ಸಚಿವ ಪ್ರಿಯಾಂಕ ಖರ್ಗೆಯವರಿಗೆ ಇಲಾಖೆಯ ನೌಕರರ ಬೇಡಿಕೆಗಳ ಬಗ್ಗೆ ಏನು ಗೊತ್ತು ? ಕೆ.ಎಸ್. ನವೀನ್
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 10 : ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಅಧಿವೇಶನದಲ್ಲಿ ಒಂದು ದಿನ ಪೂರ್ತಿ ನಿಮ್ಮ ಸಮಸ್ಯೆಗಳದ್ದೆ ಚರ್ಚೆಯಾಗಬೇಕೆಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವುದಾಗಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವವರಿಗೆ ಭರವಸೆ ನೀಡಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಜಿಲ್ಲಾ ಸಮಿತಿಯಿಂದ ಜಿಲ್ಲಾ ಪಂಚಾಯಿತಿ ಎದುರು ಏಳು ದಿನಗಳಿಂದ ಅನಿರ್ಧಿಷ್ಠಾವಧಿ ಧರಣಿ ನಡೆಸುತ್ತಿರುವವರನ್ನು ಕುರಿತು ಮಾತನಾಡಿದ ಕೆ.ಎಸ್.ನವೀನ್ ನಿಮ್ಮ ಎಲ್ಲಾ ಬೇಡಿಕೆಗಳು ನ್ಯಾಯಯುತವಾಗಿದೆ. ಅಸಂಬದ್ದವಾಗಿಲ್ಲ. ಗ್ರಾಮ ಪಂಚಾಯಿತಿಗಳನ್ನು ಪ್ರಜಾಪ್ರಭುತ್ವದ ಬೇರು ಎನ್ನಬೇಕು. ದೆಹಲಿಯಲ್ಲಿ ಪಾರ್ಲಿಮೆಂಟ್ ನಿಂತಿರುವುದೇ ಗ್ರಾಮ ಪಂಚಾಯಿತಿಗಳಿಂದ ನಿಮ್ಮ ಸಮಸ್ಯೆಗಳ ಕುರಿತು ಸದನದಲ್ಲಿ ಹೆಚ್ಚು ಚರ್ಚೆ ಮಾಡುತ್ತೇನೆ. ಈಗಾಗಲೆ ಪಂಚಾಯತ್‍ರಾಜ್ ಸಚಿವ ಮತ್ತು ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ. ಆರ್.ಡಿ.ಪಿ.ಆರ್.ಕಮಿಟಿಯಲ್ಲಿ ಇಪ್ಪತ್ತು ಶಾಸಕರುಗಳಿದ್ದೇವೆ. ಪ್ರತಿ ವಾರ ಸದನದಲ್ಲಿ ಚರ್ಚೆಯಾಗುತ್ತದೆ. ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ ಖರ್ಗೆ ಒಮ್ಮೆಯೂ ಗ್ರಾಮೀಣ ಭಾಗಕ್ಕೆ ಹೋಗಿಲ್ಲ. ಅಂತಹವರಿಗೆ ನಿಮ್ಮ ಬೇಡಿಕೆಗಳ ಬಗ್ಗೆ ಏನು ಗೊತ್ತು ಎಂದು ಖಾರವಾಗಿ ಪ್ರಶ್ನಿಸಿದರು.?
ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಒಂದು ದಿನ ಪೂರ್ತಿ ನಿಮ್ಮಗಳ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು. ಆದಾಯವಿಲ್ಲದೆ ಗ್ರಾಮ ಪಂಚಾಯಿತಿಗಳನ್ನು ನಡೆಸುವುದು ಹೇಗೆ ? ಐದನೇ ಹಣಕಾಸು ಆಯೋಗಕ್ಕೆ ಸಲಹೆ ನೀಡಿದ್ದೇನೆ. ಒಂದು ಕೋಟಿ ರು.ಅನುದಾನವನ್ನು ಮೊದಲು ಗ್ರಾಮ ಪಂಚಾಯಿತಿಗಳಿಗೆ ಕೊಡಬೇಕು. ನಿಮ್ಮ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡು ಮುಖ್ಯಮಂತ್ರಿಗಳ ಬಳಿ ನಿಯೋಗ ಹೋಗೋಣ ಎಂದು ಕೆ.ಎಸ್.ನವೀನ್ ಹೇಳಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ ನಿಮ್ಮ ಬೇಡಿಕೆಗಳ ಕುರಿತು ಒಂದೆರಡು ದಿನಗಳ ಕಾಲ ಸದನದಲ್ಲಿ ಚರ್ಚೆಯಾದಾಗ ಮಾತ್ರ ರಾಜ್ಯ ಸರ್ಕಾರಕ್ಕೆ ನಿಮ್ಮ ಸಮಸ್ಯೆಗಳು ಅರಿವಿಗೆ ಬರುತ್ತದೆ. ಬಿಜೆಪಿ.ಯಿಂದ ಪ್ರಮುಖವಾಗಿ ಚರ್ಚೆಯಾಗಬೇಕು. ವಿಧಾನಪರಿಷತ್‍ನಲ್ಲಿ 25 ಕ್ಕೂ ಹೆಚ್ಚು ಶಾಸಕರುಗಳು ಗ್ರಾಮ ಪಂಚಾಯಿತಿ ಸದಸ್ಯರುಗಳಿಂದ ಆಯ್ಕೆಯಾದವರು. ಅವರಿಗೆ ನಿಮ್ಮ ಸಮಸ್ಯೆಗಳು ಏನೆಂಬುದು ಚೆನ್ನಾಗಿ ಗೊತ್ತಿದೆ. ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ ಖರ್ಗೆ ಬಿಷಪ್‍ಕಾಟನ್ ಶಾಲೆಯಲ್ಲಿ ಓದಿದವರು ಅಪ್ಪಿತಪ್ಪಿಯೂ ಹಳ್ಳಿಗಳ ಕಡೆ ತಿರುಗಾಡಿಲ್ಲ. ಹಾಗಾಗಿ ಗ್ರಾಮ ಪಂಚಾಯಿತಿ ನೌಕರರು ಹಾಗೂ ಪಿಡಿಓ.ಗಳು ಅನುಭವಿಸುತ್ತಿರುವ ತೊಂದರೆಗಳೇನೆಂಬುದು ಗೊತ್ತಿಲ್ಲ. ನಿಮ್ಮ ಹೋರಾಟದ ಜೊತೆ ಸದಾ ನಾವುಗಳಿರುತ್ತೇವೆಂದು ಭರವಸೆ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ ಸೇರಿದಂತೆ ಪಿ.ಡಿ.ಓ.ಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳ ಒಕ್ಕೂಟ ಜಿಲ್ಲಾ ಸಮಿತಿಯವರು ಧರಣಿಯಲ್ಲಿ ಭಾಗವಹಿಸಿದ್ದರು.