For the best experience, open
https://m.suddione.com
on your mobile browser.
Advertisement

ದುಡಿಯುವ ಜನರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು : ಬಿ.ಕೆ.ರಹಮತ್ ವುಲ್ಲಾ

05:44 PM Nov 28, 2023 IST | suddionenews
ದುಡಿಯುವ ಜನರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು   ಬಿ ಕೆ ರಹಮತ್ ವುಲ್ಲಾ
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್.28 : ಕಾರ್ಮಿಕರಾಗಿ ದುಡಿಯುವ ಜನರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಶಿಕ್ಷಣ ಕೊಡಿಸಲು ಮುಂದಾಗಬೇಕೆಂದು ಹಿರಿಯ ವಕೀಲ ಹಾಗೂ ಕರ್ನಾಟಕ ಕೊಳಗೇರಿ ಸಂಯುಕ್ತ ಸಂಘಟನೆಯ ಗೌರವಾಧ್ಯಕ್ಷ ಬಿ.ಕೆ.ರಹಮತ್‍ಉಲ್ಲಾ ಹೇಳಿದರು.

Advertisement

ಪತ್ರಿಕಾ ಭವನದಲ್ಲಿ ಕೊಳಗೇರಿ ಸಂಯುಕ್ತ ಸಂಘಟನೆ ಮತ್ತು ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕೊಳಗೇರಿ ನಿವಾಸಿಗಳಿಗೆ ಹೊದಿಕೆ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದುಡಿಯುವ ಜನರು ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವ ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಸೇರಿಸಲು ಸಲಹೆ ನೀಡಿದ ಬಿ.ಕೆ.ರಹಮತ್‍ಉಲ್ಲಾ ಪ್ರಸ್ತುತ ಹಾಲಿ ಇರುವಂತಹ ರಾಜಕಾರಣಿಗಳು, ಸಾಹಿತಿಗಳು, ಬರಹಗಾರರು, ವಕೀಲರು, ಅತಿ ಹೆಚ್ಚು ಜನ ಸರ್ಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಪಡೆದಂತವರು, ಹಾಗಾಗಿ ದುಡಿಯುವ ವರ್ಗ ಸರ್ಕಾರಿ ಶಾಲೆಗಳನ್ನೇ ಆಯ್ಕೆ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಮುಂದಾಗಬೇಕೆಂದು ಹೇಳಿದರು.

Advertisement

ಅಲ್ಪಸಂಖ್ಯಾತರು, ದಲಿತರು, ಕೊಳಗೇರಿಗಳಲ್ಲಿ ಹೆಚ್ಚು ವಾಸವಾಗಿದ್ದು, ತಮ್ಮ ಮಕ್ಕಳಿಗೆ ಮದುವೆ ಮಾಡುವ ವಯಸ್ಸನ್ನು ಸರ್ಕಾರ ನಿಗಧಿಗೊಳಿಸಿರುವ 18 ಮತ್ತು 21 ವಯಸ್ಸಿಗೆ ಮಕ್ಕಳಿಗೆ ಮದುವೆಮಾಡಿಸುವ ಮೂಲಕ ಸರ್ಕಾರಿ ಕಾನೂನುಗಳನ್ನು ಗೌರವಿಸಬೇಕೆಂದು ಬಿ.ಕೆ.ರಹಮತ್‍ಉಲ್ಲಾ ನುಡಿದರು.

ವಕೀಲರಾದ ದಿಲ್ಷಾದ್ ಉನ್ನೀಸಾ ಮಾತನಾಡಿ ಕೊಳಗೇರಿ ನಿವಾಸಿಗಳಲ್ಲಿ ಮಾನವೀಯತೆ, ಧರ್ಮದ ಅನುಕರಣೆ ಹೆಚ್ಚಿದ್ದು, ಪ್ರತಿಯೊಬ್ಬರೂ ಕೂಡ ಸಮಾಜದಲ್ಲಿ ಸಮಾನರು ಹಾಗಾಗಿ ಮೇಲು ಕೀಳು ಎಂಬ ಭಾವನೆಗಳನ್ನು ತೊರೆದು ಪ್ರತಿಯೊಬ್ಬರು ಸಮಾನತೆಯಿಂದ ಬದುಕು ನಡೆಸಿದಾಗ ಸಮ-ಸಮಾಜವನ್ನು ಕಾಣಲು ಸಾಧ್ಯವೆಂದು ಹೇಳಿದರು.

ಚಳಿಗಾಲದ ಸಂದರ್ಭದಲ್ಲಿ ಕೊಳಗೇರಿ ನಿವಾಸಿಗಳ ಸಂಘಟನೆಗಳಿಂದ ಬಡವರಿಗೆ ಹೊದಿಕೆ ನೀಡುವ ಕಾರ್ಯಕ್ರಮ ಪುಣ್ಯ ಕಾರ್ಯವಾಗಿದ್ದು, ಈ ಕೆಲಸವನ್ನು ಮಾಡುತ್ತಿರುವ ಗಣೇಶ ಮತ್ತು ಹನೀಫ್ ಅಂತಹವರು ಬಡಜನರ ಪ್ರೀತಿಗೆ ಸದಾ ಪಾತ್ರರಾಗುತ್ತಾರೆ ಎಂದು ನುಡಿದರು.

ರೋಟರಿ ಇನ್ನರ್‍ವೀಲ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಮೋಕ್ಷ ರುದ್ರಸ್ವಾಮಿ ಮಾತನಾಡಿ, ಇನ್ನರ್‍ವೀಲ್ ಕ್ಲಬ್ ವತಿಯಿಂದ ಬಡವರಿಗೆ ಆರೋಗ್ಯ ತಪಾಸಣೆ, ಶಿಕ್ಷಣ ಕೊಡಿಸುವ ಕೆಲಸ, ಬಡವರು ಮತ್ತು ಸಾಮಾನ್ಯರ ಕೆಲಸವನ್ನು ಮಾಡಿಕೊಂಡು ಬರಲಾಗಿದ್ದು, ಮುಂದಿನ ದಿನಮಾನಗಳಲ್ಲಿ ಬಡವರು ಮತ್ತು ಅಲೆಮಾರಿಗಳನ್ನು ಆಯ್ಕೆಮಾಡಿಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಘಟನೆಯ ಅಧ್ಯಕ್ಷ ಗಣೇಶ ಅವರು ಮಾತನಾಡಿ, ಪ್ರತಿವರ್ಷ ಬಡ, ವಯೋವೃದ್ಧ ಮಹಿಳೆಯರಿಗೆ ಮತ್ತು ಪುರಷರಿಗೆ ಕೆ.ಕೆ.ಎನ್.ಎಸ್. ಸಂಘಟನೆ ವತಿಯಿಂದ ಹೊದಿಕೆ, ಮಕ್ಕಳಿಗೆ ಪಠ್ಯಪುಸ್ತಕ, ನೋಟ್ ಪುಸ್ತಕಗಳನ್ನು ವಿತರಣೆಮಾಡಿಕೊಂಡು ಬರುವ ಮೂಲಕ ಬಡ ನಿರ್ಗತಿಕ ಮಹಿಳೆಯರಿಗೆ ಪಿಂಚಣಿ, ಆರೋಗ್ಯ ವಿಮೆ, ಆರೋಗ್ಯ ಶಿಬಿರಗಳನ್ನು ನಡೆಸಿಕೊಂಡು ಬರಲಾಗಿದ್ದು, ಈ ಬಾರಿಯ ಹೊದಿಕೆ ಕಾರ್ಯಕ್ರಮವನ್ನು ಕೊಳಗೇರಿ ನಿವಾಸಿಗಳಿಗೆ ವಿತರಣೆಮಾಡಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ, ಕೊಳಗೇರಿಗಳಲ್ಲಿ ವಾಸವಾಗಿರುವ ಜನರಿಗೆ ನಿವೇಶನ, ಮನೆ, ವಿದ್ಯುತ್, ಚರಂಡಿ ವ್ಯವಸ್ಥೆಯ ಅಗತ್ಯವಿದ್ದು, ಸರ್ಕಾರ ಕಾರ್ಮಿಕರು ಮತ್ತು ಬಡಜನರ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸಿದಾಗ ಮಾತ್ರ ಕೊಳಗೇರಿಗಳು ಅಭಿವೃದ್ಧಿ ಆಗಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಮೊಹಮದ್ ಹನೀಫ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಇನ್ನರ್‍ವೀಲ್ ಕ್ಲಬ್ ಕಾರ್ಯದರ್ಶಿ ಶ್ರೀಮತಿ ಲತಾ ಉಮೇಶ ಅವರು ಉಪಸ್ಥಿತರಿದ್ದರು.

Tags :
Advertisement