ಹೊಳಲ್ಕೆರೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ಯಾರದ್ದು ? ಎಸ್.ಪಿ. ಹೇಳಿದ್ದೇನು ?
ಸುದ್ದಿಒನ್, ಚಿತ್ರದುರ್ಗ, ನವೆಂಬರ್.30 : ನಿನ್ನೆ ರಾತ್ರಿ ಮಲ್ಲಾಡಿಹಳ್ಳಿ ಬಳಿ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಹಣವನ್ನು ಹೊಳಲ್ಕೆರೆ ಪೊಲೀಸರು ವಶಕ್ಕೆ ಪಡೆದಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು (ಗುರುವಾರ) ನಗರದ ಎಸ್.ಪಿ. ಕಚೇರಿಯಲ್ಲಿ ಎಸ್.ಪಿ. ಧರ್ಮೇಂದ್ರಕುಮಾರ್ ಮೀನಾ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಪೊಲೀಸ್ ಕಂಟ್ರೋಲ್ ರೂಂಗೆ ಬಂದ ಖಚಿತವಾಗಿ ಮಾಹಿತಿ ಮೇರೆಗೆ ಜಿಲ್ಲೆಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳು ಮತ್ತು ಚೆಕ್ ಪೋಸ್ಟ್ ಗಳಿಗೆ ಮಾಹಿತಿ ನೀಡಲಾಗಿತ್ತು. ಯಾವುದೋ ಅಪರಿಚಿತ ಬಿಳಿ ಬಣ್ಣದ ಇನ್ನೋವಾ ಕಾರಿನಲ್ಲಿ ದೊಡ್ಡ ಮೊತ್ತದ ಹಣವನ್ನು ಸಾಗಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿಸಲಾಗಿತ್ತು.
ಇದರಂತೆಯೇ ಹೊಳಲ್ಕೆರೆ ವ್ಯಾಪ್ತಿಯ ದುಮ್ಮಿ ಬಳಿ ಬೆಳಿಗ್ಗೆ ಸುಮಾರು 11 ಗಂಟೆಗೆ ವಾಹನವನ್ನು ಪರಿಶೀಲಿಸಿದಾಗ ಹಣ ಇರುವುದು ತಿಳಿದು ಬಂದಿದೆ. ಕೂಡಲೇ ಹೊಳಲ್ಕೆರೆ ಪೊಲೀಸ್ ಠಾಣೆಗೆ ಕರೆತಂದು ವಿಡಿಯೋಗ್ರಾಫ್ ಮೂಲಕ ಹಣವನ್ನು ಎಣಿಕೆ ಮಾಡಿದಾಗ ಒಟ್ಟು ರೂ. 7,99,96, 000/- ಹಣ ಪತ್ತೆಯಾಗಿದೆ. ನಂತರ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ವಾಹನದಲ್ಲಿದ್ದ ಹರೀಶ್ ಮತ್ತು ಸಚಿನ್ ಇಬ್ಬರು ಇದ್ದರು. ಅವರನ್ನು ವಿಚಾರಿಸಿದಾಗ ಈ ಹಣವನ್ನು ಶಿವಮೊಗ್ಗದ ಮಲ್ನಾಡ್ ಟ್ರೇಡರ್ಸ್ ನವರು ಅಡಕೆಯನ್ನು ಖರೀದಿಸಲು ಹಣವನ್ನು ನೀಡಿದ್ದರು. ಅಡಕೆಯನ್ನು ಖರೀದಿಸದೇ ಇರುವುದರಿಂದ ಹಣವನ್ನು ವಾಪಾಸು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾರೆ. ಈ ಹಣಕ್ಕೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.
ದೊಡ್ಡ ಮೊತ್ತದ ಹಣದ ವಿಚಾರವಾಗಿರುವುದರಿಂದ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೂ ಈ ಮಾಹಿತಿಯನ್ನು ನೀಡಿದ್ದೇವೆ. ಪ್ರಸ್ತುತ ಈ ಹಣವನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್.ಪಿ. ಧರ್ಮೇಂದ್ರಕುಮಾರ್ ಮೀನಾ ಅವರು ತಿಳಿಸಿದ್ದಾರೆ.