ಅಭಿವೃದ್ಧಿಯತ್ತ ಸಾಗುತ್ತಿರುವ ಕೋಟೆನಾಡಿಗೆ ಬರಲಿದೆಯಾ ವಿಮಾನ ನಿಲ್ದಾಣ..?
ಸುದ್ದಿಒನ್, ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಈಗಾಗಲೇ ಅಭಿವೃದ್ಧಿಯ ಪತದತ್ತ ಸಾಗುತ್ತಿದೆ. ವಾಣಿ ವಿಲಾಸ ಜಲಾಶಯಕ್ಕೆ ಭದ್ರಾ ನೀರು ಹರಿಸುವ ಯೋಜನೆ, ಚಳ್ಳಕೆರೆಯ ನಾಯಕನಹಟ್ಟಿ ಬಳಿ ಡಿಆರ್ಡಿಓ ಪ್ರಾಜೆಕ್ಟ್, ಚಿತ್ರದುರ್ಗ ಮೂಲಕ ( ತುಮಕೂರು- ಚಿತ್ರದುರ್ಗ- ದಾವಣಗೆರೆ) ನೇರ ರೈಲು ಸಂಪರ್ಕ ಯೋಜನೆ, ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಂಜೂರು ಆಗುತ್ತಿದೆ. ಈ ಬೆನ್ನಲ್ಲೇ ಕೋಟೆನಾಡಿನ ಮಂದಿಗೆ ಮತ್ತಷ್ಟು ಸಂತಸದ ಸುದ್ದಿ ಸಿಕ್ಕಿದೆ. ಅದುವೆ ಹಿರಿಯೂರು ಅಥವಾ ಚಿತ್ರದುರ್ಗ ಆಸುಪಾಸಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆಯಂತೆ.
ಸಂಭಾವ್ಯ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ತುಮಕೂರು - ಚಿತ್ರದುರ್ಗ ನಡುವೆ ಸ್ಥಳ ಹುಡುಕಾಟ ಕೆಲಸಗಳು ಪ್ರಾರಂಭವಾಗಿವೆ ಎಂಬ ಬಗ್ಗೆ ವರದಿಯಾಗಿದೆ. ಹೊಸ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳ ಗುರುತಿಸುವ ಪ್ರಕ್ರಿಯೆ ಆರಂಭಿಕ ಹಂತದಲ್ಲಿದೆ ಎಂದು ಹೇಳಲಾಗುತ್ತಿದೆ. ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ನೊಂದಿಗೆ 60 ವರ್ಷಗಳ ಗುತ್ತಿಗೆ ವಿಸ್ತರಣೆ ಚರ್ಚೆಯ ಸಂದರ್ಭದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ನಿರ್ಧಾರವನ್ನು ತಿಳಿಸಲಾಗಿದೆ ಎಂದು ವರದಿಯಾಗಿದ್ದು, ಸರ್ಕಾರದ ಪ್ರಸ್ತಾವನೆಗೆ ಬಿಐಎಎಲ್ ಕೂಡ ಆಸಕ್ತಿ ತೋರಿಸಿದೆ ಎಂಬುದು ಗೊತ್ತಾಗಿದೆ.
ಒಂದೇ ನಗರದಲ್ಲಿ ಅನೇಕ ವಿಮಾನ ನಿಲ್ದಾಣಗಳನ್ನು ನಿರ್ಮಿಸಿರುವ ಮುಂಬೈ ಹಾಗೂ ಗೋವಾದಂತಹ ನಗರಗಳನ್ನು ನಿದರ್ಶನವಾಗಿ ತೆಗೆದುಕೊಳ್ಳಬಹುದು. ಆದರೆ, ಪ್ರಸ್ತುತ ವಿಮಾನ ನಿಲ್ದಾಣವಿರುವ 150 ಕಿಲೋಮೀಟರ್ ಅಂತರದಲ್ಲಿ ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಮಾರ್ಗಸೂಚಿಗಳ ಪ್ರಕಾರ, ಯಾವುದೇ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣ ಸ್ಥಾಪನೆಯನ್ನು ಅನುಮತಿಸಲಾಗುವುದಿಲ್ಲ. ಆಗೊಮ್ಮೆ, ಆ ಅಂತರದೊಳಗೆ ಎರಡನೇ ವಿಮಾನ ನಿಲ್ದಾಣವನ್ನು ನಿರ್ಮಿಸಿದರೆ, ಎರಡು ವಿಮಾನ ನಿಲ್ದಾಣಗಳ ಮಧ್ಯೆ ಏರ್ ಟ್ರಾಫಿಕ್ ಸೇರಿದಂತೆ ವಿವಿಧ ತೊಂದರೆಗಳು ಬರುತ್ತಿವೆ.
ಇಂತಹ ಸಮಸ್ಯೆಯನ್ನು ನಿಭಾಯಿಸಿ, ಬೆಂಗಳೂರು ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣಕ್ಕೆ ತುಮಕೂರು - ಚಿತ್ರದುರ್ಗ ನಡುವಿನ ಮಾರ್ಗವೇ ಸೂಕ್ತ ಸ್ಥಳವಾಗಿದೆ ಎಂದು ತಿಳಿದುಬಂದಿದೆ. ಎಚ್‌ಎಎಲ್‌ನಲ್ಲಿ ಹಳೆಯ ವಿಮಾನ ನಿಲ್ದಾಣವನ್ನು ಪುನರಾರಂಭಿಸುವುದಕ್ಕೆ ಆರಂಭದಲ್ಲಿ ಪರಿಗಣಿಸಲಾಗಿತ್ತು. ಆದರೆ, ನಾನಾ ಕಾರಣಗಳಿಗೆ ಅದನ್ನು ಕೈ ಬಿಡಲಾಯಿತು. ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕಾದರೆ, ರಾಜ್ಯ ಸರ್ಕಾರ ಹಲವು ಸವಾಲುಗಳನ್ನು ಎದುರಿಸಬೇಕಾಗಿದೆ. ನಿಲ್ದಾಣಕ್ಕೆ ಸೂಕ್ತ ಸ್ಥಳವನ್ನು ಹುಡುಕಾಟ ನಡೆಸಬೇಕು. ಒಂದೊಮ್ಮೆ ಕೃಷಿ ಜಮೀನು ಇದ್ದರೆ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಬೇಕು.