಸಲಾಗುವುದು. ತಪ್ಪು ಘೋಷಣೆ ಅಥವಾ ಉದ್ಯೋಗ ಪಡೆದಿರುವುದನ್ನು ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುತ್ತದೆ. ಪಾವತಿಸಿದ ಮೊತ್ತವನ್ನು ಕಾನೂನಿನ ಪ್ರಕಾರ ವಸೂಲಿ ಮಾಡಲಾಗುವುದು. ಯುವನಿಧಿ ಯೋಜನೆಯಡಿ ನೋಂದಾಯಿತ ಅಭ್ಯರ್ಥಿಗಳ ದತ್ತಾಂಶವನ್ನು ಪರಿಶೀಲನೆಗಾಗಿ ಕೌಶಲ್ಯ ಸಂಪರ್ಕ ಪೋರ್ಟ್ಲ್‌ಗೆ ಲಭ್ಯವಿರುವ ದತ್ತಾಂಶದೊAದಿಗೆ ವರ್ಗಾಯಿಸಲಾಗುವುದು.
ಅಭ್ಯರ್ಥಿಯು ನಿರುದ್ಯೋಗಿಯಾಗಿರುವುದನ್ನು ನಿಗದಿತ ನಮೂನೆಯಲ್ಲಿ ಪ್ರತಿ ತಿಂಗಳ 25 ನೇ ತಾರೀಖು ಅಥವಾ ಅದಕ್ಕಿಂತ ಮೊದಲು ಆಧಾರ್ ಆಧಾರಿತ ಓ.ಟಿ.ಪಿ ಮೂಲಕ ಘೋಷಣೆ ಮಾಡತಕ್ಕದ್ದು. ಉದ್ಯೋಗ ದೊರಕಿದ ನಂತರ ಅಭ್ಯರ್ಥಿಯು ತಕ್ಷಣವೇ ಮುಚ್ಚಳಿಕೆ ಪತ್ರ ನೀಡಬೇಕು.
ಜಿಲ್ಲೆಯ ಎಲ್ಲಾ ಅರ್ಹ ಅಭ್ಯರ್ಥಿಗಳು ಯೋಜನೆಯ ಲಾಭ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಆರ್.ಜೆ ದಿವ್ಯಪ್ರಭು ಕೋರಿದ್ದಾರೆ. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ಉದ್ಯೋಗ ಅಧಿಕಾರಿ ಕಿಶೋರ್ ಕುಮಾರ್, ಉದ್ಯೋಗ ಇಲಾಖೆ ಕೌನ್ಸ್ಲರ್ ಟ್ರೈನರ್ ಪಾಂಡುರಂಗಪ್ಪ ಎಸ್ ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಜಿಲ್ಲಾ ವಿನಿಮಯ ಕಚೇರಿ ದೂರವಾಣಿ ಸಂಖ್ಯೆ 9945587060, 9743636369 ಅಥವಾ ಸಹಾಯವಾಣಿ ಸಂಖ್ಯೆ 18005999918ಗೆ ಕರೆ ಮಾಡಬಹುದು.