For the best experience, open
https://m.suddione.com
on your mobile browser.
Advertisement

ಬಿ.ಎನ್.ಚಂದ್ರಪ್ಪನವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ :  ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಮನವಿ

09:30 PM Apr 15, 2024 IST | suddionenews
ಬಿ ಎನ್ ಚಂದ್ರಪ್ಪನವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ     ಸಚಿವ ಬಿ ಝಡ್  ಜಮೀರ್ ಅಹಮದ್ ಖಾನ್ ಮನವಿ
Advertisement

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 15  : ಅಲ್ಪಸಂಖ್ಯಾತರು, ದಲಿತರನ್ನು ಗುರಿಯಾಗಿಸಿಕೊಂಡು ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ಯನ್ನು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕಾಗಿರುವುದರಿಂದ ಅಲ್ಪಸಂಖ್ಯಾತರ ಮತದಾನದ ಪರ್ಸೆಂಟೇಜ್ ಹೆಚ್ಚಾಗಬೇಕೆಂದು ವಸತಿ ಅಲ್ಪಸಂಖ್ಯಾತರ ಇಲಾಖೆ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್ ಮನವಿ ಮಾಡಿದರು.

Advertisement

ಇದೆ ತಿಂಗಳ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಮಾಪತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಬಿ.ಝಡ್. ಜಮೀರ್ ಅಹಮದ್ ಖಾನ್ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರು ಈ ಚುನಾವಣೆಯಲ್ಲಿ ಅತ್ಯಧಿಕ ಬಹುಮತಗಳಿಂದ ಗೆಲ್ಲಬೇಕಾಗಿರುವುದರಿಂದ ಮುಸ್ಲಿಂರ ಒಂದೊಂದು ಮತಕ್ಕೂ ಪ್ರಾಮುಖ್ಯತೆಯಿದೆ ಎಂದು ಹೇಳಿದರು.

ಚುನಾವಣೆಯಲ್ಲಿ ಓಟು ಹಾಕಿದರೆ ನನಗೇನು ಲಾಭ ಎಂದು ಭಾವಿಸಿ ಮನೆಯಲ್ಲಿ ಸುಮ್ಮನೆ ಕೂರಬೇಡಿ. ರಾಜ್ಯದಲ್ಲಿ ಬಿಜೆಪಿ. ಸರ್ಕಾರ ಅಧಿಕಾರದಲ್ಲಿದ್ದಾಗ ಮುಸಲ್ಮಾನರಿಗೆ ಏನೆಲ್ಲಾ ತೊಂದರೆ ಕೊಟ್ಟಿದೆ ಎನ್ನುವುದು ಗೊತ್ತಿದೆ. ಹಿಜಾಬ್, ಜಟ್ಕ್ ಕಟ್, ಹಲಾಲ್ ಕಟ್ ಹೀಗೆ ಒಂದಲ್ಲ ಒಂದು ರೀತಿಯ ಕ್ಯಾತೆ ತೆಗೆದು ಹಿಂದು-ಮುಸಲ್ಮಾನರ ನಡುವಿನ ಭಾವೈಕ್ಯತೆಯನ್ನು ಹಾಳು ಮಾಡುವ ಕುತಂತ್ರ ನಡೆಸಿತು.

Advertisement

1994 ರಲ್ಲಿ ವೀರಪ್ಪಮೊಯ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮುಸಲ್ಮಾನರಿಗೆ ನೀಡಿದ್ದ ಶೇ. ನಾಲ್ಕರಷ್ಟು ಮೀಸಲಾತಿಯನ್ನು ಬಿಜೆಪಿ. ಸರ್ಕಾರ ರದ್ದುಪಡಿಸಿದೆ. ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್‍ಶಿಪ್ ಕಸಿದುಕೊಂಡಿದೆ. ತ್ಯಾಗ ಬಲಿದಾನಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಸಾಧನೆಯನ್ನು ಹೇಳಿ ಜನರ ಬಳಿ ಮತ ಕೇಳುತ್ತಿದ್ದರೆ ಕೋಮುವಾದಿ ಬಿಜೆಪಿ. ಜಾತಿ ಧರ್ಮಗಳ ನಡುವೆ ಸಂಘರ್ಷವಿಟ್ಟು ಮತ ಕೇಳುತ್ತಿದೆ. ಇವೆರಡಲ್ಲಿ ಯಾವುದು ಬೇಕು ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ಅಲ್ಪಸಂಖ್ಯಾತರಲ್ಲಿ ವಿನಂತಿಸಿದರು.

ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೇ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡಿದ ಭರವಸೆಯಂತೆ ಐದು ಗ್ಯಾರೆಂಟಿಗಳನ್ನು ಈಡೇರಿಸಿದೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾರೆಂಟಿಗಳ ಇನ್ನು ಹೆಚ್ಚಿನ ಲಾಭ ದೇಶದ ಜನರಿಗೆ ಸಿಗುತ್ತದೆ. ಎಲ್ಲಾ ಜಾತಿ ಧರ್ಮದವರನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗುವ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲೇಬೇಕಾಗಿರುವುದರಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಪಾರ್ಲಿಮೆಂಟ್‍ಗೆ ಕಳಿಸಿಕೊಡಿ ಎಂದು ಕೋರಿದರು.

ಕಾಂಗ್ರೆಸ್ ಸರ್ಕಾರ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಒಂದು ಲಕ್ಷ 80 ಸಾವಿರದ 253 ಮನೆಗಳನ್ನು ಮಂಜೂರು ಮಾಡಿತ್ತು. ಬಿಜೆಪಿ. ಜೆಡಿಎಸ್. ಸರ್ಕಾರ ಅಧಿಕಾರಕ್ಕೆ ಬಂದಾಗ ಒಂದೂ ಮನೆ ಕೊಟ್ಟಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತಂದಾಗ ಬಡವರು ಮನೆಗಳನ್ನು ನಿರ್ಮಿಸಿಕೊಳ್ಳಲು 7400 ಕೋಟಿ ರೂ.ಗಳನ್ನು ಮಂಜೂರು ಮಾಡಿ ಐದು ನೂರು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಒಂದು ಮನೆಯೂ ಸಿಕ್ಕಿಲ್ಲ.

ಎಂ.ಎಲ್.ಎ. ಎಂ.ಪಿ. ಚುನಾವಣೆ ಅತಿ ಪ್ರಾಮುಖ್ಯವಾಗಿರುವುದರಿಂದ ಈ ಬಾರಿಯ ಲೋಕಸಭೆ ಚುನಾವಣೆಯನ್ನು ಅಲ್ಪಸಂಖ್ಯಾತರು ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು. ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ ಪ್ರಧಾನಿ ಮೋದಿ ಪ್ರತಿ ಬಡವರ ಬ್ಯಾಂಕ್ ಖಾತೆಗಳಿಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ನಂಬಿಸಿ ಅಧಿಕಾರಕ್ಕೆ ಬಂದು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನಮ್ಮ ಪಕ್ಷದ ಗ್ಯಾರೆಂಟಿಗಳನ್ನು ಈಗ ಕಾಪಿ ಮಾಡಲು ಹೊರಟಿದ್ದಾರೆಂದು ಛೇಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ನರೇಂದ್ರಮೋದಿ ಸರ್ವಾಧಿಕಾರಿತನ ನಿಲ್ಲಬೇಕಾದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಯನ್ನು ಸೋಲಿಸಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಅದಕ್ಕಾಗಿ ಅಲ್ಪಸಂಖ್ಯಾತರ ಮತದಾನ ಹೆಚ್ಚಳವಾಗಬೇಕು. 28 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲಬೇಕಾಗಿದೆ. ಈ ನಿಟ್ಟಿನಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎನ್.ಚಂದ್ರಪ್ಪನವರನ್ನು ಬಹುಮತಗಳಿಂದ ಗೆಲ್ಲಿಸಿ ಎಂದು ಅಲ್ಪಸಂಖ್ಯಾತರಲ್ಲಿ ವಿನಂತಿಸಿದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡುತ್ತ ದೇಶ ಗಂಡಾಂತರದಲ್ಲಿದೆ. ಅಲ್ಪಸಂಖ್ಯಾತರು ಮನೆಯಲ್ಲಿ ಕುಳಿತುಕೊಳ್ಳದೆ ಕಡ್ಡಾಯವಾಗಿ ಮತ ಚಲಾಯಿಸಿ. ಜಾತಿ ಧರ್ಮಗಳನ್ನು ಎತ್ತಿಕಟ್ಟುತ್ತಿರುವ ಬಿಜೆಪಿ. ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಸಂವಿಧಾನ ಉಳಿಯುವುದಿಲ್ಲ. ಅಲ್ಪಸಂಖ್ಯಾತರು ದಲಿತರು ಬದುಕುವುದು ಕಷ್ಟವಾಗುತ್ತದೆ. ಕಾಂಗ್ರೆಸ್ ಪಕ್ಷ ಗೆದ್ದರೆ ರಾಹುಲ್‍ಗಾಂಧಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾರೆಂದು ಹೇಳಿದರು.

ಎಂ.ಎಲ್.ಸಿ. ಅಬ್ದುಲ್‍ಜಬ್ಬಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ನಗರಸಭೆ ಮಾಜಿ ಅಧ್ಯಕ್ಷ ಮಹಮದ್ ಅಹಮದ್ ಪಾಷ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತ ನಂದಿನಿಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನ್ಯಾಯವಾದಿ ಫಾತ್ಯರಾಜನ್, ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಚೇರ್ಮನ್ ಕೆ.ಅನ್ವರ್‍ಪಾಷ, ನ್ಯಾಯವಾದಿ ಎ.ಸಾಧಿಕ್‍ವುಲ್ಲಾ, ಕರ್ನಾಟಕ ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ರಾಜ್ಯಾಧ್ಯಕ್ಷ ಟಿಪ್ಪುಖಾಸಿಂ ಆಲಿ, ಗ್ಯಾರೆಂಟಿಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಕೆ.ಡಿ.ಪಿ.ಸದಸ್ಯ ನಾಗರಾಜ್, ಜಿಲ್ಲಾ ವಕ್ಪ್ ಮಂಡಳಿ ಚೇರ್ಮನ್ ಎಂ.ಸಿ.ಓ. ಬಾಬು, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್, ಮುನಿರಾ ಎ.ಮಕಾಂದಾರ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಶಿಕಲಾ ಸುರೇಶ್‍ಬಾಬು, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಸಭೆಯಲ್ಲಿ ಭಾಗವಹಿಸಿದ್ದರು.

Tags :
Advertisement