ಚಿತ್ರದುರ್ಗದ 8 ಕೆರೆಗಳಿಗೆ ನೀರು : ಶಾಸಕ ವೀರೇಂದ್ರ ಪಪ್ಪಿ ಮನವಿಗೆ ಸ್ಪಂದಿಸಿದ ಡಿಸಿಎಂ ಡಿಕೆ ಶಿವಕುಮಾರ್
ಸುದ್ದಿಒನ್, ಚಿತ್ರದುರ್ಗ, ಜುಲೈ . 28 : ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಬರುವ ಚಿತ್ರದುರ್ಗ ತಾಲ್ಲೂಕಿನಲ್ಲಿರುವ ಹೆಚ್ಚುವರಿ 8 ಕೆರೆಗಳಿಗೆ ನೀರು ಹರಿಸಲು ಆದೇಶ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಶಾಸಕ ಕೆ. ಸಿ. ವೀರೇಂದ್ರ ಪಪ್ಪಿ ಮನವಿ ಮಾಡಿದರು.
ಇತ್ತೀಚೆಗಷ್ಟೇ ಬೆಂಗಳೂರಿನ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಜೊತೆ ನಡೆದ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಸರ್ಕಾರದ ಯಾವುದೇ ಬಂದರೂ ಭದ್ರಾ ಮೇಲ್ದಂಡೆ ಯೋಜನೆಯ ಅಡಿಯಲ್ಲಿ ಚಿತ್ರದುರ್ಗದ ಹೆಸರು ಕೇಳಿ ಬರುತ್ತಿದೆ ಆದರೆ ಚಿತ್ರದುರ್ಗ ಕ್ಷೇತ್ರಕ್ಕೆ ಮಾತ್ರ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ ಎಂದರು. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ವಿಚಾರದಲ್ಲಿ ಚಿತ್ರದುರ್ಗ ತಾಲ್ಲೂಕಿಗೆ ತಾರತಮ್ಯ ಮಾಡಿರುವುದರಿಂದ ಅನ್ಯಾಯವಾಗಿದೆ. ಇದನ್ನು ಮೊದಲು ಸರಿಪಡಿಸಬೇಕು ಎಂದು ಸಭೆಯಲ್ಲಿ ಆಗ್ರಹ ಮಾಡಿದರು.
ಈ ಹಿಂದೆ ಕ್ಷೇತ್ರ ವ್ಯಾಪ್ತಿಯಲ್ಲಿ 5 ಕೆರೆಗಳಿಗೆ ನೀರು ತುಂಬಿಸಲು ಆದೇಶವಾಗಿತ್ತು. ಆದರೆ ಉಳಿದ 8 ಕೆರೆಗಳಿಗೆ ನೀರು ಕೊಡದಿದ್ದರೆ ಕೆರೆಗಳ ಭಾಗದ ಜನರು ಸಮಸ್ಯೆಯಿಂದ ಬಳಲಿದ್ದಾರೆ. ಆದ್ದರಿಂದ ಕೂಡಲೇ 8 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕು. ಈ 8 ಕೆರೆಗಳಿಗೆ ನೀರು ಹರಿಸಿದ್ದಲ್ಲಿ ಸಾವಿರಾರು ರೈತರ ಕೃಷಿ ಚಟುವಟಿಕೆಗಳು ಸೇರಿದಂತೆ ಅವರ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.
ಶಾಸಕರ ಮಾತಿಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 8 ಕೆರೆಗಳಿಗೆ ನೀರು ತುಂಬಿಸಲು ಡಿಪಿಆರ್ ಸಿದ್ಧಗೊಳಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸುವುದರ ಜೊತೆಗೆ ಶೀಘ್ರ ನೀರು ತುಂಬಿಸಲು ಆದೇಶ ಮಾಡಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ಸೇರಿದಂತೆ ವಿಶ್ವೇಶ್ವರಯ್ಯ ಜಲನಿಗಮ ವ್ಯಾಪ್ತಿಗೆ ಬರುವ ಶಾಸಕರು ಅಧಿಕಾರಿಗಳು ಹಾಜರಿದ್ದರು.