ವಿಶ್ವ ಗುಬ್ಬಚ್ಚಿಗಳ ದಿನಾಚರಣೆ | ಪುಸ್ತಕದಲ್ಲಿರುವುದನ್ನು ಕಲಿಸುವುದಷ್ಟೇ ಶಿಕ್ಷಣವಲ್ಲ, ಸಕಲ ಜೀವರಾಶಿಗಳನ್ನು ಕಾಪಾಡುವುದನ್ನು ತಿಳಿಸುವುದು ಸಹಾ ಶಿಕ್ಷಣ : ಕಾರ್ತಿಕ್
ಸುದ್ದಿಒನ್, ಚಿತ್ರದುರ್ಗ, ಮಾರ್ಚ್.20 : ಪುಸ್ತಕದಲ್ಲಿರುವುದನ್ನು ಕಲಿಸುವುದಷ್ಟೇ ಶಿಕ್ಷಣವಲ್ಲ. ಅದರ ಜೊತೆಯಲ್ಲಿ ಪರಿಸರ, ಪ್ರಾಣಿ, ಪಕ್ಷಿ, ಸಕಲ ಜೀವರಾಶಿಗಳನ್ನು ಕಾಪಾಡಲು ಮಕ್ಕಳಿಗೆ ತಿಳಿಸುವುದ ಸಹ ಒಳ್ಳೆಯ ಶಿಕ್ಷಣ. ಇಂತಹ ಕಾರ್ಯಕ್ರಮವನ್ನು ಪ್ರತಿ ಶಾಲೆಯಲ್ಲೂ ನಡೆಸಿದ್ದಲ್ಲಿ ಮಾತ್ರವೇ ಮುಂದಿನ ದಿನಗಳಲ್ಲಿ ಪರಿಸರವನ್ನು ಉಳಿಸಲು ಸಾಧ್ಯ ಎಂದು ಗುಬ್ಬಚ್ಚಿ ಬರ್ಡ್ ಟ್ರಸ್ಟ್‌ನ ಸಂಸ್ಥಾಪಕ ಕಾರ್ತಿಕ್ ತಿಳಿಸಿದರು.
ನಗರದ ಬಿಎಲ್ ಗೌಡ ಲೇಔಟ್ ನಲ್ಲಿರುವ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುಬ್ಬಚ್ಚಿ ಬರ್ಡ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಗುಬ್ಬಚ್ಚಿ ದಿನಾಚರಣೆಯನ್ನು ಶಾಲೆಯ ಸಹಯೋಗದೊಂದಿಗೆ ಅರ್ಥಪೂರ್ಣವಾಗಿ ನೆರವೇರಿಸಲಾಯಿತು.
ಮಕ್ಕಳಲ್ಲಿ ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಮೇಲೆ ಕಾಳಜಿ ಬರುವಂತೆ ಮಾಡಿದರೆ ಮುಂದೆ ಈ ಮಕ್ಕಳು ಪರಿಸರವನ್ನು ಕಾಪಾಡುತ್ತಾರೆ, ಇದು ಸಹ ನಮ್ಮ ಶಾಲೆಯ ವಿನೂತನ ಶಿಕ್ಷಣದಲ್ಲಿ ಒಂದಾದ ಶಿಕ್ಷಣ ಎಂದು ಶಾಲೆಯ ಖಜಾಂಚಿ ಶ್ರೀಮತಿ ಶ್ವೇತ ಕಾರ್ತಿಕ್ ತಿಳಿಸಿದರು.
2024ನೇ ಸಾಲಿನ ಗುಬ್ಬಚ್ಚಿಗಳ ದಿನಾಚರಣೆಯನ್ನು ಪ್ರಕೃತಿ ಶಾಲೆಯ ಮಕ್ಕಳು ಮನೆ ಮನೆಗೂ ಭೇಟಿ ನೀಡಿ ಮಣ್ಣಿನ ತಟ್ಟೆಗಳನ್ನು ವಿತರಿಸಿ, ಗುಬ್ಬಚ್ಚಿಗಳಿಗೆ ಹಾಗೂ ಬೇರೆ ಬೇರೆ ಪಕ್ಷಿಗಳಿಗೆ ಬೇಸಿಗೆಯಲ್ಲಿ ಪ್ರತಿ ದಿನ ನೀರು ಪೂರೈಸಲು ನಾಗರೀಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಸಹ ಮಾಡಲಾಯಿತು.
ಅಂದಾಜು 200ಕ್ಕೂ ಹೆಚ್ಚು ಮನೆಗಳಿಗೆ ಭೇಟಿ ನೀಡಿ ಪ್ರತಿಯೊಬ್ಬರಿಗೂ ಮಣ್ಣಿನ ತಟ್ಟೆಯನ್ನು ವಿತರಿಸಿ, ಆ ತಟ್ಟೆಯಲ್ಲಿ ನೀರನ್ನು ಪ್ರತಿ ದಿನ ಹಾಕುವಂತೆ ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಕೃತಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಶಶಿಕಲಾ ಹಾಗೂ ಶಾಲೆಯ ಎಲ್ಲಾ ಶಿಕ್ಷಕ, ಶಿಕ್ಷಕೇತರ ವೃಂದದವರು, ನೆರೆಹೊರೆಯ ನಾಗರೀಕರು ಹಾಗೂ ಪ್ರಕೃತಿ ಶಾಲೆಯ ಮಕ್ಕಳು ಭಾಗವಹಿಸಿ ಯಶಸ್ವಿಗೊಳಿದರು.