ವೀರ ವನಿತೆ ಒನಕೆ ಓಬವ್ವ ಜಯಂತಿ : ಸ್ತ್ರೀಶಕ್ತಿಯ ಸಂಕೇತ ಓಬವ್ವ ಜನಮಾನಸದಲ್ಲಿ ಅಜರಾಮರ : ಸಚಿವ ಡಿ.ಸುಧಾಕರ್
ಚಿತ್ರದುರ್ಗ. ನ.11: ನಮ್ಮ ಚಿತ್ರದುರ್ಗದ ಒನಕೆ ಓಬವ್ವ ನಿಸ್ವಾರ್ಥದ ನಾಡಪ್ರೇಮ, ನಾಡಪ್ರಭುವಿಗಾಗಿ ಒನಕೆಯನ್ನೇ ಆಯುಧವನ್ನಾಗಿ ಹಿಡಿದು ಶತ್ರುಗಳ ನಿರ್ನಾಮ ಮಾಡಿದ್ದರಿಂದ ಚರಿತ್ರೆಯಲ್ಲಿ ಅಜರಾಮಗಳಾಗಿ, ಸ್ತ್ರೀಶಕ್ತಿಯ ಸಂಕೇತವಾಗಿ ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾಳೆ ಎಂದು ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ನಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ಗ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ವೀರ ವನಿತೆ ಒನಕೆ ಓಬವ್ವ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ನಾಡಿಗೆ ಹಾಗೂ ಸಮಾಜಕ್ಕೆ ಮಹನೀಯರು, ಮಹಿಳೆಯರು ನೀಡಿದ ಕೊಡುಗೆ, ತ್ಯಾಗ, ಬಲಿದಾನ, ಸಾಧನೆಗಳ ಸಾರ್ಥಕ ಸೇವೆ ಗುರುತಿಸಿ ಸರ್ಕಾರದ ನಿಯಮಗಳ ಅಡಿಯಲ್ಲಿ ಈ ಜಯಂತಿ ಆಚರಿಸಲಾಗುತ್ತಿದೆ. ಅಂತಹ ತ್ಯಾಗ, ನಿಷ್ಟೆ, ಧೈರ್ಯದ ತ್ರಿವೇಣಿ ಸಂಗಮದಂತಿರುವ ಐತಿಹಾಸಿಕ ಕೋಟೆನಾಡು ರಕ್ಷಿಸಿದ ಛಲವಾದಿ ಸಮುದಾಯದ ಹೆಮ್ಮೆಯ ಕನ್ನಡತಿ ಒಬವ್ವ ಹಾಗೂ ದುರ್ಗದ ಶಕ್ತಿಯ ಸ್ವರೂಪ ಓನಕೆ ಒಬವ್ವ ಎಂದು ಬಣ್ಣಿಸಿದರು.
ರಾಜವೀರ ಮದಕರಿ ನಾಯಕರ ಆಳ್ವಿಕೆಯ ಕಾಲದಲ್ಲಿ ಚಿತ್ರದುರ್ಗದ ಕೋಟೆಗೆ ಒದಗಿ ಬಂದ ಆಪತ್ತನ್ನು ಓರ್ವ ಸಾಮಾನ್ಯ ಮಹಿಳೆಯಾದ ಓಬವ್ವ ತನ್ನ ಮನೆಯಲ್ಲಿದ್ದ ಓನಕೆಯಿಂದ ಶತ್ರು ಸೈನ್ಯ ಸದೆಬಡಿದು ನಾಡಿನ ಕೋಟೆ ರಕ್ಷಿಸಿ, ಸ್ವಾಮಿ ನಿಷ್ಟೆಗೆ ಹೆಸರುವಾಸಿಯಾದ ಓಬವ್ವ ಕರ್ನಾಟಕದ ಹೆಮ್ಮೆ. ನಮ್ಮ ಕೆಲಸ ನಾವು ಪ್ರಾಮಾಣಿಕವಾಗಿ ಮಾಡಬೇಕು ಎಂಬುದಕ್ಕೆ ಬಹುದೊಡ್ಡ ಸಾಕ್ಷಿ ಪ್ರಜ್ಞೆಯಧ್ಯೋತಕ ಒಬವ್ವ ಎಂದು ಹೇಳಿದರು.
ಯುದ್ದದ ಬಗ್ಗೆ ಯಾವುದೇ ಪರಿವೇ ಇಲ್ಲದಿದ್ದರೂ ಸಮಯ ಪ್ರಜ್ಞೆ ಹಾಗೂ ಧೈರ್ಯದಿಂದ ಹೈದರಾಲಿಯ ಸೈನಿಕರ ವಿರುದ್ದ ಹೋರಾಡಿದ ಓಬವ್ವರ ಆದರ್ಶಗಳು ನಮ್ಮೆಲ್ಲರಿಗೂ ಬೆಳಕಾಗಬೇಕು. ಕರ್ನಾಟಕ ಇತಿಹಾಸದ ಚರಿತ್ರೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ, ಅಬ್ಬಕ್ಕ, ದುರ್ಗದ ರಾಣಿ ಓಬವ್ವನಾಗತಿ ಇವರೆಲ್ಲರೂ ಶತ್ರುಗಳ ವಿರುದ್ಧ ಸೆಣಸಾಡಿದ ವೀರಾಗ್ರಣಿಗಳೇ, ಇಂಥ ವೀರ ವನಿತೆಯರ ಸಾಲಿಗೆ ಓಬವ್ವೆಯು ಸೇರುತ್ತಾಳೆಂಬುದು ಗರ್ವಾಭಿಮಾನದ ಸಂಗತಿ. ಓಬವ್ವೆ ಸಾಮಾನ್ಯ ಹೆಣ್ಣು ಮಗಳಾದರೂ, ತನ್ನ ರಾಜನಿಷ್ಠೆ, ನಾಡಪ್ರೇಮದಿಂದಾಗಿ ದುರ್ಗಕ್ಕಷ್ಟೆ ಅಲ್ಲ, ಕನ್ನಡ ನಾಡಿಗೆ ಹೆಮ್ಮೆಯ ಮನೆಮಗಳಾಗಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಓಬವ್ವ ಒಬ್ಬ ಸಾಮಾನ್ಯ ಮಹಿಳೆಯಾಗಿ, ಕಾವಲುಗಾರನ ಹೆಂಡತಿಯಾಗಿ ಸ್ವಾಮಿನಿಷ್ಠೆ ಹಾಗೂ ಸಮಯಪ್ರಜ್ಞೆಯಿಂದ ಕೋಟೆನಾಡು ದುರ್ಗವನ್ನು ರಕ್ಷಿಸಿ ಉಳಿಸಿಕೊಳ್ಳಲು ಹೋರಾಡಿದ ವೀರ ಮಹಿಳೆ ಒನಕೆ ಓಬವ್ವ. ಇಂತಹ ಅಸಾಮಾನ್ಯ ಮಹಿಳೆಯನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ದುರ್ಗದ ಎಲ್ಲಾ ಸಮುದಾಯದವರು ಸ್ಮರಿಸಬೇಕು ಎಂದರು.
ನಗರದ ಹೊಳಲ್ಕೆರೆ ರಸ್ತೆಯಲ್ಲಿನ ಒನಕೆ ಓಬವ್ವ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಅಗತ್ಯವಿರುವ ಎಲ್ಲ ರೀತಿತಯ ಸಹಕಾರ, ಸೌಲಭ್ಯಗಳನ್ನು ಸರ್ಕಾರಿಂದ ಒದಗಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡಿ, ವೀರ ವನಿತೆ ಒನಕೆ ಓಬವ್ವ ಅವರ ಜೀವನ, ಸಾಹಸ, ಶೌರ್ಯ ಹಾಗೂ ದುರ್ಗದ ಇತಿಹಾಸವನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಪುಟ್ಟಣ್ಣ ಕಣಗಾಲ್ ಎಂದು ತಿಳಿಸಿದರು.
ಪ್ರಸ್ತುತ ದಿನಮಾನಗಳಲ್ಲಿ ತಾಂತ್ರಿಕ ವಿದ್ಯಮಾನಗಳಿಂದ ನಮ್ಮ ಸಂಸ್ಕøತಿ, ಪರಂಪರೆಯನ್ನು ಇಂದಿನ ಯುವ ಜನತೆ ಮರೆಯುತ್ತಿದ್ದು, ಓದುವವರ ಸಂಖ್ಯೆಯೂ ಕ್ಷೀಣಿಸುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಮಹಾಮಾತೆ ವೀರ ವನಿತೆ ಓಬವ್ವಳ ಆದರ್ಶ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ದೇಶ ಹಾಗೂ ನಾಡು ಕಂಡ ವೀರ ಮಹಿಳೆ ಒನಕೆ ಓಬವ್ವ. ಅವರ ಸ್ಥೈರ್ಯ ಮತ್ತು ಧೈರ್ಯ ಇಂದಿನ ಮಹಿಳೆಯರಲ್ಲಿ ಕಾಣಬೇಕಿದೆ. ಈ ನಾಡಿನಲ್ಲಿ ಹುಟ್ಟಿ, ತನ್ನ ಪ್ರಾಣವನ್ನೂ ಲೆಕ್ಕಿಸದೇ ಶತ್ರುಗಳನ್ನು ಸದೆ ಬಡೆದು ಮದಕರಿ ನಾಯಕರಿಗೆ ಗೌರವ ತಂದುಕೊಟ್ಟಂತಹ ಕೀರ್ತಿ ಒನಕೆ ಓಬವ್ವಗೆ ಸಲ್ಲುತ್ತದೆ. ಒಬವ್ವನವರ ಜೀವನ, ಸಾಹಸ ಹಾಗೂ ಧೈರ್ಯ ಇಂದಿನ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಬೇಕು ಎಂದು ಹೇಳಿದರು.
ಒನಕೆ ಓಬವ್ವ ಅವರ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ತಿಪ್ಪೇಸ್ವಾಮಿ ಮತ್ಸಮುದ್ರ, ಓಬವ್ವಳ ಹೆಸರೇ ಒಂದು ರೀತಿಯ ರೋಮಾಂಚಕ. ಅವಳು ಉನ್ನತ ಬದುಕಿಗೆ ಸಾಕ್ಷಿಯಾಗಿರುವ ಸ್ವಾಮಿ ನಿಷ್ಠೆ, ಕರ್ತವ್ಯ ಪ್ರಜ್ಞೆಗೆ ಸಾಕ್ಷಿಯಾಗಿ ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿರುವ ಛಲಗಾತಿ. ಧೈರ್ಯ, ಶೌರ್ಯ ಹಾಗೂ ಸಾಹಸಕ್ಕೆ ಮತ್ತೊಂದು ಹೆಸರೇ ವೀರ ವನಿತೆ ಒನಕೆ ಓಬವ್ವ. ಛಲವಾದಿ ಸಮುದಾಯನ್ನು ಚರಿತ್ರೆಯಲ್ಲಿ ದಾಖಲಾಗುವಂತೆ ಮಾಡಿದ ಮಹಾತಾಯಿ. ಈ ಸಮುದಾಯಕ್ಕೆ ತನ್ನದೇ ಆದ ಇತಿಹಾಸ ಮತ್ತು ಸ್ವರೂಪವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಕೆಡಿಪಿ ಸದಸ್ಯ ನಾಗರಾಜ್, ನಗರಸಭೆ ಮಾಜಿ ಅಧ್ಯಕ್ಷ ನಿರಂಜನ್ ಮೂರ್ತಿ, ಛಲವಾದಿ ಸಮುದಾಯದ ಮುಖಂಡರಾದ ಭಾರ್ಗವಿ ದ್ರಾವಿಡ್, ಆರ್ ನಾಗರಾಜ್, ಶೇಷಪ್ಪ, ಎಸ್.ಎಲ್.ರವಿಕುಮಾರ್, ಸಿ.ಪಿ.ಕೃಷ್ಣಮೂರ್ತಿ ಸೇರಿದಂತೆ ನಗರಸಭೆ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ: ಒನಕೆ ಓಬವ್ವ ಜಯಂತಿ ಅಂಗವಾಗಿ ನಗರದ ಹೊಳಲ್ಕೆರೆ ರಸ್ತೆಯ ಮಾರಮ್ಮನ ದೇವಸ್ಥಾನದ ಸಮೀಪವಿರುವ ಒನಕೆ ಓಬವ್ವನ ದೇವಸ್ಥಾನದ ಮುಂಭಾಗದಲ್ಲಿ ಒನಕೆ ಓಬವ್ವ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು.
ನಗರದ ಹೊಳಲ್ಕೆರೆ ರಸ್ತೆಯ ಒನಕೆ ಓಬವ್ವ ದೇವಸ್ಥಾನದಿಂದ ಆರಂಭವಾದ ಮೆರವಣಿಗೆಯು ವಿವಿಧ ಜಾನಪದ ಕಲಾತಂಡಗಳೊಂದಿಗೆ, ನೀಲಕಂಠೇಶ್ವರ ದೇವಸ್ಥಾನ, ಗಾಂಧೀವೃತ್ತ, ಪ್ರವಾಸಿ ಮಂದಿರ ಮಾರ್ಗದವಾಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತ, ಅಂಬೇಡ್ಕರ್ ವೃತ್ತ, ಮದಕರಿ ನಾಯಕ ವೃತ್ತದ ಮೂಲಕ ತರಾಸು ರಂಗಮಂದಿರದವರೆಗೂ ಭವ್ಯ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಇದ್ದರು.