ಸಾರ್ವಜನಿಕ ಆಸ್ತಿ ಪಾಸ್ತಿಗಳ ಮೇಲೆ ವಕ್ಫ್ ಹಿಡಿತ ಸಾಧಿಸುವುದನ್ನು ತಡೆಯಬೇಕು : ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಆಗ್ರಹ
ಸುದ್ದಿಒನ್, ಚಿತ್ರದುರ್ಗ, ನವೆಂಬರ್. 03 : ರಾಜ್ಯದಾದ್ಯಂತ ವಕ್ಫ್ ಆಸ್ತಿ ಸಂಬಂಧಿಸಿದ ಗದ್ದಲಗಳು ಮಾರ್ದನಿಸಿದ್ದು ರೈತರು ಒಳಗೊಂಡಂತೆ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸೂಕ್ತ ಕಾನೂನು ಜಾರಿಗೆ ತರಬೇಕು. ಸಾರ್ವಜನಿಕ ಆಸ್ತಿ ಪಾಸ್ತಿಗಳ ಮೇಲೆ ವಕ್ಫ್ ಹಿಡಿತ ಸಾಧಿಸುವುದ ತಡೆಯಬೇಕು ಎಂದು ಶಿವಶರಣ ಮಾದಾರಚೆನ್ನಯ್ಯ ಗುರುಪೀಠದ
ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ ಆಗ್ರಹಿಸಿದರು.
ಭಾನುವಾರ ಮಾಧ್ಯಮ ಪ್ರಕಟಣೆ ನೀಡಿದ ಶ್ರೀಗಳು, ವಕ್ಫ್ ಅಸ್ತಿ , ರೈತರ , ಶ್ರೀಸಾಮಾನ್ಯರ ಭೂಮಿಯ ಅತಿಕ್ರಮಣದ ವಿವರಗಳು ಪ್ರತಿನಿತ್ಯ ಎಂಬಂತೆ ಹಲವು ಜಿಲ್ಲೆಗಳಿಂದ ಹೊರ ಬರುತ್ತಿದೆ. ವಿಜಯಪುರ , ಹಾವೇರಿ , ಬಾಗಲಕೋಟೆ , ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು , ಶ್ರೀಸಾಮಾನ್ಯರು ಇದ್ದಾರೆ. ಸಂಬಂಧಿತರ ಸಚಿವರು ವಕ್ಫ್ ಆಸ್ತಿ ಅತಿಕ್ರಮಣದ ನೆಪದಲ್ಲಿ ರೈತರಿಗೆ ನೋಟಿಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿರುವುದು ಸಮಸ್ಯೆ ಉಲ್ಭಣಿಸಲು ಕಾರಣವಾಗಿದೆ .
ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು . ಸಮಗ್ರ ತನಿಖೆ ನಡೆಸಬೇಕು. ಸಂಪುಟದಲ್ಲಿಸೂಕ್ತ ತೀರ್ಮಾನ ಕೈಗೊಳ್ಳುವುದರ ಮೂಲಕ ವಕ್ಫ್ ಆಕ್ರಮಣ ನೀತಿಗೆ ತಡೆ ನೀಡಬೇಕು. ಅಗತ್ಯ ಬಂದಲ್ಲಿ 1975 ರ ಗೆಜೆಟ್ ನೋಟಿಫಿಕೇಷನ್ ಹಿಂದಕ್ಕೆ ಪಡೆಯಬೇಕು.
ಸಿಎಂ ಸಿದ್ದರಾಮಯ್ಯ ಹಾಲಿ ರೈತರಿಗೆ ನೀಡಿರುವ ನೋಟೀಸು ವಾಪಸ್ಸು ಪಡೆದಿರಬಹುದು. ಇದು ತಾತ್ಕಾಲಿಕ ಕ್ರಮವಾಗುತ್ತದೆ. ಮುಂದೆ ಬರುವ ಸರ್ಕಾರಗಳು ಇದೇ ನೀತಿ ಅನುಸರಿಸುತ್ತಾರೆಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಹಾಗಾಗಿ ಇದಕ್ಕೊಂದು ಶಾಶ್ವತ ಪರಿಹಾರ ಈಗಲೇ ಕಂಡು ಹಿಡಿಯಬೇಕು. ಶ್ರೀ ಸಾಮಾನ್ಯರ ಆತಂಕವನ್ನು ದೂರ ಮಾಡುವತ್ತ ರಾಜ್ಯ ಸರ್ಕಾರ ಕಟ್ಟುನಿಟ್ಟಾದ , ಸ್ಪಷ್ಟವಾದ ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.