ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ವಿದ್ಯೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು : ನ್ಯಾಯವಾದಿ ಡಿ.ಕೆ.ಶೀಲಾ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜೂನ್.26 : ಶಿಕ್ಷಣದ ಮೂಲಕ ಮಹಿಳೆಯರು ಸ್ವಾವಲಂಭಿಯಾಗಿ ಬದುಕುವುದನ್ನು ಕಲಿಯಬೇಕೆಂದು ನ್ಯಾಯವಾದಿ ಡಿ.ಕೆ.ಶೀಲಾ ಕರೆ ನೀಡಿದರು.
ಬಜ್ ಇಂಡಿಯಾ ಸಂಸ್ಥೆ ವತಿಯಿಂದ ಶಾರದಮ್ಮ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಗೆಳತಿ ಸಮಾಗಮ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.
ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿವೆ. ಕಾನೂನಿನಲ್ಲಿ ಸಾಕಷ್ಟು ರಕ್ಷಣೆಯಿದೆ. ಪ್ರತಿಯೊಂದರಲ್ಲೂ ಮಹಿಳೆಗೆ ಸಮಾನವಾದ ಸಮಪಾಲು ಸಿಗಬೇಕು. ಮಹಿಳೆ ಪ್ರೀತಿ, ಸಂಯಮ, ತ್ಯಾಗಮಯಿಯಾಗಿರುವುದರಿಂದ ಎಲ್ಲಾ ರಂಗದಲ್ಲಿಯೂ ಪುರುಷರಿಗೆ ಸರಿಸಮಾನವಾಗಿ ಬೆಳೆಯುತ್ತಿದ್ದಾಳೆ. ಕೇವಲ ಅಡುಗೆ ಮನೆಗೆ ಮಾತ್ರ ಮೀಸಲಾಗಬಾರದು. ವಿದ್ಯೆಯ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ತಿಳಿಸಿದರು.
ಬಜ್ ಇಂಡಿಯಾ ಸಂಸ್ಥೆ ಕಾರ್ಯಕ್ರಮ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿ ಮಹಿಳೆಯರಿಗಾಗಿಯೇ ಬಜ್ ಇಂಡಿಯಾ ಸಂಸ್ಥೆ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಮಹಿಳೆ ಕುಟುಂಬ ನಿರ್ವಹಣೆ ಮಾಡಬೇಕಾಗಿರುವುದರಿಂದ ಸ್ವಯಂ ಶಕ್ತಿ, ತರಬೇತಿ, ಹಣಕಾಸು ನಿರ್ವಹಣೆ, ಉದ್ಯಮಶೀಲ ಕೌಶಲ್ಯ, ಹಾಗೂ ಬಜ್ ವ್ಯಾಪಾರ ಬೆಳವಣಿಗೆ, ಇನ್ನು ಹಲವಾರು ರೀತಿಯ ತರಬೇತಿಗಳನ್ನು ನೀಡುವ ಮೂಲಕ ಮಹಿಳೆಯರಲ್ಲಿ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ನಗರಸಭೆ ಪೌರಾಯುಕ್ತರಾದ ಶ್ರೀಮತಿ ರೇಣುಕ ಮಾತನಾಡಿ ಬಜ್ ಇಂಡಿಯಾ ಸಂಸ್ಥೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಗೆಳತಿ ಸಮಾಗಮ ಕಾರ್ಯಕ್ರಮ ಹಮ್ಮಿಕೊಂಡಿರುವುದು ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ. ನಾನು ಕೆ.ಎ.ಎಸ್. ಅಧಿಕಾರಿಯಾಗಿದ್ದೇನೆ. ಅದೆ ರೀತಿ ಎಲ್ಲಾ ಮಹಿಳೆಯರು ಶಿಕ್ಷಣವಂತರಾಗುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ತೇರ್ಗಡೆಯಾದರೆ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದು ತಿಳಿಸಿದರು.
ಬಜ್ ಇಂಡಿಯಾ ಸಂಸ್ಥೆಯು ಸರ್ಕಾರದ ಕಾರ್ಯಕ್ರಮಗಳೊಂದಿಗೆ ಕೈಜೋಡಿಸಿರುವುದು ಅತ್ಯಂತ ಸಂತೋಷದ ಸಂಗತಿ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಮಹಿಳೆ ಜೀವನದಲ್ಲಿ ಮುಂದೆ ಬರಬೇಕೆಂದರು ಕಿವಿಮಾತು ಹೇಳಿದರು.
ದಾವಣಗೆರೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ವಿಜಯಕುಮಾರ್ ಮಾತನಾಡುತ್ತ ಪ್ರತಿಯೊಂದು ಕಾರ್ಯಕ್ರಮಗಳಲ್ಲಿಯೂ ಮಹಿಳೆಯ ಪಾತ್ರ ತುಂಬಾ ಮುಖ್ಯ. ಅವಕಾಶಗಳು ಎಲ್ಲರಿಗೂ ಸಿಗುತ್ತದೆ. ಬುದ್ದಿವಂತಿಕೆಯಿಂದ ಬಳಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ, ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರಗಳು ನಡೆಯುತ್ತಿರುವುದರಿಂದ ಜಾಗೃತರಾಗಿರಬೇಕೆಂದರು.
ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಂಜುಳಾ ಮಾತನಾಡಿ ಸಂವಿಧಾನದಡಿ ಮಹಿಳೆಗೆ ಎಲ್ಲಾ ರೀತಿಯ ಹಕ್ಕು ನೀಡಿದೆ. ಯಾವ್ಯಾವ ರೀತಿ ಕಾನೂನು ಮತ್ತು ಸೌಲಭ್ಯಗಳಿದೆ ಎನ್ನುವುದನ್ನು ಮಹಿಳೆ ಮೊದಲು ತಿಳಿದುಕೊಂಡು ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.
ಬಜ್ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗಭೂಷಣ್ ಮತ್ತು ಸಿಬ್ಬಂದಿಗಳು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಹಾಜರಿದ್ದರು.