ಬಳ್ಳಾರಿ ಜೈಲಿಗೆ ಹೋಗಲು ದರ್ಶನ್ ಹಿಂದೇಟು ಹಾಕ್ತಿರೋದ್ಯಾಕೆ..? ಅಲ್ಲಿ ಎಂತೆಂಥಾ ರೌಡಿಗಳಿದ್ರು..?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ಜೈಲಿನಲ್ಲಿ ಸಿಗರೇಟ್ ಸೇದಿಕೊಂಡು, ಟೀ ಕುಡಿಯುತ್ತಾ ಆರಾಮಾವಾಗಿದ್ದರು. ಆದರೆ ಆ ಫೋಟೋ ವೈರಲ್ ಆಗುತ್ತಿದ್ದಂತೆ ಇದೀಗ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಎಲ್ಲಾ ತಯಾರಿಗಳು ನಡೆಯುತ್ತಿವೆ. ಆದರೆ ದರ್ಶನ್ ಅವರು ಬಳ್ಳಾರಿ ಜೈಲಿಗೆ ಹೋಗುವುದಕ್ಕೆ ಬೇಸರ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.
ಜೈಲು ಸಿಬ್ಬಂದಿಗಳ ಬಳಿ ಇದೆಲ್ಲಾ ನನಗೆ ಬೇಕಿತ್ತಾ ಎಂದು ಬೇಸರ ಮಾಡಿಕೊಳ್ಳುತ್ತಿದ್ದಾರಂತೆ. ಇನ್ನು 2017ರಲ್ಲಿ ಚೌಕಾ ಸಿನಿಮಾದ ಶೂಟಿಂಗ್ ವೇಳೆಗೆ ದರ್ಶನ್ ಬಳ್ಳಾರಿ ಜೈಲಿಗೆ ಹೋಗಿದ್ದರು. ಚೌಕಾ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಆಗ ಅಲ್ಲಿನ ಕೈದಿಗಳ ಜೊತೆಗೆ ಸಹಜವಾಗಿಯೇ ಮಾತನಾಡಿದ್ದರು. ಹಾಗೂ ಅಲ್ಲಿನ ಸೌಲಭ್ಯ, ಸಮಸ್ಯೆ ಎಲ್ಲವನ್ನು ಅರಿತಿದ್ದರು. ಹೀಗಾಗಿ ಬಳ್ಳಾರಿ ಜೈಲಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಬಳ್ಳಾರಿ ಜೈಲಿಗೆ 150 ವರ್ಷಗಳ ಇತಿಹಾಸವಿದೆ. ಬ್ರಿಟಿಷ್ ಕಾಲದಲ್ಲಿ ಕಟ್ಟಿಸಿರುವ ಜೈಲು ಇದಾಗಿದೆ. ಭೀಮಾ ತೀರದ ಹಂತಕ ಹನುಮಂತ ನಾಯ್ಕ್ ಕೂಡ ಇದೇ ಜೈಲಿನಲ್ಲಿದ್ದರು. ಕೆಜೆ ಹಳ್ಳಿ, ಡಿಜೆ ಹಳ್ಳಿ ಪ್ರಕರಣದ 80 ಆರೋಪಿಗಳು, ಹುಲಿಹೈದರದ ಗಲಭೆ, ಕೊಲೆ ಪ್ರಕರಣರ ಆರೋಪಿಗಳು, ರೇಪಿಸ್ಟ್ ಉಮೇಶ್ ರೆಡ್ಡಿ, ಡೆಡ್ಲಿ ಸೋಮ, ಸಿಗ್ಲಿ ಬಸ್ಯಾ, ನಟೋರಿಯಸ್ ರೌಡಿ ಬಚ್ಚಾಖಾನ್ ಸೇರಿ ಹಲವು ಕುಖ್ಯಾತಿ ಪಡೆದ ರೌಡಿಗಳು ಈ ಬಳ್ಳಾರಿ ಜೈಲಿನಲ್ಲಿ ಇದ್ದವರು. ಸದ್ಯ ಬಳ್ಳಾರಿ ಜೈಲಿನಲ್ಲಿ 385 ಕೈದಿಗಳಿದ್ದಾರೆ. ದರ್ಶನ್ ಅವರನ್ನು ಈ ಜೈಲಿಗೆ ಕಳುಹಿಸುವ ಸಿದ್ದತೆ ನಡೆಯುತ್ತಿದೆ.