For the best experience, open
https://m.suddione.com
on your mobile browser.
Advertisement

ನಮ್ಮಲ್ಲಿನ ಗುಣಗಳನ್ನು ಪರಿವರ್ತನೆಗೊಳಿಸಿಕೊಂಡಾಗ ಮಾತ್ರ ನಾವು ರಾಮನಾಗಲೂ ಸಾಧ್ಯ : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

02:08 PM Apr 17, 2024 IST | suddionenews
ನಮ್ಮಲ್ಲಿನ ಗುಣಗಳನ್ನು ಪರಿವರ್ತನೆಗೊಳಿಸಿಕೊಂಡಾಗ ಮಾತ್ರ ನಾವು ರಾಮನಾಗಲೂ ಸಾಧ್ಯ   ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಏ. 17 : ನಮ್ಮಲ್ಲಿನ ಗುಣಗಳನ್ನು ಪರಿವರ್ತನೆಗೊಳಿಸಿಕೊಂಡಾಗ ಮಾತ್ರ ನಾವು ರಾಮನಾಗಲೂ ಸಾಧ್ಯ. ನಮ್ಮಲ್ಲಿನ ಕೆಟ್ಟ ಗುಣಗಳನ್ನು ನಾಶಮಾಡಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡರೆ ನಾವು ಕೂಡ ರಾಮನ ಸ್ವಭಾವವನ್ನು ಹೊಂದಬಹುದು ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

Advertisement

ನಗರದ ಭೋವಿ ವಿದ್ಯಾರ್ಥಿನಿಲಯದ ಆವರಣದಲ್ಲಿರುವ ರಾಮ ಮಂದಿರದಲ್ಲಿ ಹಮ್ಮಿಕೊಂಡ ರಾಮನವಮಿ ಸಮಾರಂಭದಲ್ಲಿ ಹಿಂದುಳಿದ ದಲಿತ ಮಠಾಧೀಶರು ಭಾಗವಹಿಸಿದ್ದು ಇದರಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಈ ಯುಗವು 'ಪರಿವರ್ತನೆಯ ಯುಗ'. ಎಲ್ಲರಲ್ಲೂ ರಾಮನಂತಹ ಗುಣವಿದೆ, ಎಲ್ಲರಲ್ಲೂ ರಾವಣನಂತಹ ಗುಣವಿದೆ. ನಮ್ಮಲ್ಲಿನ ಗುಣಗಳನ್ನು ಪರಿವರ್ತನೆಗೊಳಿಸಿಕೊಂಡಾಗ ಮಾತ್ರ ನಾವು ರಾಮನಾಗಲೂ ಸಾಧ್ಯ. ನಮ್ಮಲ್ಲಿನ ಕೆಟ್ಟ ಗುಣಗಳನ್ನು ನಾಶಮಾಡಿ ಉತ್ತಮ ಗುಣಗಳನ್ನು ಅಳವಡಿಸಿಕೊಂಡರೆ ನಾವು ಕೂಡ ರಾಮನ ಸ್ವಭಾವವನ್ನು ಹೊಂದಬಹುದು. ಬದಲಾಗಿ, ದುಶ್ಚಟಗಳನ್ನೇ ರೂಢಿಸಿಕೊಂಡರೆ ರಾವಣನಂತೆ ಸ್ವಭಾವವನ್ನು ಹೊಂದಬೇಕಾಗುತ್ತದೆ. ಇಂದಿನಿಂದಲೇ ನಾವು ನಮ್ಮ ಸ್ವಭಾವವನ್ನು ಬದಲಾಯಿಸಿಕೊಳ್ಳೊಣ. ಎಲ್ಲರೂ ಸಭ್ಯರೇ, ಎಲ್ಲರಲ್ಲೂ ಸದ್ಗುಣಗಳಿವೆ, ಅವುಗಳನ್ನು ಅರಿತು, ರೂಢಿಸಿಕೊಂಡು ಮುಂದೆ ಸಾಗೋಣ ಎಂದು ತಿಳಿಸಿದರು.

ಕುಂಚಿಟಿಗ ಗುರುಪೀಠದ ಶ್ರೀ ಶಾಂತವೀರ ಸ್ವಾಮೀಜಿ ಮಾತನಾಡಿ, ರಾಮ ಭಾರತದ ನಂಬಿಕೆ, ರಾಮ ಭಾರತದ ಆಧಾರ, ರಾಮ ಭಾರತದ ಕಲ್ಪನೆ, ರಾಮ ಭಾರತದ ಕಾನೂನು, ರಾಮ ಭಾರತದ ಚೇತನ, ರಾಮ ಭಾರತದ ಚಿಂತನೆ, ರಾಮ ಭಾರತದ ಪ್ರತಿಷ್ಠೆ, ರಾಮ ಭಾರತದ ಕೀರ್ತಿ, ರಾಮ ಪ್ರಭಾವಿ, ರಾಮ ಪರಿಣಾಮಕಾರಿ, ರಾಮನೇ ನಿಷ್ಠೆ , ರಾಮನೇ ನೀತಿ, ರಾಮ ಶಾಶ್ವತ , ರಾಮ ನಿತ್ಯನಿರಂತರ, ರಾಮನೇ ಭವಿಷ್ಯ, ರಾಮ ಸರ್ವವ್ಯಾಪಿ, ರಾಮನೇ ವಿಶ್ವ, ರಾಮನೇ ವಿಶ್ವಾಸ ಎಂದು ಸ್ವಾಮೀಜಿ ಬಣ್ಣಿಸಿದರು.

ಮಡಿವಾಳ ಗುರುಪೀಠದ ಶ್ರೀ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ ರಾಮ ತನ್ನ ಸಂಬಂಧಗಳು, ಆಪ್ತರು, ಪ್ರಜೆಗಳು, ಸ್ನೇಹಿತರು ಹಾಗೂ ವಿರೋಧಿಗಳನ್ನೆಲ್ಲಾ ಧರ್ಮದ ದೃಷ್ಟಿಯಿಂದ ನೋಡುತ್ತಿದ್ದ. ತತ್ವಪ್ರಧಾನವಾಗಿ ನೋಡುವ ದೃಷ್ಟಿಯ ನಿರ್ಲಿಪ್ತತೆ, ರಾಮನಲ್ಲಿ ಕಾಣಬಹುದು. ಹೀಗಾಗಿ ತನ್ನ ಜೀವನದ ಅವಿಭಾಜ್ಯ ಅಂಗವಾಗಿದ್ದ ಸೀತೆ ಹಾಗೂ ಲಕ್ಷಣನ ಸಂಬಂಧವನ್ನೂ ಕೂಡ ಧರ್ಮದ ನೆಲೆಯಿಂದ ಕಡಿದುಕೊಂಡನು. ಒಂದು ಆದರ್ಶವನ್ನಿಟ್ಟುಕೊಂಡು ಬಾಳಿದವನು ಶ್ರೀರಾಮ.

ಹಡಪದ ಗುರುಪೀಠದ ಶ್ರೀ ಅನ್ನದಾನಿ ಭಾರತೀ ಅಪ್ಪಣ್ಣ ಸ್ವಾಮೀಜಿ ಮಾತನಾಡಿ ಪ್ರಜೆಗಳ ವರ್ಣನೆಯಲ್ಲಿ ಚಿತ್ರಿಸಲ್ಪಟ್ಟ ರಾಮನ ಗುಣಗಳು, ಸ್ವಯಂ ರಾಮನಲ್ಲಿಯೇ ಇತ್ತು. ಲೋಕ ಒಂದು ವ್ಯಕ್ತಿತ್ವವನ್ನು ನಿರೀಕ್ಷೆ ಮಾಡುತ್ತಿದ್ದಾಗ, ಆ ಎತ್ತರಕ್ಕೆ ಮುಟ್ಟಬೇಕಾದ ಅನಿವಾರ್ಯತೆಯನ್ನು ನಮಗೆ ನಾವು ಹೇರಿಕೊಳ್ಳಬೇಕಾಗುತ್ತದೆ. ಹೀಗಾಗಿ ರಾಮ, ಆ ಎತ್ತರವನ್ನು ಏರಲು ಬಳಸಿದ್ದು ಧರ್ಮವೆಂಬ ಏಣಿಯನ್ನು, ನೀತಿಯೆಂಬ ದಾರಿಯನ್ನು. ಈ ಹಾದಿಯನ್ನು ಅನುಸರಿಸಿ ಬಂದಿದ್ದರಿಂದ, ಪ್ರಜೆಗಳು ಬಯಸಿದ ರಾಮ ಸಿದ್ಧನಾದ. ಹೀಗಾಗಿ ಯುಗ ಯುಗಗಳಲ್ಲಿ ವಿರಳವಾಗಿ ಕಾಣುವ, ಒಂದು ವಿಶಿಷ್ಟ ವ್ಯಕ್ತಿತ್ವ ರಾಮನಾಗಿ ನಮಗೆ ಕಂಡಿದೆ ಎಂದರು.


ಕುಂಬಾರ ಗುರುಪೀಠದ ಶ್ರೀ ಬಸವ ಕುಂಬಾರ ಗುಂಡಯ್ಯ ಸ್ವಾಮೀಜಿ, ಶಿವಶಕ್ತಿ ಗುರುಪೀಠದ ಶ್ರೀ ಬಸವಪ್ರಸಾದ ಸ್ವಾಮೀಜಿ, ಪಾರಮಾರ್ಥಿಕ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೊರಟಗೆರೆ ಅನ್ನಪೂರ್ಣೇಶ್ವರಿ ಮಠದ ಶ್ರೀ ಬಸವ ಮಹಾಲಿಂಗ ಸ್ವಾಮೀಜಿ, ಬಸವಕಲ್ಯಾಣದ ಶ್ರೀ ಸತ್ಯಕ್ಕ ತಾಯಿ, ನಗರಸಭೆ ನಾಮನಿರ್ದೇಶಿದ ಸದಸ್ಯ ತಿಮ್ಮಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Tags :
Advertisement