ಲೋಕಸಭಾ ಕ್ಷೇತ್ರಾದ್ಯಂತ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿಗೆ ಮತದಾರರು ಒಲವು : ಕುಂಚಿನಗಹಾಳ್ ಮಹಲಿಂಗಪ್ಪ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 09 : ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಥಳೀಯ ಅಭ್ಯರ್ಥಿ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿಗೆ ಕಾಂಗ್ರೆಸ್ ಟಿಕೇಟ್ ನೀಡುವಂತೆ ನೂರಾರು ಬೆಂಬಲಿಗರು ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್‍ರವರಿಗೆ ಮನವಿ ಸಲ್ಲಿಸಿದರು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಬೆಂಬಲಿಗರು ಪ್ರತಿ ಚುನಾವಣೆಯಲ್ಲಿಯೂ ಹೊರಗಿನವರನ್ನು ಕರೆ ತಂದು ಇಲ್ಲಿಂದ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಸ್ಥಳೀಯರನ್ನು ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಪಕ್ಷದ ವರಿಷ್ಠರು ನಮ್ಮ ಮನವಿಯನ್ನು ಪರಿಗಣಿಸಬೇಕೆಂದು ಒತ್ತಾಯಿಸಿದರು.
ಕುಂಚಿನಗಹಾಳ್ ಮಹಲಿಂಗಪ್ಪ ಮಾತನಾಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಾದ್ಯಂತ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿಗೆ ಮತದಾರರು ಒಲವು ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಟಿಕೇಟ್ ನೀಡಿದರೆ ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ. ಸ್ಥಳೀಯ ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿನ ಸಮಸ್ಯೆಗಳ ಅರಿವಿರುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಈ ಬಾರಿಯ ಚುನಾವಣೆಯಲ್ಲಿ ಹೊರಗಿನವರಿಗೆ ಟಿಕೇಟ್ ನೀಡಬಾರದೆಂದು ಆಗ್ರಹಿಸಿದರು.
ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಬೆಂಬಲಿಗರಿಂದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ನಿಮ್ಮ ಅಹವಾಲನ್ನು ಕೆ.ಪಿ.ಸಿ.ಸಿ. ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರುಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಸ್ಲಂ ಜನಾಂದೋಲನ ಕರ್ನಾಟಕದ ಕೆ.ರಾಜಣ್ಣ, ನ್ಯಾಯವಾದಿ ಹರೀಶ್ ಎನ್. ಅಶ್ವಕ್‍ಆಲಿ, ಹತಾವುಲ್ಲಾ, ಬಿ.ರಾಜಣ್ಣ, ಇರ್ಫಾನ್, ಕೆ.ರುದ್ರಮುನಿ, ಬಾಗೇನಾಳ್ ಓಬಳೇಶ್, ಮಲ್ಲಪ್ಪ, ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಫರಾಹತ್, ಅಲ್ಪಸಂಖ್ಯಾತ ವಿಭಾಗದ ತಾಲ್ಲೂಕು ಅಧ್ಯಕ್ಷ ಸಿರಾಜ್‍ವುಲ್ಲಾ, ಚಿದಾನಂದಮೂರ್ತಿ ಇನ್ನು ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.