ವಿಕಸಿತ ಭಾರತ ಸಂಕಲ್ಪ ಯಾತ್ರೆ: ಕೇಂದ್ರದ ಯೋಜನೆಗಳು ಮನೆ ಬಾಗಿಲಿಗೆ : ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ಚಿತ್ರದುರ್ಗ. ಡಿ.9: ಕೇಂದ್ರ ಸರಕಾರದ ಅನೇಕ ಯೋಜನೆಗಳನ್ನು ಮನೆ ಮನೆಗೆ ತಲುಪಿಸಬೇಕು ಎಂಬುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವರು ಹಾಗೂ ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.
ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಭಿಯಾನದ ಅಂಗವಾಗಿ ಚಿತ್ರದುರ್ಗ ತಾಲ್ಲೂಕಿನ ಚಿಕ್ಕಬೆನ್ನೂರು ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಭಾಷಣ ವೀಕ್ಷಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ಯೋಜನೆಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ. ದೇಶದ ಎಲ್ಲಾ ನಾಗರೀಕರಿಗೂ ಕಾರ್ಯಕ್ರಮ ಕೊಡಬೇಕು ಎಂಬುದು ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಉದ್ದೇಶ ಎಂದು ಹೇಳಿದರು.
ದೇಶದಲ್ಲಿ ಒಂಬತ್ತು ವರ್ಷದಲ್ಲಿ ೭೪ ಏರ್‌ಪೋರ್ಟ್‌ಗಳನ್ನು ಪ್ರಾರಂಭಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳು, ಐಐಟಿ, ಮೆಡಿಕಲ್ ಕಾಲೇಜುಗಳು ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ಅನುಷ್ಟಾನ ಮಾಡಲಾಗುತ್ತಿದೆ. ಈ ದೇಶದ ಬಡವರ ಸಂಕಷ್ಟ, ಈ ದೇಶದ ರೈತರ ಸಮಸ್ಯೆಗಳನ್ನು ಅರಿತುಕೊಂಡು ಪಿಎಂ ಕೃಷಿ ಸಮ್ಮಾನ್, ಫಸಲ್ ಬಿಮಾ, ಗೊಬ್ಬರದ ಸಬ್ಸಿಡಿ, ಈ ದೇಶದ ಪ್ರತಿ ಮನೆಗೂ ಶೌಚಾಲಯ, ಪಿಎಂ ಆವಾಜ್ ಯೋಜನೆ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ ಎಂದರು.
ಬಳಿಕ ಸಚಿವರು ಪ್ರಧಾನಿ ನರೇಂದ್ರ ಮೋದಿಯವರ ವರ್ಚುವಲ್ ಭಾಷಣ ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಕೇಂದ್ರ ಸರಕಾರ ನಾನಾ ಯೋಜನೆಗಳ ಅರ್ಹ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಆದೇಶ ಪತ್ರ ವಿತರಿಸಲಾಯಿತು. ಆರೋಗ್ಯ ಇಲಾಖೆಯಿಂದ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬೆನ್ನೂರು ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೇಂದ್ರ ಕಚೇರಿ ಬಳ್ಳಾರಿಯ ಪ್ರಧಾನ ವ್ಯವಸ್ಥಾಪಕಿ ಭಾಗ್ಯರೇಖ, ಬೆಂಗಳೂರು ದೂರದರ್ಶನದ ಕೇಂದ್ರದ ಡಿಡಿಜಿ ಮಾದವರೆಡ್ಡಿ, ಚಿತ್ರದುರ್ಗ ಕೆನರಾ ಬ್ಯಾಂಕಿನ ವ್ಯವಸ್ಥಾಪಕ ವೈ.ಎನ್.ಶಿವಪ್ರಸಾದ್, ಪ್ರಾದೇಶಿಕ ವ್ಯವಸ್ಥಾಪಕ ಹರಿಪ್ರಸಾದ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.